ನಿರ್ದೇಶಕ ಅನುಭವ್ ಸಿನ್ಹಾ 2007 ರಲ್ಲಿ ‘ಕ್ಯಾಶ್’ ಚಿತ್ರವನ್ನು ನಿರ್ದೇಶಿಸಿದರು. ಇದರಲ್ಲಿ ನಟ ಅಜಯ್ ದೇವಗನ್ ಪ್ರಮುಖ ಪಾತ್ರ ವಹಿಸಿದ್ದರು. ಅದರೊಂದಿಗೆ ಸುನೀಲ್ ಶೆಟ್ಟಿ, ಇಶಾ ಡಿಯೋಲ್, ರಿತೇಶ್ ದೇಶ್ಮುಖ್, ಜಾಯೆದ್ ಖಾನ್, ಶಮಿತಾ ಶೆಟ್ಟಿ ಮತ್ತು ದಿಯಾ ಮಿರ್ಜಾ ಕೂಡ ನಟಿಸಿದ್ದರು. ಈ ಚಿತ್ರದ ನಂತರ, ಅನುಭವ್ ಮತ್ತೆಂದೂ ಅಜಯ್ ಜೊತೆ ಕೆಲಸ ಮಾಡಲಿಲ್ಲ. ಇದು ಇಬ್ಬರ ನಡುವೆ ಜಗಳವಾಗಿದೆ ಎಂಬ ವದಂತಿಗಳಿಗೆ ಕಾರಣವಾಯಿತು. ಅನುಭವ್ 18 ವರ್ಷಗಳ ನಂತರ ಈಗ ಇದಕ್ಕೆ ಪ್ರತಿಕ್ರಿಯಿಸಿದ್ದಾರೆ. ಕಳೆದ 18 ವರ್ಷಗಳಿಂದ ಅಜಯ್ ದೇವಗನ್ ಜೊತೆ ಮಾತನಾಡಿಲ್ಲ ಎಂದು ಅವರು ಹೇಳಿದರು. ಅದೇ ರೀತಿ, ಅವರು ನನ್ನ ಸಂದೇಶಗಳಿಗೆ ಉತ್ತರಿಸುವುದಿಲ್ಲ ಎಂದು ಬಹಿರಂಗಪಡಿಸಿದ್ದಾರೆ.
ಸಂದರ್ಶನದಲ್ಲಿ, ಮಾತನಾಡಿದ ಅನುಭವ್, ‘ನಮ್ಮಲ್ಲಿ ಯಾವುದೇ ಜಗಳವಾಗಲಿಲ್ಲ’ ಎಂದು ಹೇಳಿದರು. ‘ಅವನು ನನ್ನ ಜೊತೆ ಮಾತನಾಡುವುದೇ ಇಲ್ಲ, ಯಾಕೆ ಅಂತ ನನಗೂ ಗೊತ್ತಿಲ್ಲ. ಕ್ಯಾಶ್ ಚಿತ್ರದ ನಂತರ ನಾವು ಭೇಟಿಯಾಗಲೇ ಇಲ್ಲ. ಹಾಗಾಗಿ ಅವನು ಉದ್ದೇಶಪೂರ್ವಕವಾಗಿ ನನ್ನನ್ನು ನಿರ್ಲಕ್ಷಿಸುತ್ತಿದ್ದಾನೆಂದು ನಾನು ನಿಮಗೆ ಹೇಳಲು ಸಾಧ್ಯವಿಲ್ಲ. ಬಹುಶಃ ನಾನೇ ಅತಿಯಾಗಿ ಯೋಚಿಸಿರಬೇಕು. ಆದರೆ ನಾನು ಅವನಿಗೆ ಸಂದೇಶ ಕಳುಹಿಸಿದ್ದೆ. ನನ್ನ ಸಂದೇಶಕ್ಕೆ ಅವನಿಂದ ಉತ್ತರ ಬರಲೇ ಇಲ್ಲ. ಹಾಗಾಗಿ ಅವನು ಬಹುಶಃ ಸಂದೇಶಗಳನ್ನು ನೋಡಿಲ್ಲ ಎಂದು ನಾನು ಊಹಿಸುತ್ತಿದ್ದೇನೆ. ಆದರೆ ಕಳೆದ 18 ವರ್ಷಗಳಿಂದ ನಮಗೆ ಯಾವುದೇ ಸಂವಹನವಿಲ್ಲ’ ಎಂದಿದ್ದಾರೆ.
ಅಜಯ್ ದೇವಗನ್ ಜೊತೆ ನಿಮಗೆ ಎಂದಾದರೂ ಭಿನ್ನಾಭಿಪ್ರಾಯವಿದೆಯೇ ಎಂದು ಕೇಳಿದಾಗ, ಒಂದು ಹಾಡಿನ ಬಗ್ಗೆ ನಮ್ಮ ನಡುವೆ ಜಗಳವಾಯಿತು ಎಂಬ ಮಾತು ಕೇಳಿಬಂದಿತ್ತು. ಆದರೆ ಅಂತಹದ್ದೇನೂ ಇಲ್ಲ. ನನಗೆ ತಿಳಿದ ಮಟ್ಟಿಗೆ, ನಾವು ಯಾವುದೇ ಹಾಡಿನ ಬಗ್ಗೆ ಎಂದಿಗೂ ವಾದ ಮಾಡಿಲ್ಲ. ವಿವಾದದ ಚರ್ಚೆಗಳು ನಿಜವಲ್ಲ. ಅಜಯ್ ನನ್ನ ನೆಚ್ಚಿನ ನಟರಲ್ಲಿ ಒಬ್ಬರು. ಒಬ್ಬ ನಟನಾಗಿ ಮತ್ತು ವ್ಯಕ್ತಿಯಾಗಿ ನನಗೆ ಅವರು ತುಂಬಾ ಇಷ್ಟ. ಅವನು ಒಳ್ಳೆಯ ಸ್ನೇಹಿತ. ‘ಒಬ್ಬ ಸ್ನೇಹಿತನಿಗೆ ಏನಾದರೂ ಅಗತ್ಯವಿದ್ದರೆ, ಸಹಾಯ ಮಾಡಲು ಮೊದಲು ಓಡುವವನು ಅವನು’ ಎಂದಿದ್ದಾರೆ.
ಇದನ್ನೂ ಓದಿ: ಸಣ್ಣ ವಯಸ್ಸಿಗೆ ಕುಡಿತ ಆರಂಭಿಸಿದ್ದ ಅಜಯ್ ದೇವಗನ್, ಈಗಲೂ ಕುಡಿಯುತ್ತಾರೆ ಆದರೆ…
ಅನುಭವ್ ಸಿನ್ಹಾ ಅವರು ಮಧ್ಯಂತರ ಅವಧಿಯಲ್ಲಿ ಕೆಲವು ಜನರ ರಾಜಕೀಯ ದೃಷ್ಟಿಕೋನಗಳ ಬಗ್ಗೆ ಹೇಳಿಕೆಗಳನ್ನು ನೀಡಿದ್ದರು. ಇದರಿಂದ ಅಜಯ್ ಅಸಮಾಧಾನಗೊಂಡಿದ್ದರು ಎಂದು ಹೇಳಲಾಗಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ಅನುಭವ್, ‘ಆ ರೀತಿ ಇಲ್ಲ’ ಎಂದಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.