ನಟ ವಿಜಯ್ ದೇವರಕೊಂಡ (Vijay Deverakonda) ಮಾತ್ರವಲ್ಲದೇ ಅವರ ಸಹೋದರ ಆನಂದ್ ದೇವರಕೊಂಡ ಕೂಡ ತೆಲುಗು ಚಿತ್ರರಂಗದಲ್ಲಿ ಬ್ಯುಸಿ ಆಗಿದ್ದಾರೆ. ಆದರೆ ಅವರಿಗೆ ಈ ತನಕ ದೊಡ್ಡ ಯಶಸ್ಸು ಸಿಕ್ಕಿರಲಿಲ್ಲ. ಮಾಡಿದ್ದು ಮೂರು ಮತ್ತೊಂದು ಸಿನಿಮಾ ಆದರೂ ಸ್ಟಾರ್ ನಟನ ಸಹೋದರ ಎಂಬ ಕಾರಣಕ್ಕೆ ಆನಂದ್ ದೇವರಕೊಂಡ (Anand Deverakonda) ಅವರೂ ಫೇಮಸ್ ಆಗಿದ್ದರು. ಆದರೆ ಈಗ ಸ್ವಂತ ಬಲದಿಂದ ಅವರಿಗೆ ಬಿಗ್ ಸಕ್ಸಸ್ ಸಿಕ್ಕಿದೆ. ಇತ್ತೀಚೆಗೆ ಬಿಡುಗಡೆ ಆದ ‘ಬೇಬಿ’ ಸಿನಿಮಾದಲ್ಲಿ ಅವರು ಮುಖ್ಯಭೂಮಿಕೆ ನಿಭಾಯಿಸಿದ್ದಾರೆ. ತೆಲುಗಿನ ಈ ಸಿನಿಮಾ ಸೂಪರ್ ಹಿಟ್ ಆಗಿದೆ. ಬಾಕ್ಸ್ ಆಫೀಸ್ನಲ್ಲಿ ಬಂಗಾರದ ಬೆಳೆ ತೆಗೆಯುತ್ತಿದೆ. ಆರು ದಿನದಲ್ಲಿ ವಿಶ್ವಾದ್ಯಂತ ‘ಬೇಬಿ’ (Baby Movie) ಚಿತ್ರಕ್ಕೆ 43.8 ಕೋಟಿ ರೂಪಾಯಿ ಗಳಿಕೆ ಆಗಿದೆ ಎಂದು ವರದಿಯಾಗಿದೆ.
ಕಡಿಮೆ ಬಜೆಟ್ನಲ್ಲಿ ‘ಬೇಬಿ’ ಸಿನಿಮಾ ನಿರ್ಮಾಣ ಆಗಿದೆ. ಆದ್ದರಿಂದ ಚಿತ್ರತಂಡಕ್ಕೆ ಹೆಚ್ಚು ಲಾಭ ಆಗುತ್ತಿದೆ. ಸಾಯಿ ರಾಜೇಶ್ ನಿರ್ದೇಶನ ಮಾಡಿದ್ದಾರೆ. ಆನಂದ್ ದೇವರಕೊಂಡ ಮತ್ತು ವೈಷ್ಣವಿ ಚೈತನ್ಯ ಅವರು ಜೋಡಿಯಾಗಿ ನಟಿಸಿದ್ದಾರೆ. ಅವರ ಅಭಿನಯಕ್ಕೆ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ‘ಪ್ರಸಾದ್ ಮಲ್ಟಿಪ್ಲೆಕ್ಸ್’ನಲ್ಲಿ ಪ್ರೀಮಿಯರ್ ಶೋ ಮಾಡಿದಾಗಲೇ ಭರ್ಜರಿ ಪ್ರಶಂಸೆ ಕೇಳಿಬಂದಿತ್ತು. ಆಂಧ್ರ ಮತ್ತು ತೆಲಂಗಾಣದಲ್ಲಿ ಈ ಸಿನಿಮಾವನ್ನು ಜನರು ಗೆಲ್ಲಿಸಿದ್ದಾರೆ. ಯಶಸ್ವಿಯಾಗಿ ಎರಡನೇ ವಾರಕ್ಕೆ ‘ಬೇಬಿ’ ಸಿನಿಮಾ ಕಾಲಿಡುತ್ತಿದೆ.
ಇದನ್ನೂ ಓದಿ: Rashmika Mandanna: ವಿಜಯ್ ದೇವರಕೊಂಡ ತಮ್ಮನ ಸಿನಿಮಾ ನೋಡಲು ಹೋಗಿ ಕಣ್ಣೀರು ಹಾಕಿದ ರಶ್ಮಿಕಾ ಮಂದಣ್ಣ
‘ಬೇಬಿ’ ಸಿನಿಮಾದ ಬಗ್ಗೆ ವಿಜಯ್ ದೇವರಕೊಂಡ ಅವರು ಸಖತ್ ಕಾನ್ಫಿಡೆಂಟ್ ಆಗಿದ್ದರು. ಪ್ರೀಮಿಯರ್ ನೋಡಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದ ಅವರು, ‘ಈಗ ನಾನು ಬೇಬಿ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ. 3-4 ದಿನ ಕಳೆದ ನಂತರ ಒಂದು ದೊಡ್ಡ ಇವೆಂಟ್ನಲ್ಲಿ ಮಾತಾಡುತ್ತೇನೆ’ ಎಂದಿದ್ದರು. ಚಿತ್ರದ ಸಕ್ಸಸ್ ಮೀಟ್ ನಡೆಯಲಿದೆ ಎಂದು ಅಂದೇ ಅವರು ಊಹಿಸಿದ್ದರು. ರಶ್ಮಿಕಾ ಮಂದಣ್ಣ ಕೂಡ ಸಿನಿಮಾಗೆ ಫಿದಾ ಆಗಿದ್ದರು. ಶೀಘ್ರದಲ್ಲೇ ಈ ಸಿನಿಮಾ 50 ಕೋಟಿ ರೂಪಾಯಿ ಕಲೆಕ್ಷನ್ ಮಾಡಲಿದೆ.
ಇದನ್ನೂ ಓದಿ: Baby Movie: ತಮ್ಮನ ‘ಬೇಬಿ’ ಸಿನಿಮಾ ನೋಡಿಕೊಂಡು ಬಂದು ಅಚ್ಚರಿಯ ಹೇಳಿಕೆ ನೀಡಿದ ವಿಜಯ್ ದೇವರಕೊಂಡ
ನಿರ್ದೇಶಕ ಸಾಯಿ ರಾಜೇಶ್ ಅವರು ಈ ಸಿನಿಮಾದಲ್ಲಿ ಒಂದು ಹೃದಯಸ್ಪರ್ಶಿಯಾದ ಲವ್ಸ್ಟೋರಿ ಹೇಳಿದ್ದಾರೆ. ನಟಿ ವೈಷ್ಣವಿ ಚೈತನ್ಯ ಅವರು ಎರಡು ಶೇಡ್ನ ಪಾತ್ರ ಮಾಡಿದ್ದಾರೆ. ಟ್ರೇಲರ್ ರಿಲೀಸ್ ಆದಾಗ ಕೊಂಚ ವಿವಾದ ಸೃಷ್ಟಿ ಆಗಿತ್ತು. ಆದರೆ ಅದನ್ನು ಮರೆಸುವ ರೀತಿಯಲ್ಲಿ ‘ಬೇಬಿ’ ಚಿತ್ರಕ್ಕೆ ಯಶಸ್ಸು ಸಿಕ್ಕಿದೆ. ಈ ಸಿನಿಮಾದ ಗೆಲುವಿನ ಬಳಿಕ ಆನಂದ್ ದೇವರಕೊಂಡ ಅವರ ಡಿಮ್ಯಾಂಡ್ ಹೆಚ್ಚಿದೆ. ಈ ಚಿತ್ರ ಟೋಟಲ್ ಎಷ್ಟು ಕೋಟಿ ರೂಪಾಯಿ ಕಲೆಕ್ಷನ್ ಮಾಡಲಿದೆ ಎಂಬುದನ್ನು ತಿಳಿಯುವ ಕೌತುಕ ಮೂಡಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.