ಇನ್ಮುಂದೆ ಬೇರೆಯದೇ ಲೆಕ್ಕ; ಸಿನಿಮಾ ಆಯ್ಕೆಯಲ್ಲಿ ನೀನಾಸಂ ಸತೀಶ್ ಮಹತ್ವದ ನಿರ್ಧಾರ
ನೀನಾಸಂ ಸತೀಶ್ ಅವರು ತಮ್ಮ ಚಿತ್ರ ಆಯ್ಕೆಯಲ್ಲಿ ಬದಲಾವಣೆ ಮಾಡಿಕೊಂಡಿದ್ದಾರೆ. 'ಲೂಸಿಯಾ' ಮತ್ತು 'ಅಯೋಗ್ಯ' ರೀತಿಯ ಚಿತ್ರಗಳನ್ನು ನೀಡಿದ ಅವರು, ದೊಡ್ಡ ಬಜೆಟ್ ಚಿತ್ರಗಳತ್ತ ಸಾಗುತ್ತಿದ್ದಾರೆ. 'ದಿ ರೈಸ್ ಆಫ್ ಅಶೋಕ' ಚಿತ್ರದಲ್ಲಿ ಅವರ ಲುಕ್ ರಿವೀಲ್ ಆಗಿದೆ. ಈ ವರ್ಷ ಅವರ ನಟನೆಯ ಎರಡು ಚಿತ್ರಗಳು ರಿಲೀಸ್ ಆಗಲಿವೆ. ಭವಿಷ್ಯದಲ್ಲಿ ದೊಡ್ಡ ಚಿತ್ರಗಳಲ್ಲಿ ನಟಿಸುವುದು ಅವರ ಉದ್ದೇಶ.
ನೀನಾಸಂ ಸತೀಶ್ ಅವರು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ‘ಲೂಸಿಯಾ’, ‘ಅಯೋಗ್ಯ’ ರೀತಿಯ ಚಿತ್ರಗಳ ಮೂಲಕ ಅವರು ಗಮನ ಸೆಳೆದಿದ್ದಾರೆ. ಇಷ್ಟು ವರ್ಷಗಳ ಕಾಲ ನೀನಾಸಂ ಸತೀಶ್ ಅವರು ಸಣ್ಣ ಬಜೆಟ್ ಚಿತ್ರಗಳನ್ನು ಕೂಡ ಮಾಡಿದ್ದರು. ಆದರೆ, ಈಗ ಅವರ ಸಿನಿಮಾ ಆಯ್ಕೆಯಲ್ಲಿ ಬದಲಾವಣೆ ಮಾಡಿಕೊಂಡಿದ್ದಾರೆ. ಮುಂದಿನ ವರ್ಷಗಳಲ್ಲಿ ಬಿಗ್ ಬಜೆಟ್ ಸಿನಿಮಾಗಳನ್ನು ಮಾಡುವ ಆಲೋಚನೆಯಲ್ಲಿ ಅವರಿದ್ದಾರೆ. ಈ ಬಗ್ಗೆ ಅವರು ಟಿವಿ9 ಕನ್ನಡ ಡಿಜಿಟಲ್ ಜೊತೆ ಮಾತನಾಡಿದ್ದಾರೆ.
ಇತ್ತೀಚೆಗೆ ‘ದಿ ರೈಸ್ ಆಫ್ ಅಶೋಕ’ ಚಿತ್ರದಲ್ಲಿನ ಸತೀಶ್ ಅವರ ಲುಕ್ ರಿವೀಲ್ ಆಗಿದೆ. ಈ ಚಿತ್ರದಲ್ಲಿ ಸತೀಶ್ ಮಚ್ಚನ್ನು ಹಿಡಿದು ಕಾಣಿಸಿಕೊಂಡಿದ್ದಾರೆ. ಈ ಸಿನಿಮಾಗೆ ಇನ್ನು ಶೇ.20 ಶೂಟಿಂಗ್ ಬಾಕಿ ಇದೆ. ಇದರ ಶೂಟಿಂಗ್ ಪೂರ್ಣಗೊಳಿಸಿ ಈ ವರ್ಷವೇ ಸಿನಿಮಾನ ರಿಲೀಸ್ ಮಾಡುವ ಆಲೋಚನೆ ತಂಡಕ್ಕೆ ಇದೆ.
‘ಇದು ಅದ್ಭುತವಾದ ಸಿನಿಮಾ. ಒಳ್ಳೆಯ ಅನುಭವ. ಒಳ್ಳೆಯ ಕಂಟೆಂಟ್ ಸಿನಿಮಾ. ಕ್ರಾಂತಿ ಸಿನಿಮಾ. ಕಂಟೆಂಟ್ ಜೊತೆ ಮಾಸ್ ಅಂಶಗಳವೂ ಇದೆ. ಕಥೆ ಕೂಡ ಚೆನ್ನಾಗಿದೆ. ವಾರ್ ಎಂದಾಗ ಫೈಟ್ ತೋರಿಸಲೇಬೇಕು. ಆ ರೀತಿಯ ಹಿನ್ನೆಲೆ ಇರುವ ಸಿನಿಮಾ. ದೊಡ್ಡ ಸಂಘರ್ಷದ ಬಗ್ಗೆ ಹೇಳುತ್ತಿದ್ದೇವೆ. ಗ್ರ್ಯಾಂಡ್ ಆಗಿ ಸಿನಿಮಾ ಬರುತ್ತಿದೆ. ಐ ಮ್ಯಾಕ್ಸ್ನಲ್ಲಿ ನೋಡಬೇಕಾದ ಸಿನಿಮಾ ಇದು’ ಎಂದರು ಸತೀಶ್. ಇದು ನೈಜ ಘಟನೆ ಆಧಾರಿತ ಸಿನಿಮಾ ಅನ್ನೋದು ವಿಶೇಷ.
‘ದಿ ರೈಸ್ ಆಫ್ ಅಶೋಕ’ ಚಿತ್ರಕ್ಕೆ ಈ ಮೊದಲು ‘ಅಶೋಕ ಬ್ಲೇಡ್’ ಎಂದಿತ್ತು. ಈ ಚಿತ್ರದ ನಿರ್ದೇಶಕ ವಿನೋದ್ ದೊಂಡಾಲೆ ನಿರ್ದೇಶನ ಮಾಡುತ್ತಿದ್ದರು. ಅವರು ನಿಧನ ಹೊಂದಿದರು. ಈಗ ಈ ಚಿತ್ರಕ್ಕೆ ಟೈಟಲ್ ಬದಲಾಯಿಸಿ ಸಿನಿಮಾ ಕೆಲಸ ಆರಂಭ ಮಾಡಲಾಗುತ್ತಿದೆ. ‘ನಿರ್ದೇಶಕರು ಯಾವ ರೀತಿ ಕಥೆ ಮಾಡಿದ್ದರೋ ಅದನ್ನೇ ಮುಂದುವರಿಸುತ್ತಿದ್ದೇವೆ. ಅವರ ಕನಸನ್ನೇ ಮುಂದುವರಿಸಿಕೊಂಡು ಹೋಗುತ್ತಿದ್ದೇವೆ’ ಎನ್ನುತ್ತಾರೆ ಸತೀಶ್.
ಇದನ್ನೂ ಓದಿ: ‘ದಿ ರೈಸ್ ಆಫ್ ಅಶೋಕ’ ಸಿನಿಮಾದಲ್ಲಿ ಸತೀಶ್ ನೀನಾಸಂ ಮಾಸ್ ಅವತಾರ
ಸತೀಶ್ ನಟನೆಯ ಒಂದು ಚಿತ್ರವಂತೂ ಪ್ರತಿ ವರ್ಷ ರಿಲೀಸ್ ಆಗುತ್ತದೆ. ಈ ವರ್ಷ ಅವರ ನಟನೆಯ ‘ದಿ ರೈಸ್ ಆಫ್ ಅಶೋಕ’ ಚಿತ್ರ ಹಾಗೂ ‘ಅಯೋಗ್ಯ 2’ ರಿಲೀಸ್ ಆಗಲಿದೆ. ‘ಇನ್ನು ಮುಂದೆ ಬರುವ ನನ್ನ ಎಲ್ಲ ಚಿತ್ರಗಳು ದೊಡ್ಡ ಲೆವೆಲ್ನಲ್ಲೇ ಇರುತ್ತದೆ’ ಎಂದಿದ್ದಾರೆ. ಈ ಮೂಲಕ ಸಿನಿಮಾ ಆಯ್ಕೆ ಸಂಪೂರ್ಣವಾಗಿ ಬದಲಾಗಿದೆ ಎನ್ನುವ ಸೂಚನೆ ನೀಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.