ಸಂಧ್ಯಾ ಥಿಯೇಟರ್ ಕಾಲ್ತುಳಿತ ಪ್ರಕರಣದ ಆರೋಪಿ ಆಗಿರುವ ನಟ ಅಲ್ಲು ಅರ್ಜುನ್ಗೆ ಜಾಮೀನು ದೊರೆತಿದೆಯಾದರೂ ಕೆಲವು ಕಠಿಣ ಷರತ್ತುಗಳನ್ನು ವಿಧಿಸಲಾಗಿತ್ತು. ಅಲ್ಲು ಅರ್ಜುನ್, ಪ್ರತಿ ಭಾನುವಾರ ಹೈದರಾಬಾದ್ನ ಪೊಲೀಸ್ ಠಾಣೆಯೊಂದಕ್ಕೆ ಹೋಗಿ ತನಿಖಾಧಿಕಾರಿಮುಂದೆ ಹಾಜರಾತಿ ಹಾಕಬೇಕಿತ್ತು. ಅಲ್ಲು ಅರ್ಜುನ್ ಪ್ರತಿ ಭಾನುವಾರ ಠಾಣೆಗೆ ಹೋದಾಗಲೂ ಅಲ್ಲಿ ಭಾರಿ ಸಂಖ್ಯೆಯ ಜನ ಸೇರಿರುತ್ತಿದ್ದರು. ಅಲ್ಲದೆ ಅಲ್ಲು ಅರ್ಜುನ್ ಅಂಥಹಾ ದೊಡ್ಡ ಸ್ಟಾರ್, ರೌಡಿ ಶೀಟರ್ ರೀತಿ ಪ್ರತಿವಾರ ಠಾಣೆಗೆ ಹೋಗುವುದು ಅಭಿಮಾನಿಗಳಿಗೆ, ಸಿನಿಮಾ ಪ್ರೇಮಿಗಳಿಗೆ ಬೇಸರ ತಂದಿತ್ತು ಆದರೆ ಈಗ ಅದರಿಂದ ವಿನಾಯಿತಿ ದೊರೆತಿದೆ.
ನಾಂಪಲ್ಲಿ ನ್ಯಾಯಾಲಯದ ಆದೇಶದಂತೆ ಅಲ್ಲು ಅರ್ಜುನ್ ಪ್ರತಿ ಭಾನುವಾರ ಚಿಕ್ಕಟಪಲ್ಲಿ ಪೊಲೀಸ್ ಠಾಣೆಗೆ ಹೋಗಿ ತನಿಖಾಧಿಕಾರಿ ಎದುರು ಸಹಿ ಮಾಡಬೇಕಿತ್ತು. ಕಳೆದ ಭಾನುವಾರವೂ ಅವರು ಪೊಲೀಸ್ ಠಾಣೆಗೆ ಹೋಗಿದ್ದರು. ಆದರೆ ಅಲ್ಲು ಅರ್ಜುನ್ ಅವರ ಪರ ವಕೀಲರು ನಾಂಪಲ್ಲಿ ನ್ಯಾಯಾಲಯಕ್ಕೆ ಅರ್ಜಿ ಹಾಕಿ, ಪ್ರತಿ ಭಾನುವಾರ ಠಾಣೆಗೆ ಭೇಟಿ ನೀಡುವ ಷರತ್ತಿನಿಂದ ವಿನಾಯಿತಿ ನೀಡಬೇಕು ಎಂದು ಮನವಿ ಸಲ್ಲಿಸಿದ್ದರು. ಮನವಿ ಆಲಿಸಿದ ನಾಂಪಲ್ಲಿ ನ್ಯಾಯಾಲಯ ಭಾನುವಾರ ಭೇಟಿಯಿಂದ ವಿನಾಯಿತಿ ನೀಡಿದೆ.
ಪ್ರಕರಣದ ಚಾರ್ಜ್ ಶೀಟ್ ಸಲ್ಲಿಕೆ ಆಗುವವರೆಗೆ ಅಲ್ಲು ಅರ್ಜುನ್ ಚಿಕ್ಕಟಪಲ್ಲಿ ಪೊಲೀಸ್ ಠಾಣೆಗೆ ಭೇಟಿ ನೀಡಬೇಕಿತ್ತು. ಆದರೆ ಇನ್ನು ಮುಂದೆ ಆ ಷರತ್ತಿನಿಂದ ವಿನಾಯಿತಿ ನೀಡಲಾಗಿದೆ. ಮಾತ್ರವಲ್ಲದೆ ಅಲ್ಲು ಅರ್ಜುನ್ ಅವರ ಪಾಸ್ಪೋರ್ಟ್ ಅನ್ನು ಸಹ ಮರಳಿಸಲಾಗಿದ್ದು, ವಿದೇಶ ಪ್ರಯಾಣಕ್ಕೆ ಅವರ ಮೇಲೆ ಹೇರಲಾಗಿದ್ದ ನಿಷೇಧವನ್ನು ಸಹ ತೆಗೆದು ಹಾಕಲಾಗಿದೆ. ಆ ಮೂಲಕ ಎರಡು ಪ್ರಮುಖ ಷರತ್ತುಗಳಿಂದ ಅಲ್ಲು ಅರ್ಜುನ್ಗೆ ನಿರಾಳತೆ ಒದಗಿದೆ.
ಇದನ್ನೂ ಓದಿ:ಕೆಟ್ಟ ಘಟನೆ ಮರೆತು ಮುಂದೆ ಬಂದ ಅಲ್ಲು ಅರ್ಜುನ್; ಬನ್ಸಾಲಿ ಜೊತೆ ಸಿನಿಮಾ
ಡಿಸೆಂಬರ್ 04 ರಂದು ‘ಪುಷ್ಪ 2’ ಸಿನಿಮಾದ ವಿಶೇಷ ಶೋ ಹೈದರಾಬಾದ್ನ ಸಂಧ್ಯಾ ಚಿತ್ರಮಂದಿರದಲ್ಲಿ ಆಯೋಜಿಸಲಾಗಿತ್ತು. ಆ ವಿಶೇಷ ಶೋಗೆ ಅಲ್ಲು ಅರ್ಜುನ್ ಸಹ ತಮ್ಮ ಕುಟುಂಬದೊಟ್ಟಿಗೆ ತೆರಳಿದ್ದರು. ರಶ್ಮಿಕಾ ಮಂದಣ್ಣ ಸಹ ಜೊತೆಯಲ್ಲಿದ್ದರು. ಈ ವೇಳೆ ನಡೆದ ನೂಕಾಟ-ತಳ್ಳಾಟದಲ್ಲಿ ರೇವತಿ ಹೆಸರಿನ ಮಹಿಳೆ ನಿಧನ ಹೊಂದಿದರು. ಅವರ ಪುತ್ರ ಗಂಭೀರವಾಗಿ ಗಾಯಗೊಂಡಿದ್ದರು. ಈ ಪ್ರಕರಣದಲ್ಲಿ ಅಲ್ಲು ಅರ್ಜುನ್ ಅನ್ನು ಆರೋಪಿಯಾಗಿ ಪರಿಗಣಿಸಿ ಹೈದರಾಬಾದ್ ಪೊಲೀಸರು ನಟನ ಬಂಧಿಸಿದ್ದರು. ಒಂದು ದಿನ ಜೈಲಿನಲ್ಲಿ ಕಳೆದಿದ್ದ ಅಲ್ಲು ಅರ್ಜುನ್ಗೆ ತೆಲಂಗಾಣ ಹೈಕೋರ್ಟ್ ಮಧ್ಯಂತರ ಜಾಮೀನು ನೀಡಿತು. ಆ ಬಳಿಕ ನಾಂಪಲ್ಲಿ ನ್ಯಾಯಾಲಯದಲ್ಲಿ ನಿಯಮಿತ ಜಾಮೀನು ದೊರೆಯಿತು. ಪ್ರಕರಣದ ತನಿಖೆ ಜಾರಿಯಲ್ಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:17 pm, Sat, 11 January 25