
ಅಜಿತ್ ಕುಮಾರ್ ಅವರ ‘ವಿದಾಮುಯರ್ಚಿ’ ಸಿನಿಮಾ ಮೇಲೆ ಅಭಿಮಾನಿಗಳಿಗೆ ತುಂಬ ನಿರೀಕ್ಷೆ ಇತ್ತು. ಆದರೆ ಆ ನಿರೀಕ್ಷೆಯ ಮಟ್ಟವನ್ನು ತಲುಪಲು ಸಿನಿಮಾಗೆ ಸಾಧ್ಯವಾಗಿಲ್ಲ. ಮೊದಲ ದಿನ ಸಿನಿಮಾ ನೋಡಿದ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು. ಹಾಗಾಗಿ ಎರಡನೇ ದಿನವೇ ಸಿನಿಮಾದ ಗಳಿಕೆ ಕುಸಿಯಿತು. ಮೂರು ದಿನ ಕಳೆದರೂ ‘ವಿದಾಮುಯರ್ಚಿ’ ಚಿತ್ರದ ಬಾಕ್ಸ್ ಆಫೀಸ್ ಗಳಿಕೆ 50 ಕೋಟಿ ರೂಪಾಯಿ ದಾಟಿಲ್ಲ. ಈ ಬಗ್ಗೆ ಇಲ್ಲಿದೆ ಮಾಹಿತಿ..
‘ವಿದಾಮುಯರ್ಚಿ’ ಸಿನಿಮಾದಲ್ಲಿ ಅಜಿತ್ ಕುಮಾರ್ ಜೊತೆ ತ್ರಿಶಾ ಕೃಷ್ಣನ್, ರೆಜಿನಾ ಕ್ಯಾಸಂಡ್ರ, ಆರವ್, ಅರ್ಜುನ್ ಸರ್ಜಾ ಮುಂತಾದವರು ನಟಿಸಿದ್ದಾರೆ. ಇದು 1997ರಲ್ಲಿ ಬಿಡುಗಡೆ ಆದ ಅಮೆರಿಕದ ‘ಬ್ರೇಕ್ಡೌನ್’ ಸಿನಿಮಾದಿಂದ ಸ್ಫೂರ್ತಿ ಪಡೆದು ಮಾಡಲಾದ ಸಿನಿಮಾ. ನಿರೀಕ್ಷೆ ಹೆಚ್ಚಿದ್ದರಿಂದ ಮೊದಲ ದಿನ ಅದ್ದೂರಿ ಓಪನಿಂಗ್ ಪಡೆದುಕೊಂಡಿತು. ಬಿಡುಗಡೆ ಆದ ದಿನ (ಫೆಬ್ರವರಿ 6) ‘ವಿದಾಮುಯರ್ಚಿ’ ಸಿನಿಮಾ 26 ಕೋಟಿ ರೂಪಾಯಿ ಗಳಿಕೆ ಮಾಡಿತು.
ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದರಿಂದ ‘ವಿದಾಮುಯರ್ಚಿ’ ಚಿತ್ರಕ್ಕೆ 2ನೇ ದಿನ ಕೇವಲ 10.25 ಕೋಟಿ ರೂಪಾಯಿ ಕಲೆಕ್ಷನ್ ಆಯಿತು. ಮೂರನೇ ದಿನ ಅಂದಾಜು 10.52 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ವೀಕೆಂಡ್ ಇದ್ದರೂ ಕೂಡ ಈ ಸಿನಿಮಾದ ಗಳಿಕೆಯಲ್ಲಿ ಏರಿಕೆ ಆಗಿಲ್ಲ. ಮೂರು ದಿನಕ್ಕೆ ಒಟ್ಟು ಕಲೆಕ್ಷನ್ 46.77 ಕೋಟಿ ರೂಪಾಯಿ ಆಗಿದೆ. 50 ಕೋಟಿ ರೂಪಾಯಿ ಗಡಿ ಮುಟ್ಟಲು ಈ ಸಿನಿಮಾ ಕಷ್ಟಪಡುತ್ತಿದೆ.
ಚಿತ್ರಮಂದಿರದ ಒಳಗೆ ಪಟಾಕಿ ಸಿಡಿಸಿದ ಅಜಿತ್ ಕುಮಾರ್ ಫ್ಯಾನ್ಸ್; ಪೊಲೀಸರ ಜೊತೆ ಕಿರಿಕ್
ಮೊದಲ ದಿನ ‘ವಿದಾಮುಯರ್ಚಿ’ ಸಿನಿಮಾವನ್ನು ನೋಡಲು ಅಜಿತ್ ಫ್ಯಾನ್ಸ್ ಮುಗಿ ಬಿದ್ದಿದ್ದರು. ಭಾರಿ ಉತ್ಸಾಹದಲ್ಲಿ ಚಿತ್ರಮಂದಿರದ ಒಳಗೆ ಸಂಭ್ರಮಿಸಿದರು. ಚಿತ್ರಮಂದಿರದ ಒಳಗೆ ಪಟಾಕಿ ಸಿಡಿಸಿ ಖುಷಿಪಡಲಾಗಿತ್ತು. ಅಗ್ನಿ ಅವಘಡ ಸಂಭವಿಸುವ ಸಾಧ್ಯತೆ ಇದ್ದರೂ ಕೂಡ ಅಭಿಮಾನಿಗಳು ಮಿತಿ ಮೀರಿ ನಡೆದುಕೊಂಡಿದ್ದರು. ಪೊಲೀಸರ ಜೊತೆಗೆ ವಾಗ್ವಾದ ಕೂಡ ಮಾಡಲಾಗಿತ್ತು. ಎರಡನೇ ದಿನಕ್ಕೆ ಫ್ಯಾನ್ಸ್ ಉತ್ಸಾಹ ಕುಸಿಯುತು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.