ಸೂಪರ್ ಸ್ಟಾರ್ ರಜನಿಕಾಂತ್ ನಟನೆ, ಸ್ಟೈಲ್ ಜೊತೆಗೆ ತಮ್ಮ ಸರಳತೆಯಿಂದಲೂ ಜನಪ್ರಿಯರು. ಭಾರಿ ದೊಡ್ಡ ಮೊತ್ತದ ಸಂಭಾವನೆ ಪಡೆವ ನಟ ರಜನೀಕಾಂತ್ ಆಗಿದ್ದರು ಸಹ ಕೆಲವು ಸಂದರ್ಭಗಳಲ್ಲಿ ತೀರಾ ಸಾಮಾನ್ಯರಂತೆಯೇ ಬದುಕುತ್ತಾರೆ. ಸರಳವಾದ ಬಟ್ಟೆ, ವೇಷ ಮರೆಸಿಕೊಂಡು ಬಸ್ಸುಗಳಲ್ಲಿ, ಪಾರ್ಕುಗಳಲ್ಲಿ ಓಡಾಡುವುದು ಹೀಗೆ ಆಗಾಗ್ಗೆ ಇಂಥಹಾ ಸುದ್ದಿಗಳಿಂದ ರಜನೀಕಾಂತ್ ಸದ್ದಾಗುತ್ತಿರುತ್ತಾರೆ. ರಜನೀಕಾಂತ್ರ ಸರಳತೆ ಬಗ್ಗೆ ಹಲವಾರು ಕತೆಗಳು ಈಗಾಗಲೇ ಜನಮಾನಸದಲ್ಲಿವೆ. ಇದೀಗ ಖ್ಯಾತ ನಟ, ದಿಗ್ಗಜ ಅಮಿತಾಬ್ ಬಚ್ಚನ್ ಅವರು ತಾವು ಕಂಡ ರಜನೀಕಾಂತ್ ಸರಳತೆಯನ್ನು ವರ್ಣಿಸಿದ್ದಾರೆ.
ರಜನೀಕಾಂತ್ ತಮ್ಮ ಸ್ಟಾರ್ ಗಿರಿಯ ಆರಂಭದ ದಿನಗಳಲ್ಲಿ ತಮಿಳು ಮಾತ್ರವಲ್ಲದೆ ಕನ್ನಡ, ತೆಲುಗು ಕೆಲ ಹಿಂದಿ ಸಿನಿಮಾಗಳಲ್ಲಿಯೂ ಸಹ ನಟಿಸಿದ್ದರು. ದಶಕಗಳ ಹಿಂದೆ ತಮ್ಮೊಂದಿಗೆ ಹಿಂದಿ ಸಿನಿಮಾದಲ್ಲಿ ನಟಿಸುವಾಗ ರಜನೀಕಾಂತ್ ಹೇಗಿರುತ್ತಿದ್ದರು ಎಂಬುದನ್ನು ಅಮಿತಾಬ್ ಬಚ್ಚನ್ ವರ್ಣಿಸಿದ್ದಾರೆ.
ಇದನ್ನೂ ಓದಿ:ರಜನೀಕಾಂತ್ ‘ವೆಟ್ಟೆಯಾನ್’ ಟ್ರೈಲರ್ ಬಿಡುಗಡೆ, ಧಂ ಇಲ್ಲ ಎಂದ ಫ್ಯಾನ್ಸ್
‘ವೆಟ್ಟೆಯಾನ್’ ಸಿನಿಮಾದಲ್ಲಿ ರಜನೀಕಾಂತ್ ಮತ್ತು ಅಮಿತಾಬ್ ಬಚ್ಚನ್ ಒಟ್ಟಿಗೆ ನಟಿಸಿದ್ದಾರೆ. ಸುಮಾರು 33 ವರ್ಷಗಳ ಬಳಿಕ ರಜನೀಕಾಂತ್ ಮತ್ತು ಅಮಿತಾಬ್ ಬಚ್ಚನ್ ಒಟ್ಟಿಗೆ ನಟಿಸುತ್ತಿದ್ದಾರೆ. ಇತ್ತೀಚೆಗಷ್ಟೆ ‘ವೆಟ್ಟೆಯಾನ್’ ಸಿನಿಮಾದ ಆಡಿಯೋ ಲಾಂಚ್ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಅಮಿತಾಬ್ ಬಚ್ಚನ್ ಹಾಜರಿರಲಿಲ್ಲ ಆದರೆ ತಮ್ಮ ವಾಯ್ಸ್ ನೋಟ್ ಅನ್ನು ಕಳಿಸಿದ್ದರು. ಅದನ್ನು ಕಾರ್ಯಕ್ರಮದಲ್ಲಿ ಪ್ಲೇ ಮಾಡಲಾಯ್ತು. ರಜನೀಕಾಂತ್ ಬಗ್ಗೆ ಮಾತನಾಡಿರುವ ಬಚ್ಚನ್, ‘ಹಮ್’ ಸಿನಿಮಾದ ಚಿತ್ರೀಕರಣ ಮಾಡಬೇಕಾದರೆ ಬ್ರೇಕ್ಗಳ ಸಮಯದಲ್ಲಿ ರಜನೀಕಾಂತ್ ಅಲ್ಲೇ ನೆಲದ ಮೇಲೆ ಮಲಗಿ ಬಿಡುತ್ತಿದ್ದರು, ನಾನು ನನ್ನ ಎಸಿ ವಾಹನದಲ್ಲಿ ಮಲಗುತ್ತಿದ್ದೆ ಎಂದಿದ್ದಾರೆ ಬಚ್ಚನ್. ‘ರಜನೀಕಾಂತ್ ನೆಲದ ಮೇಲೆ ಮಲಗಿದ್ದನ್ನು ನೋಡಿ ನಾನು ಎಸಿ ವಾಹನದಿಂದ ಹೊರಗೆ ಬರುತ್ತಿದ್ದೆ’ ಎಂದಿದ್ದಾರೆ.
‘ವೆಟ್ಟೈಯಾನ್’ ನನ್ನ ಮೊದಲ ತಮಿಳು ಸಿನಿಮಾ. ಸಹಜವಾಗಿಯೇ ಈ ಬಗ್ಗೆ ನಾನು ಉತ್ಸುಕನಾಗಿದ್ದೇನೆ. ರಜನೀಕಾಂತ್, ಎಲ್ಲ ಸ್ಟಾರ್ಗಳಿಗಿಂತಲೂ ಸುಪ್ರೀಂ ಸ್ಟಾರ್ ಎಂದಿದ್ದಾರೆ ಬಚ್ಚನ್. ‘ವೆಟ್ಟೈಯಾನ್’ ಸಿನಿಮಾದಲ್ಲಿ 33 ವರ್ಷಗಳ ಬಳಿಕ ರಜನಿ, ಬಚ್ಚನ್ ಒಟ್ಟಿಗೆ ನಟಿಸಿದ್ದಾರೆ. ಸಿನಿಮಾ ಅಕ್ಟೋಬರ್ 10 ರಂದು ಬಿಡುಗಡೆ ಆಗಲಿದೆ. ಸಿನಿಮಾದಲ್ಲಿ ರಜನೀಕಾಂತ್ ಪೊಲೀಸ್ ಪಾತ್ರದಲ್ಲಿ ನಟಿಸಿದ್ದರೆ, ಬಚ್ಚನ್ ವಕೀಲರ ಪಾತ್ರದಲ್ಲಿ ನಟಿಸಿದ್ದಾರೆ. ಇನ್ನು ಫಹಾದ್ ಫಾಸಿಲ್, ರಾಣಾ ದಗ್ಗುಬಾಟಿ, ಕನ್ನಡದ ಕಿಶೋರ್, ರಾವ್ ರಮೇಶ್ ಇನ್ನೂ ಕೆಲವರು ನಟಿಸಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ