ಹೃದಯಾಘಾತದಿಂದ ಖ್ಯಾತ ನಟ ಸುದೀಪ್ ಪಾಂಡೆ ನಿಧನ; ಅಭಿನಯಿಸುವಾಗಲೇ ಕೊನೆ ಉಸಿರು
ಪ್ರಸಿದ್ಧ ಭೋಜ್ಪುರಿ ನಟ ಮತ್ತು ನಿರ್ಮಾಪಕ ಸುದೀಪ್ ಪಾಂಡೆ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಮುಂಬೈನಲ್ಲಿ ಚಿತ್ರೀಕರಣದ ವೇಳೆ ಅವರಿಗೆ ಹೃದಯಾಘಾತ ಸಂಭವಿಸಿದೆ. ಅವರ ಆಕಸ್ಮಿಕ ನಿಧನ ಭೋಜ್ಪುರಿ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ. ಅವರು ನಟನೆ, ನಿರ್ಮಾಣದ ಜೊತೆ ರಾಜಕೀಯದಲ್ಲೂ ಸಕ್ರಿಯರಾಗಿದ್ದರು. ಇತ್ತೀಚೆಗೆ ಸಿನಿಮಾ ನಿರ್ಮಾಣದಲ್ಲಿ ಅವರು ನಷ್ಟ ಅನುಭವಿಸಿದ್ದರು.
ಹೃದಯಘಾತದಿಂದ ಅನೇಕ ಹೀರೋಗಳು ನಿಧನ ಹೊಂದಿದ್ದಾರೆ. ಈಗ ಭೋಜ್ಪುರಿ ಭಾಷೆಯ ನಟ ಹಾಗೂ ನಿರ್ಮಾಪಕ ಸುದೀಪ್ ಪಾಂಡೆ ಅವರು ಮೃತಪಟ್ಟಿದ್ದಾರೆ. ಅವರಿಗೆ ಹೃದಯಾಘಾತ ಉಂಟಾಗಿದೆ. ಸುದೀಪ್ ಪಾಂಡೆ ನಿಧನ ವಾರ್ತೆ ಅವರ ಅಭಿಮಾನಿಗಳಿಗೆ ಹಾಗೂ ಭೋಜ್ಪುರಿ ಇಂಡಸ್ಟ್ರಿಗೆ ಬರಸಿಡಿಲು ಬಡಿದಂತೆ ಆಗಿದೆ. ಸೋಶಿಯಲ್ ಮೀಡಿಯಾದಲ್ಲಿ ಅವರ ಆತ್ಮಕ್ಕೆ ಶಾಂತಿ ಕೋರಲಾಗುತ್ತಿದೆ.
ಜನವರಿ 15ರಂದು ಸುದೀಪ್ ಪಾಂಡೆಗೆ ಹೃದಯಾಘಾತ ಆಗಿದೆ. ಅವರು ಆ ಸಂದರ್ಭದಲ್ಲಿ ಮುಂಬೈನಲ್ಲಿ ಇದ್ದರು. ಅವರ ನಿಧನವಾರ್ತೆ ಕಾಡ್ಗಿಚ್ಚಿನಂತೆ ಹಬ್ಬಿದೆ. ಅವರು ಹಲವು ವರ್ಷಗಳಿಂದ ಭೋಜ್ಪುರಿ ಇಂಡಸ್ಟ್ರಿಯಲ್ಲಿ ಗುರುತಿಸಿಕೊಂಡಿದ್ದರು. ನಟನೆಯ ಜೊತೆಗೆ ನಿರ್ಮಾಣದಲ್ಲೂ ಅವರು ತೊಡಗಿಕೊಂಡಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಅವರ ಆಪ್ತರು ಈ ವಿಚಾರ ಖಚಿತಪಡಿಸಿದ್ದಾರೆ. ಅವರ ಸಾವು ಭೋಜ್ಪುರಿ ಚಿತ್ರರಂಗಕ್ಕೆ ತುಂಬಲಾರದ ನಷ್ಟವನ್ನುಂಟು ಮಾಡಿದೆ.
ನಟಿಸುವಾಗಲೇ ಕೊನೆಯುಸಿರು
ಜನವರಿ 5ರಂದು ಸುದೀಪ್ ಅವರು ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಅವರಿಗೆ ಅಭಿಮಾನಿಗಳು ಶುಭಾಶಯ ಕೋರಿದ್ದರು. ಜನ್ಮದಿನಾಚರಣೆ ಮುಗಿಸಿದ ಬಳಿಕ ಅವರು ಶೂಟಿಂಗ್ನಲ್ಲಿ ತೊಡಗಿಕೊಂಡಿದ್ದರು. ಅವರು ತಮ್ಮ ಮುಂದಿನ ಚಿತ್ರದ ಶೂಟ್ಗಾಗಿ ಮುಂಬೈಗೆ ಬಂದಿದ್ದರು. ಅವರು ನಟಿಸುವಾಗಲೇ ಹೃದಯಾಘಾತ ಆಗಿದೆ ಎನ್ನಲಾಗಿದೆ. ಆ ಬಳಿಕ ಆಸ್ಪತ್ರೆಗೆ ಸೇರಿಸಿದರೂ ಪ್ರಯೋಜನ ಆಗಿಲ್ಲ.
ನಟನೆ-ರಾಜಕೀಯ
ಸುದೀಪ್ ಪಾಂಡೆ ಅವರು 2007ರಲ್ಲಿ ಚಿತ್ರರಂಗಕ್ಕೆ ಬಂದರು. ‘ಭೋಜ್ಪುರಿಯಾ ಭಯ್ಯಾ’ ಅವರ ಮೊದಲ ಸಿನಿಮಾ. ಅವರು ಕಡಿಮೆ ಸಮಯದಲ್ಲಿ ಖ್ಯಾತಿ ಪಡೆದರು. ಅವರು ಆ್ಯಕ್ಷನ್ ಹೀರೋ ಆಗಿ ಗುರುತಿಸಿಕೊಂಡಿದ್ದಾರೆ. ‘ಖೂನಿ ದಂಗಲ್’ ‘ಮಸಿಹಾ ಬಾಬು’, ‘ಹಮರ್ ಸಂಗಿ ಬಜರಂಗಿ ಬಲಿ’, ‘ಹಮಾರ್ ಲಾಲ್ಕರ್’, ‘ಶರಾಬಿ’, ‘ಖುರಬಾನಿ’ ಮೊದಲಾದ ಸಿನಿಮಾಗಳಲ್ಲಿ ಸುದೀಪ್ ನಟಿಸಿದ್ದಾರೆ. ಇನ್ನೂ ಬದುಕಿ ಬಾಳಬೇಕಿದ್ದ ಅವರು ಆಗಲೇ ಅವರು ಕೊನೆಯಿಸಿರು ಎಳೆದಿದ್ದಾರೆ. ರಾಜಕೀಯದ ಜೊತೆ ನಂಟು ಹೊಂದಿದ್ದ ಸುದೀಪ್ ಅವರು, ಎನ್‌ಸಿಪಿ ಪಕ್ಷದ ಸದಸ್ಯರಾಗಿದ್ದರು. ಈ ಮೊದಲು ಅವರು ಸಾಫ್ಟ್ ವೇರ್ ಇಂಜಿನಿಯರ್ ಕೂಡ ಆಗಿದ್ದರು.
ಹ್ಯಾಂಡ್ಸಮ್ ಹಂಕ್
ಸುದೀಪ್ ಪಾಂಡೆ ಅವರು ಫಿಟ್ನೆಸ್ಗೆ ಹೆಚ್ಚು ಪ್ರಾಮುಖ್ಯತೆ ಕೊಡುತ್ತಿದ್ದರು. ಜಿಮ್ನಲ್ಲಿ ನಿತ್ಯವೂ ವರ್ಕೌಟ್ ಮಾಡುತ್ತಿದ್ದರು. ಅವರಿಗೆ ಹ್ಯಾಂಡ್ಸಮ್ ಹಂಕ್ ಎಂಬ ಬಿರುದೂ ಇತ್ತು. ಇಷ್ಟು ಫಿಟ್ ಆಗಿದ್ದರೂ ಹೃದಯಾಘಾತ ಆಗಿದ್ದು ಹೇಗೆ ಎಂಬ ಪ್ರಶ್ನೆ ಅನೇಕರಿಗೆ ಮೂಡಿದೆ.
ಇದನ್ನೂ ಓದಿ: ಕನ್ನಡದ ಹಿರಿಯ ನಟ ಸರಿಗಮ ವಿಜಿ ನಿಧನ
ಸಾಲದ ಸುಳಿ
ಸುದೀಪ್ ಪಾಂಡೆ ಕೂಡ ಸಾಕಷ್ಟು ಸಮಸ್ಯೆಗಳಿಂದ ಬಳಲುತ್ತಿದ್ದರು ಎಂದು ಅವರ ಸ್ನೇಹಿತರೊಬ್ಬರು ಹೇಳಿದ್ದಾರೆ. ‘ವಿಕ್ಟರ್’ ಹೆಸರಿನ ಸಿನಿಮಾ ನಿರ್ಮಾಣ ಮಾಡಿದ್ದರು. ಈ ಚಿತ್ರ ಫ್ಲಾಪ್ ಆದ ಕಾರಣ ಸುದೀಪ್ ತಮ್ಮ ಎಲ್ಲಾ ಹಣವನ್ನು ಕಳೆದುಕೊಂಡು ಸಾಲದ ಸುಳಿಗೆ ಸಿಲುಕಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.