ರಜನಿಕಾಂತ್ (Rajinikanth) 169ನೇ ಚಿತ್ರದ ಬಗ್ಗೆ ಕನ್ನಡಗರಿಗೂ ನಿರೀಕ್ಷೆ ಸೃಷ್ಟಿ ಆಗಿದೆ. ಇದಕ್ಕೆ ಕಾರಣ ಈ ಸಿನಿಮಾದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ (Shivarajkumar) ಕೂಡ ನಟಿಸುತ್ತಿದ್ದಾರೆ. ಕೆಲ ದಿನಗಳ ಹಿಂದೆ ಈ ಬಗ್ಗೆ ವರದಿ ಬಿತ್ತರವಾಗಿತ್ತು. ಈಗ ಶಿವರಾಜ್ಕುಮಾರ್ ಅವರು ಈ ವಿಚಾರವನ್ನು ಖಚಿತಪಡಿಸಿದ್ದಾರೆ. ಅಷ್ಟೇ ಅಲ್ಲ, ರಜನಿಕಾಂತ್ ಜತೆ ವಿಶೇಷ ಬಾಂಡಿಂಗ್ ಇರುವ ಬಗ್ಗೆ ಅವರು ಮಾತನಾಡಿದ್ದಾರೆ.
ದಳಪತಿ ವಿಜಯ್ ನಟನೆಯ ‘ಬೀಸ್ಟ್’ ಸಿನಿಮಾ ಹೇಳಿಕೊಳ್ಳುವಂತಹ ಉತ್ತಮ ವಿಮರ್ಶೆ ಪಡೆದುಕೊಂಡಿಲ್ಲ. ಈ ಚಿತ್ರಕ್ಕೆ ನೆಲ್ಸನ್ ದಿಲೀಪ್ಕುಮಾರ್ ಅವರು ಆ್ಯಕ್ಷನ್ ಕಟ್ ಹೇಳಿದ್ದರು. ರಜನಿ 169ನೇ ಚಿತ್ರಕ್ಕೆ ನೆಲ್ಸನ್ ಆ್ಯಕ್ಷನ್ಕಟ್ ಹೇಳುತ್ತಿದ್ದಾರೆ. ಈ ಸಿನಿಮಾದಲ್ಲಿ ರಜನಿ ಹಾಗೂ ಶಿವರಾಜ್ಕುಮಾರ್ ಒಟ್ಟಾಗಿ ನಟಿಸುತ್ತಿರುವ ವಿಚಾರ ಅಭಿಮಾನಿಗಳಿಗೆ ಖುಷಿ ನೀಡಿದೆ. ಈ ಬಗ್ಗೆ ಶಿವಣ್ಣ ‘ಸಿನಿಮಾ ಎಕ್ಸ್ಪ್ರೆಸ್’ಗೆ ನೀಡಿದ ಸಂದರ್ಶನದಲ್ಲಿ ಒಂದಷ್ಟು ವಿಚಾರ ಹಂಚಿಕೊಂಡಿದ್ದಾರೆ.
‘ರಜನಿಕಾಂತ್ ಜತೆ ನಟಿಸುವುದು ನಿಜಕ್ಕೂ ಉತ್ತಮ ಅವಕಾಶ. ಈ ಚಿತ್ರದಲ್ಲಿ ಅವರ ಜತೆ ತೆರೆ ಹಂಚಿಕೊಳ್ಳುತ್ತಿರುವುದು ಖುಷಿ ನೀಡಿದೆ. ಅವರು ನನ್ನನ್ನು ಬಾಲ್ಯದಿಂದಲೂ ನೋಡಿದ್ದಾರೆ. ಅವರ ಜತೆ ನನಗೆ ವಿಶೇಷ ಬಾಂಧವ್ಯ ಇದೆ. ಸಿನಿಮಾದಲ್ಲಿ ಪಾತ್ರ ಹೇಗೇ ಇರಲಿ, ಈ ಪ್ರಾಜೆಕ್ಟ್ನ ಭಾಗವಾಗಲು ನನಗೆ ಖುಷಿ ಇದೆ. ಬೆಳ್ಳಿ ಪರದೆಮೇಲೆ ರಜನಿಕಾಂತ್ ಮತ್ತು ನನ್ನನ್ನು ಒಟ್ಟಿಗೆ ನೋಡಿ ಫ್ಯಾನ್ಸ್ ಖುಷಿಪಡುತ್ತಾರೆ ಎಂಬ ಬಗ್ಗೆ ನನಗೆ ಖಾತ್ರಿ ಇದೆ’ ಎಂದಿದ್ದಾರೆ ಶಿವರಾಜ್ಕುಮಾರ್. ಅವರ ಭಾಗದ ಶೂಟಿಂಗ್ ಬೆಂಗಳೂರು ಅಥವಾ ಮೈಸೂರಿನಲ್ಲಿ ನಡೆಯಲಿದೆ. ಆಗಸ್ಟ್ ತಿಂಗಳಿಂದ ಚಿತ್ರೀಕರಣ ಆರಂಭವಾಗುವ ನಿರೀಕ್ಷೆ ಇದೆ.
ಇದನ್ನೂ ಓದಿ: ರಜಿನಿಕಾಂತ್- ನಾನು ಒಳ್ಳೆಯ ಫ್ರೆಂಡ್ಸ್, ಆದರೆ ಒಂದು ವಿಚಾರದ ಹೊರತಾಗಿ; ಎಂದ ಕಮಲ್ ಹಾಸನ್; ಏನದು?
ಈ ಚಿತ್ರಕ್ಕೆ ಐಶ್ವರ್ಯಾ ರೈ ನಾಯಕಿ
ರಜನಿಕಾಂತ್ ಹಾಗೂ ಐಶ್ವರ್ಯಾ ರೈ ಇಬ್ಬರೂ ‘ರೋಬೋ’ ಸಿನಿಮಾದಲ್ಲಿ ಒಟ್ಟಾಗಿ ನಟಿಸಿದ್ದರು. ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಹಿಟ್ ಆಗಿತ್ತು. ಆ ಬಳಿಕ ಐಶ್ವರ್ಯಾ ರೈ ಅವರು ಮತ್ತೆ ದಕ್ಷಿಣದತ್ತ ಮುಖ ಮಾಡಿರಲಿಲ್ಲ. ಈಗ ಅವರು ಕುಟುಂಬದ ಜವಾಬ್ದಾರಿಗಳನ್ನು ನಿಭಾಯಿಸುವುದರಲ್ಲಿ ಬ್ಯುಸಿ ಆಗಿದ್ದಾರೆ. ಈ ಮಧ್ಯೆ ಐಶ್ವರ್ಯಾ ರೈ ಮತ್ತೆ ದಕ್ಷಿಣ ಭಾರತದತ್ತ ಮುಖ ಮಾಡುತ್ತಿದ್ದಾರೆ. ಅವರು ರಜನಿಕಾಂತ್ ನಟನೆಯ 169ನೇ ಚಿತ್ರಕ್ಕೆ ನಾಯಕಿ ಆಗಿ ಆಯ್ಕೆ ಆಗಿದ್ದಾರೆ ಎಂದು ವರದಿ ಆಗಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.