ಆಂಧ್ರ ಪ್ರದೇಶ ಹೈಕೋರ್ಟ್ ಮೆಟ್ಟಿಲೇರಿದ ಅಲ್ಲು ಅರ್ಜುನ್: ಕಾರಣ?

|

Updated on: Oct 22, 2024 | 12:56 PM

Allu Arjun: ತಮ್ಮ ಮೇಲೆ ದಾಖಲಾಗಿರುವ ಹಳೆಯ ಪ್ರಕರಣಗಳನ್ನು ರದ್ದು ಮಾಡುವಂತೆ ಮನವಿ ಮಾಡಿ ನಟ ಅಲ್ಲು ಅರ್ಜುನ್, ಆಂಧ್ರ ಪ್ರದೇಶ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಅಷ್ಟಕ್ಕೂ ಅಲ್ಲು ಅರ್ಜುನ್ ವಿರುದ್ಧ ದಾಖಲಾಗಿದ್ದ ಆ ಪ್ರಕರಣಗಳು ಯಾವುವು?

ಆಂಧ್ರ ಪ್ರದೇಶ ಹೈಕೋರ್ಟ್ ಮೆಟ್ಟಿಲೇರಿದ ಅಲ್ಲು ಅರ್ಜುನ್: ಕಾರಣ?
Follow us on

ಅಲ್ಲು ಅರ್ಜುನ್ ಟಾಲಿವುಡ್​ನ ಸ್ಟಾರ್ ನಟ. ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ಕಳೆದ ವರ್ಷ ‘ಪುಷ್ಪ’ ಸಿನಿಮಾದ ಅತ್ಯುತ್ತಮ ನಟನೆಗೆ ರಾಷ್ಟ್ರಪ್ರಶಸ್ತಿ ಸಹ ಅಲ್ಲು ಅರ್ಜುನ್​ಗೆ ದೊರೆತಿದೆ. ಈಗ ‘ಪುಷ್ಪ 2’ ಸಿನಿಮಾದ ಬಿಡುಗಡೆಯ ಹೊಸ್ತಿಲಲ್ಲಿದ್ದಾರೆ. ‘ಪುಷ್ಪ 2’ ಸಿನಿಮಾದ ಬಗ್ಗೆ ಭಾರಿ ನಿರೀಕ್ಷೆಗಳಿದ್ದು, ಸಿನಿಮಾ ಬಿಡುಗಡೆಗೆ ಮುಂಚೆಯೇ 1000 ಕೋಟಿಗೂ ಹೆಚ್ಚು ಹಣ ಗಳಿಸಿದೆ. ಅಲ್ಲು ಅರ್ಜುನ್ ವೃತ್ತಿ ಜೀವನವಂತೂ ಭಾರಿ ಏರು ಗತಿಯಲ್ಲಿ ಸಾಗುತ್ತಿದೆ. ಆದರೆ ಇದೇ ಸಮಯದಲ್ಲಿ ಸಮಸ್ಯೆಯೊಂದು ಎದುರಾಗಿ ಅದರಿಂದ ಪರಿಷ್ಕಾರ ಪಡೆಯಲು ಅಲ್ಲು ಅರ್ಜುನ್ ಆಂಧ್ರ ಪ್ರದೇಶ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಅಲ್ಲು ಅರ್ಜುನ್, ತಮ್ಮ ಮೇಲಿರುವ ಹಳೆಯ ಪ್ರಕರಣವೊಂದರಿಂದ ವಿಮೋಚನೆ ಬಯಸಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.

ಇದೇ ವರ್ಷದ ಆರಂಭದಲ್ಲಿ ಆಂಧ್ರ ಪ್ರದೇಶ ವಿಧಾನಸಭೆ ಚುನಾವಣೆ ನಡೆದಿತ್ತು. ತೆಲುಗು ಚಿತ್ರರಂಗದ ಹಲವು ನಟ-ನಟಿಯರು ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿದ್ದರು. ಆದರೆ ನಟ ಅಲ್ಲು ಅರ್ಜುನ್, ಚುನಾವಣಾ ಪ್ರಚಾರದ ನಿಯಮ ಪಾಲಿಸದೆ ವೈಸಿಆರ್​ಪಿ ಅಭ್ಯರ್ಥಿ ಶಿಲ್ಪಾ ರವಿಚಂದರ್ ಕಿಶೋರ್ ರೆಡ್ಡಿ ಅವರ ಪರವಾಗಿ ಪ್ರಚಾರ ಮಾಡಿದ್ದರು. ಏಕಾ-ಏಕಿ ನಂದ್ಯಾಲ್ ಕ್ಷೇತ್ರಕ್ಕೆ ಭೇಟಿ ನೀಡಿದ್ದ ಅಲ್ಲು ಅರ್ಜುನ್, ಶಿಲ್ಪಾ ರವಿಚಂದರ್ ಕಿಶೋರ್ ರೆಡ್ಡಿ ಅವರ ಮನೆಗೆ ತೆರಳಿದ್ದರು. ಅಲ್ಲು ಅರ್ಜುನ್ ಆಗಮಿಸಿರುವ ವಿಷಯ ತಿಳಿದು ಶಿಲ್ಪಾ ರವಿಚಂದರ್ ಕಿಶೋರ್ ರೆಡ್ಡಿ ಅವರ ಮನೆಯ ಬಳಿ ಭಾರಿ ಸಂಖ್ಯೆಯ ಜನ ಸೇರಿದ್ದರು. ಆ ಸಮಯದಲ್ಲಿ ಅಲ್ಲು ಅರ್ಜುನ್, ಶಿಲ್ಪಾ ರವಿಚಂದರ್ ಕಿಶೋರ್ ರೆಡ್ಡಿಯನ್ನು ಗೆಲ್ಲಿಸುವಂತೆ ಸಂಜ್ಞೆ ಮಾಡಿದ್ದರು. ಶಿಲ್ಪಾ ರವಿಚಂದರ್ ಕಿಶೋರ್ ರೆಡ್ಡಿಯ ಕೈ ಹಿಡಿದು ಎತ್ತಿ ಬೆಂಬಲ ತೋರ್ಪಡಿಸಿದ್ದರು.

ಇದನ್ನೂ ಓದಿ:ಅಲ್ಲು ಅರ್ಜುನ್ ಹೆಸರು ಹೇಳಿ, ಅಭಿಮಾನಿಗಳ ಆಕ್ರೋಶ ತಣ್ಣಗೆ ಮಾಡಿದ ಪವನ್ ಕಲ್ಯಾಣ್

ಅಲ್ಲು ಅರ್ಜುನ್, ಶಿಲ್ಪಾ ರವಿಚಂದರ್ ಕಿಶೋರ್ ರೆಡ್ಡಿ ಗೆ ಬೆಂಬಲ ಸೂಚಿಸಿ ಅವರ ಪರ ಪ್ರಚಾರ ಮಾಡಿದ್ದು ಭಾರಿ ಸುದ್ದಿಯಾಗಿತ್ತು. ಆ ಸಮಯದಲ್ಲಿ ಅಲ್ಲು ಅರ್ಜುನ್ ವಿರುದ್ಧ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ದಾಖಲಾಗಿತ್ತು. ಸೆಕ್ಷನ್ 144, ಪೊಲೀಸ್ ಕಾಯ್ದೆ 30 ಅಡಿಯಲ್ಲಿ ಅಲ್ಲು ಅರ್ಜುನ್ ವಿರುದ್ಧ ಪ್ರಕರಣ ದಾಖಲಾಗಿತ್ತು. ತಮ್ಮ ವಿರುದ್ಧ ದಾಖಲಾದ ಪ್ರಕರಣಗಳನ್ನು ರದ್ದು ಮಾಡುವಂತೆ ಅಲ್ಲು ಅರ್ಜುನ್, ಆಂಧ್ರ ಹೈಕೋರ್ಟ್​ಗೆ ಮನವಿ ಸಲ್ಲಿಸಿದ್ದಾರೆ. ಅಲ್ಲು ಅರ್ಜುನ್ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಆಂಧ್ರ ಹೈಕೋರ್ಟ್​ ಇಂದು ನಡೆಸಲಿದೆ. ಅಲ್ಲು ಅರ್ಜುನ್ ವಿರುದ್ಧ ಪ್ರಕರಣವನ್ನು ಕೈಬಿಡುವಂತೆ ನ್ಯಾಯಾಲಯ ಸೂಚಿಸಲಿದೆಯೇ ಅಥವಾ ಪ್ರಕರಣದ ವಿಚಾರಣೆ ಮುಂದುವರೆಯಲಿದೆಯೇ ಕಾದು ನೋಡಬೇಕಿದೆ.

ವೈಸಿಪಿ ಅಭ್ಯರ್ಥಿಯಾಗಿದ್ದ ಶಿಲ್ಪಾ ರವಿಚಂದರ್ ಕಿಶೋರ್ ರೆಡ್ಡಿ ಪರವಾಗಿ ಅಲ್ಲು ಅರ್ಜುನ್ ಪ್ರಚಾರ ಮಾಡಿದ್ದು ಭಾರಿ ವಿವಾದಕ್ಕೆ ಕಾರಣವಾಗಿತ್ತು. ತಮ್ಮ ಅತ್ಯಂತ ಹತ್ತಿರದ ಸಂಬಂಧಿಯಾದ ಪವನ್ ಕಲ್ಯಾಣ್ ಪರವಾಗಿ ಪ್ರಚಾರ ಮಾಡದಿದ್ದ ಅಲ್ಲು ಅರ್ಜುನ್, ಪವನ್​ರ ಎದುರಾಳಿ ಪಕ್ಷದ ಅಭ್ಯರ್ಥಿ ಪರವಾಗಿ ಪ್ರಚಾರ ಮಾಡಿದ್ದು ಟೀಕೆಗೆ ಗುರಿಯಾಗಿತ್ತು. ಪವನ್ ಕಲ್ಯಾಣ್ ಸಹೋದರ ನಾಗಬಾಬು, ಟ್ವೀಟ್​ ಮೂಲಕ ಅಲ್ಲು ಅರ್ಜುನ್ ಅನ್ನು ತಮ್ಮ ಕುಟುಂಬದವನೇ ಅಲ್ಲವೆಂದು ಟೀಕಿಸಿದ್ದರು. ಚುನಾವಣೆ ಫಲಿತಾಂಶ ಬಂದಾಗ ಅಲ್ಲು ಅರ್ಜುನ್​ರ ಗೆಳೆಯ ಶಿಲ್ಪಾ ರವಿಚಂದರ್ ಕಿಶೋರ್ ರೆಡ್ಡಿ, ಟಿಡಿಪಿ ಅಭ್ಯರ್ಥಿ ಫಾರೂಕ್ ವಿರುದ್ಧ ಸೋಲನುಭವಿಸಿದರು. ಆದರೆ ಅಲ್ಲು ಅರ್ಜುನ್ ಮಾಡಿದ ಪ್ರಚಾರದಿಂದಾಗಿ ಅವರ ಹಾಗೂ ಮೆಗಾ ಫ್ಯಾಮಿಲಿ ನಡುವೆ ಮುನಿಸು ಪ್ರಾರಂಭವಾಯ್ತು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ