‘ಜನ ನಾಯಗನ್’ ಪ್ರಕರಣ ಕೋರ್ಟ್​​ನಲ್ಲಿರುವಾಗ ವಿಜಯ್​ಗೆ ಸಿಬಿಐನಿಂದ ಸಂಕಷ್ಟ

ನಟ ದಳಪತಿ ವಿಜಯ್ ಕರೂರು ಕಾಲ್ತುಳಿತ ಪ್ರಕರಣದಲ್ಲಿ ಸಿಬಿಐ ವಿಚಾರಣೆ ಎದುರಿಸುತ್ತಿದ್ದಾರೆ. ಅವರ ಪಕ್ಷದ ಸಮಾವೇಶದಲ್ಲಿ 41 ಮಂದಿ ಮೃತಪಟ್ಟಿದ್ದರು. ಸುಪ್ರೀಂ ಕೋರ್ಟ್ ಆದೇಶದಂತೆ ಸಿಬಿಐ ತನಿಖೆ ನಡೆಸುತ್ತಿದೆ. ಇದೇ ವೇಳೆ, ವಿಜಯ್ ನಟನೆಯ ‘ಜನ ನಾಯಗನ್’ ಸಿನಿಮಾ ಸೆನ್ಸಾರ್ ವಿವಾದ ಎದುರಿಸುತ್ತಿದೆ. ಇದು ಕೋರ್ಟ್ ಮೆಟ್ಟಿಲೇರಿದೆ. ಈ ಸವಾಲುಗಳಿಂದ ವಿಜಯ್ ಸಂಕಷ್ಟಕ್ಕೆ ಸಿಲುಕಿದ್ದಾರೆ.

‘ಜನ ನಾಯಗನ್’ ಪ್ರಕರಣ ಕೋರ್ಟ್​​ನಲ್ಲಿರುವಾಗ ವಿಜಯ್​ಗೆ ಸಿಬಿಐನಿಂದ ಸಂಕಷ್ಟ
ವಿಜಯ್

Updated on: Jan 13, 2026 | 8:41 AM

ಟಿವಿಕೆ ಮುಖ್ಯಸ್ಥ ಹಾಗೂ ನಟ ದಳಪತಿ ವಿಜಯ್​ಗೆ (Thalapathy Vijya) ಒಂದಾದ ಮೇಲೆ ಒಂದರಂತೆ ಕಷ್ಟ ಎದುರಾಗುತ್ತಿದೆ. ಅವರ ನಟನೆಯ ‘ಜನ ನಾಯಗನ್’ ರಿಲೀಸ್ ಬಗ್ಗೆ ಇನ್ನೂ ಯಾವುದೇ ಸ್ಪಷ್ಟನೆ ಸಿಗುತ್ತಿಲ್ಲ. ಹೀಗಿರುವಾಗಲೇ ಅವರು ಸಿಬಿಐ ವಿಚಾರಣೆ ಎದುರಿಸಬೇಕಾಗಿದೆ. ದೆಹಲಿಯ ಸಿಬಿಐ ಕಚೇರಿಗೆ ತೆರಳಿ ಅವರು ವಿಚಾರಣೆ ಎದುರಿಸಿದ್ದಾರೆ. ಇದಕ್ಕೆ ಕಾರಣ ಕರೂರು ಕಾಲ್ತುಳಿತದ ಘಟನೆ. ಈ ಪ್ರಕರಣದಲ್ಲಿ ಅವರಿಗೆ ಮುಂದಿನ ದಿನಗಳಲ್ಲಿ ಸಂಕಷ್ಟ ಹೆಚ್ಚೋ ಸಾಧ್ಯತೆ ಇದೆ.

ಕಳೆದ ವರ್ಷ ಸೆಪ್ಟೆಂಬರ್ 27ರಂದು ವಿಜಯ್ ಅವರು ಕರೂರಿನಲ್ಲಿ ಪಕ್ಷದ ಸಮಾವೇಶ ಆಯೋಜನೆ ಮಾಡಿದ್ದರು. ಈ ವೇಳೆ ದೊಡ್ಡ ಮಟ್ಟದಲ್ಲಿ ಜನರು ಸೇರಿದ್ದರು. ಈ ಪ್ರಕರಣದಲ್ಲಿ 41 ಜನರು ನಿಧನ ಹೊಂದಿದ್ದರು.ಈ ಘಟನೆಗೆ ವಿಜಯ್ ಅವರೇ ಕಾರಣ ಎಂಬ ಆರೋಪಗಳು ಎದುರಾದವು. ಈಗ ಪ್ರಕರಣವನ್ನು ಸಿಬಿಐಗೆ ಕೈಗೆತ್ತಿಕೊಂಡು ವಿಚಾರಣೆ ಮಾಡುತ್ತಿದೆ.

ಆರಂಭದಲ್ಲಿ ಈ ಪ್ರಕರಣವನ್ನು ಎಸ್​​​ಐಟಿ ತನಿಖೆ ಮಾಡುತ್ತಿತ್ತು. ಸುಪ್ರೀಂಕೋರ್ಟ್ ಆದೇಶದ ಅನುಸಾರ ಪ್ರಕರಣ ಸಿಬಿಐಗೆ ವರ್ಗಾವಣೆ ಆಗಿದೆ. ಈ ಪ್ರಕರವನ್ನು ಸುಪ್ರೀಂಕೋರ್ಟ್ ನಿವೃತ್ತ ಜಡ್ಜ್ ಅವರು ಮಾನಿಟರ್ ಮಾಡುತ್ತಿದ್ದಾರೆ.

ವಿಜಯ್ ಅವರು ಹೇಳಿದ ಸಮಯಕ್ಕೆ ಸಮಾವೇಶಕ್ಕೆ ಬರದೇ ಇದ್ದಿದ್ದೇ ಕಾಲ್ತುಳಿತಕ್ಕೆ ಕಾರಣ ಎಂದು ತಮಿಳುನಾಡು ಪೊಲೀಸರು ದೂರಿದ್ದರು. ಜನರು ಕಾದು ಕಾದು ತಮ್ಮ ತಾಳ್ಮೆ ಕಳೆದುಕೊಂಡಿದ್ದರು ಎಂಬುದು ಪೊಲೀಸರ ಆರೋಪ. ಇನ್ನು, ನೆರೆದಿದ್ದವರಿಗೆ ಆಹಾರ, ನೀರು ಹಾಗೂ ಶೌಚಾಲಯದ ವ್ಯವಸ್ಥೆ ಈ ಭಾಗದಲ್ಲಿ ಇರಲಿಲ್ಲ ಎಂದು ದೂರಲಾಗಿತ್ತು. ಇದು ಆಡಳಿತಾರೂಢ ಡಿಎಂಕೆ ಪಕ್ಷದ ಕೈವಾಡ ಎಂದು ವಿಜಯ್ ಹೇಳಿದ್ದರು.

ಇದನ್ನೂ ಓದಿ: ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ‘ಜನ ನಾಯಗನ್’ ಸಿನಿಮಾ ವಿವಾದ

‘ಜನ ನಾಯಗನ್’ ವಿಜಯ್ ಅವರ ಕೊನೆಯ ಸಿನಿಮಾ. ಈ ಚಿತ್ರದ ಬಗ್ಗೆ ಅಭಿಮಾನಿಗಳು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಆದರೆ, ಸಿನಿಮಾಗೆ ಸೆನ್ಸಾರ್ ಮಂಡಳಿ ಸರ್ಟಿಫಿಕೇಟ್ ನೀಡುತ್ತಿಲ್ಲ. ನೂರಾರು ಕೋಟಿ ರೂಪಾಯಿ ಸುರಿದು ಮಾಡಿರೋ ಈ ಚಿತ್ರ ತೊಂದರೆ ಅನುಭವಿಸುತ್ತಿದೆ. ಈ ಮೊದಲು ಮದ್ರಾಸ್ ಹೈಕೋರ್ಟ್ ಸಿನಿಮಾಗೆ ‘ಯುಎ’ ಸರ್ಟಿಫಿಕೇಟ್ ನೀಡಬೇಕು ಎಂದು ಆದೇಶಿಸಿತ್ತು. ಇದಾದ ಕೆಲವೇ ಗಂಟೆಗಳಲ್ಲಿ ತನ್ನದೇ ಆದೇಶಕ್ಕೆ ಕೋರ್ಟ್ ತಡೆ ನೀಡಿತ್ತು. ಈಗ ತಂಡದವರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದು, ನ್ಯಾಯಕ್ಕಾಗಿ ಬೇಡಿಕೆ ಇಟ್ಟಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.