ಸಿನಿಮಾ ನಟ-ನಟಿಯರಿಗೆ ಇಂದು ಶೂಟಿಂಗ್ (Shooting) ಸೆಟ್ನಲ್ಲಿ ಸಾಕಷ್ಟು ಸವಲತ್ತುಗಳನ್ನು ನೀಡಲಾಗುತ್ತದೆ. ಅವರಿಗಾಗಿ ಪ್ರತ್ಯೇಕ ಕ್ಯಾರಾವ್ಯಾನ್ ನೀಡಲಾಗಿರುತ್ತದೆ. ಆ ಕ್ಯಾರಾವ್ಯಾನ್ನಲ್ಲಿ ಒಂದು ಮನೆಯಲ್ಲಿ ಸಿಗುವ ಎಲ್ಲ ಸವಲತ್ತುಗಳು ಸಿಗುತ್ತವೆ. ಏಸಿ ಕೋಣೆ, ಶೌಚಾಲಯ, ಮಲಗಲು ಪ್ರತ್ಯೇಕ ಬೆಡ್ ವ್ಯವಸ್ಥೆ, ಮೇಕಪ್ ಮಾಡಿಕೊಳ್ಳಲು ಸುಜ್ಜಿತ ಮೇಕಪ್ ಟೇಬಲ್, ಬಟ್ಟೆ ಬದಲಿಸಲು ಸುಸಜ್ಜಿತ ಚೇಂಜಿಂಗ್ ರೂಮ್ ಇನ್ನೂ ಹಲವು ವ್ಯವಸ್ಥೆಗಳಿರುತ್ತವೆ, ನಾಯಕಿಗೆ ಪ್ರತ್ಯೇಕ ನೌಕರರು, ಕೇರ್ ಟೇಕರ್ಗಳು ಇರುತ್ತಾರೆ. ಆದರೆ ಕೆಲ ದಶಕದ ಹಿಂದೆ ನಟಿಯರ ಪರಿಸ್ಥಿತಿ ಈಗಿನಂತಿರಲಿಲ್ಲ. ಆಗಿನ ನಟಿಯರು ಹಲವು ಕಷ್ಟಗಳನ್ನು ಎದುರಿಸಿ ನಟಿಯಾದವರು. ತಾವು ನಟಿಯಾಗಿದ್ದಾಗ ಅನುಭವಿಸಿದ ಸಮಸ್ಯೆಗಳ ಬಗ್ಗೆ ನಟಿ ಮಧೂ ಶಾ ಮಾತನಾಡಿದ್ದಾರೆ.
ಕನ್ನಡದ ‘ಅಣ್ಣಯ್ಯ’, ‘ರನ್ನ’ ಸಿನಿಮಾಗಳ ನಾಯಕಿ ಮಧೂ ಶಾ, ತೆಲುಗು, ತಮಿಳು, ಮಲಯಾಳಂನ ಹಲವಾರು ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ‘ರೋಜಾ’, ‘ಜಂಟಲ್ಮ್ಯಾನ್’ ಸಿನಿಮಾಗಳು ಸೇರಿದಂತೆ ರಜನೀಕಾಂತ್, ಕಮಲ್ ಹಾಸನ್ ಅವರುಗಳೊಟ್ಟಿಗೆ ನಟಿಸಿ ಭೇಷ್ ಎನಿಸಿಕೊಂಡಿದ್ದಾರೆ. ಇತ್ತೀಚೆಗಿನ ಸಂದರ್ಶನವೊಂದರಲ್ಲಿ ಮಾತನಾಡಿರುವ ಮಧೂ ಶಾ, ತಾವು ನಾಯಕಿಯಾಗಿದ್ದ ಸಮಯದಲ್ಲಿ ನಾಯಕಿಯರಿಗೆ ಇದ್ದ ಸವಾಲುಗಳ ಬಗ್ಗೆ ಮಾತನಾಡಿದ್ದಾರೆ.
90 ರ ದಶಕದ ನಾಯಕಿಯರಿಗೆ ಖಾಸಗಿತನ ಎಂಬುದೇ ಇರಲಿಲ್ಲ. ಮೂಲಭೂತ ಸೌಕರ್ಯವಾಗಿದ್ದ ಶೌಚಾಲಯ ಸಹ ಇರುತ್ತಿರಲಿಲ್ಲ. ಔಟ್ಡೋರ್ ಶೂಟಿಂಗ್ಗಳಿದ್ದಾಗಲಂತೂ ನಟಿಯರಿಗೆ ಬಹಳ ಕಷ್ಟವಾಗುತ್ತಿತ್ತು. ಒಮ್ಮೆ ನಾವು ಬೆಟ್ಟಗುಡ್ಡಗಳಲ್ಲಿ ಹಾಡೊಂದರ ಚಿತ್ರೀಕರಣ ಮಾಡುತ್ತಿದ್ದೆವು. ಅಲ್ಲಿ ಶೌಚಾಲಯ ಇಲ್ಲ ಏನೂ ವ್ಯವಸ್ಥೆ ಇಲ್ಲ. ನಾನು ಸೇರಿದಂತೆ ಅಲ್ಲಿದ್ದ ಮಹಿಳೆಯರೆಲ್ಲ ಬಯಲಿನಲ್ಲಿಯೇ ಶೌಚಾಲಯ ಮಾಡಬೇಕಿತ್ತು’ ಎಂದಿದ್ದಾರೆ ಮಧೂ ಶಾ.
ಇದನ್ನೂ ಓದಿ:ಬಯಲು ಶೌಚಾಲಯಕ್ಕೆ ಹೋದ ಬಾಲಕನ ದೊಣ್ಣೆಯಿಂದ ಹೊಡೆದು ಕೊಂದರು
ಡ್ಯಾನ್ಸ್ ಮಾಡಲು ನಮಗೆ ಹಾಕಲಾಗುತ್ತಿದ್ದ ಬಟ್ಟೆಗಳು ಬಹಳ ಭಾರವಾಗಿರುತ್ತಿದ್ದವು. ಉರಿ ಬಿಸಿಲಿನಲ್ಲಿ ಭಾರವಾದ ಬಟ್ಟೆಗಳನ್ನು ಹಾಕಿ ಡ್ಯಾನ್ಸ್ ಮಾಡಲು ಬಿಡುತ್ತಿದ್ದರು. ಸೆಖೆಗೆ ದೇಹವೆಲ್ಲ ಬೆಂದು ಹೋಗಿರುತ್ತಿತ್ತು, ಹಾಡಿಗೆ ಹಲವು ಬಟ್ಟೆಗಳನ್ನು ಬದಲಿಸಬೇಕಿತ್ತು. ಅದಕ್ಕೆ ಚೇಂಜಿಂಗ್ ರೂಂ ಇರಲಿಲ್ಲ, ನಾವು ಬಯಲಿನಲ್ಲೇ ಬಟ್ಟೆ ಬದಲಿಸಬೇಕಾಗಿತ್ತು’ ಎಂದಿದ್ದಾರೆ ಮಧೂ ಶಾ.
ತಾವು ಮಣಿರತ್ನಂ ಜೊತೆಗೆ ಕೆಲಸ ಮಾಡಿದ ಅನುಭವವನ್ನೂ ಹಂಚಿಕೊಂಡಿರುವ ಮಧೂ ಶಾ, ‘ಇರುವರ್’ ಸಿನಿಮಾದಲ್ಲಿ ನಟಿಸುವಾಗ ಒಮ್ಮೆ ಊಟ ಮಾಡಿ ಕಲ್ಲಿನ ಮೇಲೆ ಮಲಗಿಕೊಂಡಿದ್ದೆ. ಆಗ ಕೆಲವರು, ‘ನೋಡಿ ಎಷ್ಟು ಹಣ ಸಂಪಾದನೆ ಮಾಡಿದರೇನು, ಕಲ್ಲಿನ ಮೇಲೆಯೇ ಮಲಗುವುದಾದರೆ ಇಷ್ಟು ಹಣ ಸಂಪಾದನೆ ಮಾಡಿ ಪ್ರಯೋಜನವೇನು’ ಎಂದರಂತೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ