
ಇತ್ತೀಚೆಗಷ್ಟೆ ಡಿಎಂಕೆ ಮುಖಂಡ, ತಮಿಳುನಾಡು ವಿಪಕ್ಷ ನಾಯಕ ಉದಯನಿಧಿ ಸ್ಟಾಲಿನ್, ನಟಿ ತ್ರಿಷಾ (Trisha) ಕುರಿತಾಗಿ ಕೀಳು ಹೇಳಿಕೆ ನೀಡಿದ್ದರು. ಇದೇ ಕಾರಣಕ್ಕೆ ಉದಯನಿಧಿ ಸ್ಟಾಲಿನ್ ಅವರನ್ನು ಬಂಧಿಸಿ ಬಿಡುಗಡೆ ಮಾಡಲಾಗಿತ್ತು. ಉದಯನಿಧಿ ಹೇಳಿಕೆಗೆ ತೀವ್ರ ಟೀಕೆ, ವಿರೋಧಗಳು ವ್ಯಕ್ತವಾಗಿದ್ದವು. ಘಟನೆ ನಡೆದು ಕೆಲವು ದಿನಗಳಷ್ಟೆ ಆಗಿವೆ. ಅಷ್ಟರಲ್ಲೇ ಇದೀಗ ಎಐಎಡಿಎಂಕೆ ಮುಖಂಡ ನಟಿ ತ್ರಿಷಾ ಬಗ್ಗೆ ಹೇಳಿಕೆ ನೀಡಿದ್ದಾರೆ. ಈ ಬಾರಿ ತ್ರಿಷಾ ಅಭಿಮಾನಿಗಳು ಪ್ರತಿಭಟನೆ ನಡೆಸಿದ್ದು, ಎಐಎಡಿಎಂಕೆಗೆ ಎಚ್ಚರಿಕೆ ನೀಡಿದ್ದಾರೆ.
ಎಐಎಡಿಎಂಕೆ ಮುಖಂಡ ಆರ್ಬಿ ಉದಯಕುಮಾರ್ ಎಂಬುವರು ತಮಿಳುನಾಡು ಸರ್ಕಾರವನ್ನು ಟೀಕೆ ಮಾಡುತ್ತಾ, ಸರ್ಕಾರದ ಉನ್ನತ ಹುದ್ದೆಗಳಿಗೆ ತಮಿಳುನಾಡು ಸಿನಿಮಾ ಗಣ್ಯರನ್ನು ನೇಮಿಸುತ್ತಿರುವುದನ್ನು ಖಂಡಿಸಿ ಹೇಳಿಕೆ ನೀಡುವ ಸಮಯದಲ್ಲಿ ‘ನಟಿ ತ್ರಿಷಾ ತಮಿಳುನಾಡಿನ ಡಿಸಿಎಂ ಆಗುವುದನ್ನು ನಾವು ಕಾಯುತ್ತಿದ್ದೇವೆ’ ಎಂದು ಹೇಳಿದ್ದಾರೆ. ಸಿಎಂ ವಿಜಯ್ ಅವರನ್ನು, ಅವರ ಸರ್ಕಾರವನ್ನು ಟೀಕಿಸುವ ನೆಪದಲ್ಲಿ ಪದೇ ಪದೇ ನಟಿ ತ್ರಿಷಾ ಅವರ ಹೆಸರನ್ನು ಎಳೆದು ತರಲಾಗುತ್ತಿದೆ.
ಎಐಎಡಿಎಂಕೆ ಮುಖಂಡ ಉದಯಕುಮಾರ್ ಹೇಳಿಕೆಗೆ ತೀವ್ರ ಟೀಕೆ ವ್ಯಕ್ತವಾಗಿದ್ದು, ವಿಜಯ್ ಅವರ ಟೀಕೆಗೆ ತ್ರಿಷಾ ಹೆಸರನ್ನು ಬಳಸುವುದೇಕೆ ಎಂದು ಹಲವರು ಪ್ರಶ್ನೆ ಮಾಡಿದ್ದಾರೆ. ನಟಿ ತ್ರಿಷಾ ಅವರ ಅಭಿಮಾನಿಗಳು ಈ ಬಾರಿ ಬೀದಿಗಿಳಿದಿದ್ದು, ನಟಿಯ ಪರವಾಗಿ ಚೆನ್ನೈ ಸೇರಿದಂತೆ ಹಲೆವೆಡೆ ಪೋಸ್ಟರ್ಗಳನ್ನು ಸಹ ಅಂಟಿಸಿದ್ದಾರೆ. ತ್ರಿಷಾ ಹೆಸರನ್ನು ಪದೇ ಪದೇ ಎಳೆದು ತರುತ್ತಿರುವುದು ಸರಿಯಲ್ಲ, ಇದು ಮುಂದುವರೆದರೆ ಪ್ರತಿಭಟನೆ ನಡೆಸುವುದಾಗಿ ತ್ರಿಷಾ ಅಭಿಮಾನಿಗಳು ಹೇಳಿದ್ದಾರೆ.
ಇದನ್ನೂ ಓದಿ:ನಟಿ ತ್ರಿಷಾ ಬಗ್ಗೆ ಅವಹೇಳನಕಾರಿ ಹೇಳಿಕೆ; ಉದಯನಿಧಿ ಸ್ಟಾಲಿನ್ ಬಂಧನ
ಸಿಎಂ ವಿಜಯ್ ಅವರ ಆಪ್ತೆಯಾಗಿದ್ದಾರೆ ನಟಿ ತ್ರಿಷಾ. ಇಬ್ಬರ ನಡುವೆ ಆಪ್ತ ಸಂಬಂಧವಿದೆ. ವಿಜಯ್ ಹಾಗೂ ಪತ್ನಿ ಸಂಗೀತ ನಡುವೆ ವಿಚ್ಛೇದನದ ಚರ್ಚೆ ನಡೆಯುತ್ತಿದೆ. ವಿಜಯ್ ಹಾಗೂ ತ್ರಿಷಾ ನಡುವಿನ ಆಪ್ತತೆಯ ಕಾರಣಕ್ಕೆ ವಿಪಕ್ಷದವರು, ವಿಜಯ್ ಅವರನ್ನು ಟೀಕಿಸುವಾಗ ಸುಖಾ-ಸುಮ್ಮನೆ ತ್ರಿಷಾ ಹೆಸರು ಎಳೆದು ತರುತ್ತಿದ್ದಾರೆ. ಇತ್ತೀಚೆಗೆ ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಅಂತೂ ಬಹಳ ಕೀಳಾದ ಪದಗಳನ್ನು ತ್ರಿಷಾ ಬಗ್ಗೆ ಬಳಸಿದ್ದರು.
ನಟಿ ತ್ರಿಷಾ ಮತ್ತು ವಿಜಯ್ ಈ ವರೆಗೆ ಐದು ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ. ವಿಜಯ್ ನಟನೆಯ ‘ಗೋಟ್’ ಸಿನಿಮಾನಲ್ಲಿ ತ್ರಿಷಾ ಅತಿಥಿ ಪಾತ್ರದಲ್ಲಿ ಹೀಗೆ ಬಂದು ಹಾಗೆ ಹೋಗುತ್ತಾರೆ. ಈ ಇಬ್ಬರ ಜೋಡಿ ಬೆಳ್ಳಿ ಪರದೆಯ ಮೇಲೆ ಸೂಪರ್ ಹಿಟ್ ಆಗಿದೆ. ಈಗ ನಿಜ ಜೀವನದಲ್ಲೂ ಜೋಡಿ ಆಗಿದ್ದಾರೆ. ವಿಜಯ್ ಅವರಿಗೆ ಪತ್ನಿ ಸಂಗೀತ ಜೊತೆಗೆ ವಿಚ್ಛೇದನ ದೊರಕಿದೆ ಬಳಿಕ ತ್ರಿಷಾ ಅವರೊಟ್ಟಿಗೆ ವಿವಾಹವಾಗುವ ಸಾಧ್ಯತೆ ಇದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ