ಭಾರಿ ಸಂಭಾವನೆ ಕಾರಣಕ್ಕೆ ಅಜಿತ್‌ಗೆ ಸಿಗುತ್ತಿಲ್ಲ ನಿರ್ಮಾಪಕರು; ಅಸಲಿ ವಿಷಯ ರಿವೀಲ್

ನಟ ಅಜಿತ್ ಕುಮಾರ್ ತಮ್ಮ ಮುಂದಿನ ಸಿನಿಮಾಗೆ ಕೇಳುತ್ತಿರುವ ಭಾರಿ ಸಂಭಾವನೆ (125 ಕೋಟಿ ರೂಪಾಯಿ) ತಮಿಳು ಚಿತ್ರರಂಗದಲ್ಲಿ ವಿವಾದ ಸೃಷ್ಟಿಸಿದೆ. ನಿರ್ಮಾಪಕರು 80-90 ಕೋಟಿ ನೀಡಲು ಸಿದ್ಧರಿದ್ದರೂ, ಅಜಿತ್ ಇದಕ್ಕೆ ಒಪ್ಪುತ್ತಿಲ್ಲ. ಇದರಿಂದ ಹೊಸ ಸಿನಿಮಾ ಘೋಷಣೆ ವಿಳಂಬವಾಗುತ್ತಿದೆ. ಚಿತ್ರರಂಗದ ವಿತರಕ ತಿರುಪ್ಪೂರ್ ಸುಬ್ರಮಣಿಯನ್, ಉದ್ಯಮದ ಹಿತದೃಷ್ಟಿಯಿಂದ ಅಜಿತ್ ಲಾಭ ಹಂಚಿಕೆ ಆಧಾರದ ಮೇಲೆ ಸಿನಿಮಾ ಮಾಡಬೇಕೆಂದು ಸಲಹೆ ನೀಡಿದ್ದಾರೆ. ಸಂಭಾವನೆ ವಿವಾದ ಬಗೆಹರಿಯದಿದ್ದರೆ ಶೂಟಿಂಗ್ ಆರಂಭ ಅಸಾಧ್ಯ.

ಭಾರಿ ಸಂಭಾವನೆ ಕಾರಣಕ್ಕೆ ಅಜಿತ್‌ಗೆ ಸಿಗುತ್ತಿಲ್ಲ ನಿರ್ಮಾಪಕರು; ಅಸಲಿ ವಿಷಯ ರಿವೀಲ್
ಅಜಿತ್

Updated on: Jun 18, 2026 | 7:28 AM

ತಮಿಳು ಚಿತ್ರರಂಗದ ಖ್ಯಾತ ನಟ ಅಜಿತ್ ಕುಮಾರ್ (Ajith Kumar) ಮುಂದಿನ ಸಿನಿಮಾ ಘೋಷಣೆ ತಡವಾಗುತ್ತಿರುವುದಕ್ಕೆ ಅವರ ಭಾರಿ ಸಂಭಾವನೆಯ ಬೇಡಿಕೆಯೇ ಕಾರಣ ಎಂಬ ವದಂತಿ ಇತ್ತೀಚೆಗೆ ಹರಿದಾಡಿತ್ತು. ಅಜಿತ್ ತಮ್ಮ ಸಂಭಾವನೆಯನ್ನು 150 ಕೋಟಿ ರೂಪಾಯಿ ಇಂದ 125 ಕೋಟಿ ರೂಪಾಯಿಗೆ ಇಳಿಕೆ ಮಾಡಿಕೊಂಡಿದ್ದರು. ಆದರೆ, ನಿರ್ಮಾಪಕರು ಇಷ್ಟು ಹಣ ನೀಡಲು ರೆಡಿ ಇಲ್ಲ ಎಂದು ವರದಿ ಆಗಿದೆ. ಈ ಬಗ್ಗೆ ತಮಿಳು ಸಿನಿಮಾಗಳ ಪ್ರಮುಖ ವಿತರಕ ಹಾಗೂ ಫೈನಾನ್ಶಿಯರ್ ತಿರುಪ್ಪೂರ್ ಸುಬ್ರಮಣಿಯನ್ ಮಾತನಾಡಿದ್ದಾರೆ.

‘ಅಜಿತ್ ಕುಮಾರ್ ತಮಗೆ ಸರಿ ಹೊಂದುವ ಸಂಭಾವನೆಯನ್ನೇ ಕೇಳುತ್ತಿದ್ದಾರೆ. ಆದರೆ ಅಷ್ಟೊಂದು ದೊಡ್ಡ ಮೊತ್ತವನ್ನು ನೀಡಲು ಇಂದು ಚಿತ್ರರಂಗದಲ್ಲಿ ಯಾರೂ ಸಿದ್ಧರಿಲ್ಲ’ ಎಂದು ಸುಬ್ರಮಣಿಯನ್ ತಿಳಿಸಿದ್ದಾರೆ. ಸದ್ಯ ತಮಿಳು ಚಿತ್ರರಂಗದಲ್ಲಿ ದೊಡ್ಡ ಬಂಡವಾಳ ಹೂಡುವ ನಿರ್ಮಾಣ ಸಂಸ್ಥೆಗಳ ಕೊರತೆಯಿದೆ. ಸನ್ ಪಿಕ್ಚರ್ಸ್, ಎಜಿಎಸ್ ಎಂಟರ್‌ಟೈನ್‌ಮೆಂಟ್ಸ್, ರೆಡ್ ಜೈಂಟ್ ಸ್ಟುಡಿಯೋಸ್‌ನಂತಹ ಕೆಲವು ದೊಡ್ಡ ಸಂಸ್ಥೆಗಳು ಮಾತ್ರ ಸಕ್ರಿಯವಾಗಿವೆ. ಆದರೆ, ಈ ಸಂಸ್ಥೆಗಳು ಅಷ್ಟೊಂದು ದೊಡ್ಡ ರಿಸ್ಕ್ ತೆಗೆದುಕೊಳ್ಳಲು ಸಿದ್ಧವಿಲ್ಲ. ಅವರು ಲಾಭದಲ್ಲಿ ಪಾಲು ಕೊಡುವ ಮಾದರಿಗೆ ಆದ್ಯತೆ ನೀಡುತ್ತಿದ್ದಾರೆ’ ಎಂದು ಅವರು ವಿವರಿಸಿದ್ದಾರೆ.

90 ಕೋಟಿ ಆಫರ್?

ಚಿತ್ರರಂಗದ ವರದಿಗಳ ಪ್ರಕಾರ, ಪ್ರಮುಖ ನಿರ್ಮಾಣ ಸಂಸ್ಥೆಗಳು ಅಜಿತ್ ಅವರಿಗೆ 80-90 ಕೋಟಿ ರೂಪಾಯಿ ಸಂಭಾವನೆ ನೀಡಲು ಮುಂದೆ ಬಂದಿವೆ. ಆದರೆ, ಅಜಿತ್ ಇದಕ್ಕಿಂತ ಹೆಚ್ಚಿನ ಮೊತ್ತವನ್ನು ಕಡ್ಡಾಯವಾಗಿ ನೀಡಬೇಕು ಎಂದು ಪಟ್ಟು ಹಿಡಿದಿದ್ದಾರೆ. ಈ ಹಣಕಾಸಿನ ಭಿನ್ನಾಭಿಪ್ರಾಯದಿಂದಾಗಿಯೇ ಅವರ ಹೊಸ ಸಿನಿಮಾ ಒಪ್ಪಂದಗಳು ಅಂತಿಮಗೊಳ್ಳುತ್ತಿಲ್ಲ ಎನ್ನಲಾಗಿದೆ.

ರೇಸಿಂಗ್‌ನಲ್ಲಿ ಬ್ಯುಸಿ, ಸಿನಿಮಾಗೆ ಸಲಹೆ

ಅಜಿತ್ ಅವರ ಕೊನೆಯ ಚಿತ್ರ ‘ಗುಡ್ ಬ್ಯಾಡ್ ಅಗ್ಲಿ’ ಸಾಧಾರಣ ಎನಿಸಿಕೊಂಡಿತು. ಈ ಸಿನಿಮಾ ರಿಲೀಸ್ ಆಗಿ ವರ್ಷಗಳೇ ಕಳೆದೂ ಅವರ 64ನೇ ಸಿನಿಮಾ ಇನ್ನೂ ಅಧಿಕೃತವಾಗಿ ಘೋಷಣೆಯಾಗಿಲ್ಲ. ಈ ಬಗ್ಗೆ ಸಲಹೆ ನೀಡಿರುವ ಸುಬ್ರಮಣಿಯನ್, ‘ಅಜಿತ್ ಈಗಾಗಲೇ ಚಿತ್ರರಂಗದಲ್ಲಿ ನೆಲೆಸಿದ್ದಾರೆ. ಅವರಿಗೆ ರೇಸಿಂಗ್ ಹಾಗೂ ಜಾಹೀರಾತುಗಳಿಂದಲೂ ಉತ್ತಮ ಆದಾಯವಿದೆ. ಹೀಗಾಗಿ ಅವರು ಚಿತ್ರರಂಗದ ಹಿತದೃಷ್ಟಿಯಿಂದ ಲಾಭದಲ್ಲಿ ಪಾಲು ಪಡೆಯುವ ಆಧಾರದ ಮೇಲೆ ಸಿನಿಮಾ ಮಾಡಬೇಕು. ಇದರಿಂದ ತಮಿಳು ಚಿತ್ರರಂಗಕ್ಕೆ ವರ್ಷಕ್ಕೆ ಕನಿಷ್ಠ 2 ರಿಂದ 3 ದೊಡ್ಡ ಸಿನಿಮಾಗಳು ಸಿಗುತ್ತವೆ’ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಹೇಗಿದೆ ನೋಡಿ ನಟ ಅಜಿತ್ ಕುಟುಂಬ; ಇಲ್ಲಿವೆ ಸುಂದರ ಫೋಟೋಸ್

ಮತ್ತೊಂದೆಡೆ, ನಟ ವಿಜಯ್ ರಾಜಕೀಯಕ್ಕೆ ಪ್ರವೇಶಿಸಿ ಚಿತ್ರರಂಗದಿಂದ ದೂರ ಸರಿಯುತ್ತಿರುವುದರಿಂದ, ಅಜಿತ್ ಆ ಜಾಗವನ್ನು ತುಂಬಲಿದ್ದಾರೆ ಎಂದು ಅಭಿಮಾನಿಗಳು ನಿರೀಕ್ಷಿಸುತ್ತಿದ್ದಾರೆ. ಆದರೆ ಸಂಭಾವನೆ ವಿವಾದ ಬಗೆಹರಿಯದ ಹೊರತು ಅಜಿತ್ ಅವರ ಮುಂದಿನ ಚಿತ್ರದ ಶೂಟಿಂಗ್ ಆರಂಭವಾಗುವುದು ಅನುಮಾನ ಎನ್ನಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us