ಪ್ರಭಾಸ್ (Prabhas) ನಟನೆಯ ‘ಆದಿಪುರುಷ್’ ಚಿತ್ರಕ್ಕೆ ಒಂದಾದ ಮೇಲೆ ಒಂದರಂತೆ ವಿವಾದಗಳು ಸುತ್ತಿಕೊಳ್ಳುತ್ತಿವೆ. ವಿವಾದಗಳಿಂದ ಚಿತ್ರತಂಡ ದೂರ ಉಳಿಯಬೇಕು ಎಂದುಕೊಂಡರೂ ಅದು ಸಾಧ್ಯವಾಗುತ್ತಿಲ್ಲ. ಸಿನಿಮಾ ಬಗ್ಗೆ ಜನರು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ, ಚಿತ್ರದ ಟೀಸರ್ ಈ ನಿರೀಕ್ಷೆಯನ್ನು ನಾಶ ಮಾಡಿತ್ತು. ಜನರು ಚಿತ್ರದ ಬಗ್ಗೆ ಅಸಮಾಧಾನ ಹೊರಹಾಕಿದರು. ಚಿತ್ರದಲ್ಲಿ ರಾವಣನ ಪಾತ್ರ ಮಾಡಿದ ಸೈಫ್ ಅಲಿ ಖಾನ್ (Saif Ali Khan) ಖಿಲ್ಜಿಯ ರೀತಿ ಕಾಣುತ್ತಾನೆ ಎಂಬ ಆರೋಪಗಳು ಬಂದವು. ಈಗ ಸಿನಿಮಾಗೆ ಮತ್ತೊಂದು ತೊಂದರೆ ಆಗುವ ಸೂಚನೆ ಸಿಕ್ಕಿದೆ.
ವಿಎಫ್ಎಕ್ಸ್ ವಿಚಾರದಲ್ಲಿ ‘ಆದಿಪುರುಷ್’ ಚಿತ್ರವನ್ನು ಟೀಕಿಸಲಾಗಿದೆ. ರಾವಣನ ಪಾತ್ರ ಸರಿ ಇಲ್ಲ ಎಂದು ದೂರಲಾಗಿದೆ. ಅಷ್ಟೇ ಅಲ್ಲ, ಸಿನಿಮಾದಲ್ಲಿ ವಾನರರ ಜತೆ ಬೇರೆ ಪ್ರಾಣಿಗಳೂ ಸೇರಿಕೊಂಡಿವೆ ಎಂದು ಟೀಕೆ ಮಾಡಲಾಗಿದೆ. ಇದರ ಜತೆಗೆ ತಂಡ ಕಾನೂನು ಸಮರ ಎದುರಿಸುತ್ತಿದೆ. ಈಗ ಸೆನ್ಸಾರ್ ಮಂಡಳಿಗೆ ಕೋರ್ಟ್ನಿಂದ ನೋಟಿಸ್ ಹೋಗಿದೆ.
ಶನಿವಾರ (ಜನವರಿ 14) ಅಲಹಾಬಾದ್ ಹೈಕೋರ್ಟ್ನ ಲಖನೌ ಪೀಠವು ಸೆನ್ಸಾರ್ ಮಂಡಳಿಗೆ ನೋಟಿಸ್ ಜಾರಿ ಮಾಡಿದೆ. ಸಲ್ಲಿಕೆ ಆದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಉತ್ತರಿಸುವಂತೆ ಕೋರ್ಟ್ ಸೂಚನೆ ನೀಡಿದೆ. ಮುಂದಿನ ಅರ್ಜಿ ವಿಚಾರಣೆ ಫೆಬ್ರವರಿ 21ಕ್ಕೆ ಮುಂದೂಡಲ್ಪಟ್ಟಿದೆ.
ಹಿಂದೂ ದೇವರಿಗೆ ಅವಮಾನ ಆಗಿದ್ದು, ಸಿನಿಮಾ ಮೇಲೆ ಬ್ಯಾನ್ ಹೇರಬೇಕು ಎಂದು ಈ ಮೊದಲು ದೆಹಲಿ ಹೈಕೋರ್ಟ್ಗೆ ಅರ್ಜಿ ಸಲ್ಲಿಕೆ ಆಗಿತ್ತು. ಎಲ್ಲವೂ ಅಂದುಕೊಂಡಂತೆ ನಡೆದರೆ ಜನವರಿ12ರಂದು ಈ ಸಿನಿಮಾ ರಿಲೀಸ್ ಆಗಬೇಕಿತ್ತು. ಆದರೆ, ವಿಎಫ್ಎಕ್ಸ್ ಕೆಲಸಗಳು ಪೂರ್ಣಗೊಂಡಿಲ್ಲ ಎನ್ನುವ ಕಾರಣ ನೀಡಿ ಚಿತ್ರದ ರಿಲೀಸ್ ದಿನಾಂಕವನ್ನು ತಂಡ ಮುಂದೂಡಿಕೊಂಡಿದೆ.
ಕುಲ್ದೀಪ್ ತಿವಾರಿ ಎಂಬುವವರು ಈ ಅರ್ಜಿಯನ್ನು ಸಲ್ಲಿಕೆ ಮಾಡಿದ್ದಾರೆ. ‘ಸೆನ್ಸಾರ್ ಬೋರ್ಡ್ನಿಂದ ಒಪ್ಪಿಗೆ ಪಡೆಯದೇ ಆದಿಪುರುಷ್ ಚಿತ್ರದ ಟೀಸರ್ ರಿಲೀಸ್ ಆಗಿದೆ. ಈ ಮೂಲಕ ನಿಯಮ ಉಲ್ಲಂಘನೆ ಆಗಿದೆ. ಸೀತೆಯ ಪಾತ್ರಕ್ಕೆ ಬೇರೆ ರೀತಿಯ ಉಡುಗೆ ತೊಡಿಸಲಾಗಿದೆ. ಜನರ ನಂಬಿಕೆಗೆ ವಿರುದ್ಧವಾಗಿ ದೇವರನ್ನು ತೋರಿಸಲಾಗಿದೆ. ರಾವಣನ ಪಾತ್ರ ಕೂಡ ಸರಿಯಾಗಿ ಮೂಡಿ ಬಂದಿಲ್ಲ’ ಎಂದು ಕುಲ್ದೀಪ್ ಆರೋಪಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ