ತಮಿಳಿನ ಸ್ಟಾರ್ ನಟ ಕಾರ್ತಿ ನಟಿಸುತ್ತಿದ್ದ ಸಿನಿಮಾದ ಸೆಟ್ನಲ್ಲಿ ಅವಘಡ ಸಂಭವಿಸಿದ್ದು ಸ್ಟಂಟ್ಮ್ಯಾನ್ ಒಬ್ಬರ ಸಾವಾಗಿದೆ. ಕಾರ್ತಿ ನಟನೆಯ ‘ಸರ್ದಾರ್ 2’ ಸಿನಿಮಾದ ಶೂಟಿಂಗ್ ಚೆನ್ನೈನ ಸಾಲಿಗ್ರಾಮಂನ ಪ್ರಸಾದ್ ಸ್ಟುಡಿಯೋನಲ್ಲಿ ನಡೆಯುತ್ತಿತ್ತು. ಸಿನಿಮಾಕ್ಕಾಗಿ ಆಕ್ಷನ್ ದೃಶ್ಯವೊಂದರ ಚಿತ್ರೀಕರಣ ಮಾಡಲಾಗುತ್ತಿತ್ತು. ಈ ವೇಳೆ ಸಂಭವಿಸಿದ ಅವಘಡದಲ್ಲಿ ಸ್ಟಂಟ್ಮ್ಯಾನ್ ಒಬ್ಬ ಬಿದ್ದು ನಿಧನ ಹೊಂದಿದ್ದಾರೆ. ಈ ಬಗ್ಗೆ ‘ಸರ್ದಾರ್ 2’ ಚಿತ್ರತಂಡ ಅಧಿಕೃತವಾಗಿ ಹೇಳಿಕೆ ಬಿಡುಗಡೆ ಮಾಡಿದ್ದು, ಪೊಲೀಸರು ದೂರು ಸಹ ದಾಖಲಿಸಿಕೊಂಡಿದ್ದಾರೆ.
ಚಿತ್ರತಂಡ ನೀಡಿರುವ ಹೇಳಿಕೆಯಂತೆ ‘ಜುಲೈ 16 ರಂದು ಸಿನಿಮಾದ ಚಿತ್ರೀಕರಣ ಎಲ್ಲ ಮುಗಿದ ಬಳಿಕ ಸ್ಟಂಟ್ಮ್ಯಾನ್ ಇಳುಮಲೈ ಎಂಬುವರು ಸುಮಾರು 20 ಅಡಿ ಎತ್ತರದಿಂದ ಆಯತಪ್ಪಿ ಬಿದ್ದು ಗಾಯಗೊಂಡರಂತೆ. ಕೂಡಲೇ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಸತತ ಚಿಕಿತ್ಸೆಗಳ ಬಳಿಕ ಇಳುಮಲೈ ನಿಧನ ಹೊಂದಿದ್ದಾರೆ. ಇಳುಮಲೈ ಆಕ್ಷನ್ ದೃಶ್ಯಗಳಲ್ಲಿ ರಿಗ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದರಂತೆ.
ಇಳುಮಲೈ ನಿಧನವಾದ ಬಳಿಕ ಚಿತ್ರತಂಡ ಚಿತ್ರೀಕರಣ ನಿಲ್ಲಿಸಿದೆ. ‘ಸರ್ದಾರ್ 2’ ಚಿತ್ರತಂಡವದವರು ಪೊಲೀಸರಿಗೆ ಮಾಹಿತಿ ನೀಡಿದ್ದು ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಚಿತ್ರೀಕರಣ ಮುಗಿದ ಬಳಿಕ ಪ್ಯಾಕ್ ಅಪ್ ಮಾಡುವ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗುತ್ತಿದೆ. ಚಿತ್ರೀಕರಣದ ಸಂದರ್ಭದಲ್ಲಿ ಸೂಕ್ತವಾಗಿ ಎಲ್ಲ ಸುರಕ್ಷತಾ ನಿಯಮಗಳನ್ನು ಚಿತ್ರತಂಡ ಪಾಲಿಸಿತ್ತೆ ಇಲ್ಲವೆ ಎಂಬ ಬಗ್ಗೆ ಪ್ರಶ್ನೆ ಉದ್ಭವಿಸಿದೆ.
ಇದನ್ನೂ ಓದಿ:ದರ್ಶನ್ ಪ್ರಕರಣ: ವಿಚಾರಣೆ ಬಳಿಕ ಕಾರ್ತಿಕ್ ಪುರೋಹಿತ್ ಮಾತು
ಸ್ಟಂಟ್ಮ್ಯಾನ್ ಇಳುಮಲೈ ನಿಧನದ ಬಗ್ಗೆ ‘ಸರ್ದಾರ್ 2’ ಸಿನಿಮಾದ ನಿರ್ಮಾಣ ಸಂಸ್ಥೆಯಾದ ಪ್ರಿನ್ಸ್ ನಿರ್ಮಾಣ ಸಂಸ್ಥೆ ಸಂತಾಪ ವ್ಯಕ್ತಪಡಿಸಿದೆ. ಇಳುಮಲೈ ಸ್ಟಂಟ್ಮ್ಯಾನ್ ಯೂನಿಯನ್ನ ಸದಸ್ಯರಾಗಿದ್ದು, ಯೂನಿಯನ್ ಸಹ ಇಳುಮಲೈ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದೆ. ಅಸಲಿಗೆ ‘ಸರ್ದಾರ್ 2’ ಸಿನಿಮಾದ ಮುಹೂರ್ತ ಕೆಲವೇ ದಿನಗಳ ಮುಂಚೆಯಷ್ಟೆ ಆಗಿತ್ತು, ಜುಲೈ 12 ರಂದು ಮುಹೂರ್ತ ನಡೆದು, ಜುಲೈ 15 ರಂದು ಚಿತ್ರೀಕರಣ ಪ್ರಾರಂಭವಾಗಿತ್ತು. ಚಿತ್ರೀಕರಣ ಪ್ರಾರಂಭವಾದ ಒಂದೇ ದಿನಕ್ಕೆ ದುರ್ಘಟನೆ ನಡೆದಿದೆ.
‘ಸರ್ದಾರ್ 2’ ಸಿನಿಮಾದಲ್ಲಿ ಕಾರ್ತಿ ನಾಯಕನಾಗಿ ನಟಿಸುತ್ತಿದ್ದಾರೆ. ಸಿನಿಮಾವನ್ನು ಪಿಎಸ್ ಮಿತ್ರನ್ ನಿರ್ದೇಶನ ಮಾಡಿದ್ದಾರೆ. ಸಿನಿಮಾಕ್ಕೆ ಯುವನ್ ಶಂಕರ್ ರಾಜ ಸಂಗೀತ ನೀಡಿದ್ದಾರೆ. ದಿಲೀಪ್ ಸುಬ್ಬರಾಜನ್ ಆಕ್ಷನ್ ಕೊರಿಯೋಗ್ರಫಿ ಮಾಡಿದ್ದಾರೆ. ಇದೀಗ ಸಿನಿಮಾದ ಆಕ್ಷನ್ ನಿರ್ದೇಶಕ, ನಿರ್ದೇಶಕ ಹಾಗೂ ನಿರ್ಮಾಪಕರನ್ನು ಪೊಲೀಸರು ವಿಚಾರಣೆ ನಡೆಸುವ ಸಾಧ್ಯತೆ ಇದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ