‘ಬಿಗ್ ಬಾಸ್ ಕನ್ನಡ ಸೀಸನ್ 8’ ಅನಿರೀಕ್ಷಿತವಾಗಿ ಅರ್ಧಕ್ಕೆ ನಿಲ್ಲುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಆದರೆ ಕೊರೊನಾ ವೈರಸ್ ಕಾರಣದಿಂದಾಗಿ ಶೋ ನಿಲ್ಲಿಸುವುದು ಅನಿವಾರ್ಯ ಆಯಿತು. 71ನೇ ದಿನಕ್ಕೆ ಎಲ್ಲ ಸ್ಪರ್ಧಿಗಳು ಮನೆಯಿಂದ ಹೊರಬರಬೇಕಾಯಿತು. ಬಿಗ್ ಬಾಸ್ ಮುಗಿದಿದ್ದರೂ ಕೂಡ ಅದರ ಮನರಂಜನೆ ಇನ್ನೂ ನಿಂತಿಲ್ಲ. ತನ್ನ ಪ್ರೇಕ್ಷಕರಿಗೆ ಒಂದಿಲ್ಲೊಂದು ರೀತಿಯಲ್ಲಿ ಮನರಂಜನೆ ನೀಡಲು ಕಲರ್ಸ್ ಕನ್ನಡ ವಾಹಿನಿ ಪ್ರಯತ್ನಿಸುತ್ತಿದೆ. ಈಗ ಮತ್ತೆ ಬಿಗ್ ಬಾಸ್ ಸ್ಪರ್ಧಿಗಳ ಜೊತೆಗೆ ಸುದೀಪ್ ವಾರದ ಪಂಚಾಯಿತಿ ಮಾಡಿದ್ದಾರೆ. ಎಲ್ಲರನ್ನೂ ಜೊತೆ ಸೇರಿಸಿಕೊಂಡು ಮಾತನಾಡಿದ್ದಾರೆ.
ಪ್ರತಿವಾರ ಬಿಗ್ ಬಾಸ್ನಿಂದ ಎಲಿಮಿನೇಟ್ ಆದ ಸ್ಪರ್ಧಿಗಳನ್ನು ವೇದಿಕೆಗೆ ಕರೆದು ಕಿಚ್ಚ ಮಾತನಾಡಿಸುತ್ತಿದ್ದರು. ಆದರೆ ಈ ಶೋ ಮುಗಿಯುವುದಕ್ಕಿಂತಲೂ ನಾಲ್ಕು ವಾರ ಮುನ್ನವೇ ಸುದೀಪ್ಗೆ ಆರೋಗ್ಯ ಕೈ ಕೊಟ್ಟಿದ್ದರಿಂದ ಅವರು ವೀಕೆಂಡ್ ಎಪಿಸೋಡ್ಗಳನ್ನು ನಡೆಸಿಕೊಡಲು ಸಾಧ್ಯವಾಗಿರಲಿಲ್ಲ. ಯಾವುದೇ ಸ್ಪರ್ಧಿಯನ್ನೂ ವೇದಿಕೆಗೆ ಕರೆದು ಮಾತನಾಡಿಸಲಿಲ್ಲ. ಕೊನೇ ದಿನ ಮನೆಯಿಂದ ಹೊರಬಂದ 11 ಸ್ಪರ್ಧಿಗಳಿಗೂ ಸುದೀಪ್ ಜೊತೆ ಮಾತನಾಡುವ ಅವಕಾಶ ಸಿಕ್ಕಿರಲಿಲ್ಲ. ಈಗ ಸುದೀಪ್ ಜೊತೆ ಅವರೆಲ್ಲರ ಮಾತುಕತೆಗಾಗಿ ಕಲರ್ಸ್ ಕನ್ನಡ ವಾಹಿನಿ ಒಂದು ವೇದಿಕೆ ಒದಗಿಸಿದೆ.
ಸದ್ಯ ಎಲ್ಲೆಲ್ಲೂ ಕೊರೊನಾ ವೈರಸ್ ಹಾವಳಿ ಜೋರಾಗಿರುವುದರಿಂದ ಯಾರನ್ನೂ ನೇರವಾಗಿ ಭೇಟಿ ಮಾಡಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ವಿಡಿಯೋ ಕಾಲ್ ಮೂಲಕ ಎಲ್ಲರ ಜೊತೆಗೆ ಸುದೀಪ್ ಮಾತನಾಡಿದ್ದಾರೆ. ಆ ಮಾತುಕತೆಯ ಪೂರ್ಣ ಭಾಗವಾಗವನ್ನು ಭಾನುವಾರ (ಮೇ 23) ಸಂಜೆ 6.30ಕ್ಕೆ ಕಲರ್ಸ್ ಕನ್ನಡದಲ್ಲಿ ಪ್ರಸಾರ ಮಾಡಲಾಗುವುದು. ‘ನಿಮ್ಮೆಲ್ಲರನ್ನೂ ನೋಡಿ ಖುಷಿ ಆಗುತ್ತಿದೆ. ಎಲ್ಲರೂ ಹೇಗಿದ್ದೀರಿ’ ಎಂದು ಸುದೀಪ್ ಅವರು ಬಿಗ್ ಬಾಸ್ ಸ್ಪರ್ಧಿಗಳ ಆರೋಗ್ಯ ವಿಚಾರಿಸಿದ್ದಾರೆ.
‘ಹೇಗಿದ್ದೀರಾ ರಘು? ಮನೆಯಿಂದ ನಿಮ್ಮನ್ನು ಹೊರಗಡೆ ಹಾಕಿಲ್ಲ ತಾನೇ?’ ಎಂದು ರಘುಗೆ ಸುದೀಪ್ ಕಾಲೆಳೆದಿದ್ದಾರೆ. ‘ಶೋ ಮುಗಿತು ಅಂತ ಪ್ರಶಾಂತ್ ಸಂಬರಗಿ ಅವರಿಗೆ ಬೇಸರವೇನೋ ಇದೆ. ಆದರೆ ಬೇರೆಯವರಿಗೆ ಗೆಲ್ಲೋಕೆ ಬಿಟ್ಟಿಲ್ಲವಲ್ಲ ಎಂಬ ಒಂದು ಸಮಾಧಾನ ಕೂಡ ಇದೆ’ ಎಂದು ಕಿಚ್ಚ ತಮಾಷೆ ಮಾಡಿದ್ದಾರೆ. ಇಂಥ ಮಸ್ತ್ ಮಾತುಕತೆಯ ಪ್ರೋಮೋವನ್ನು ಕಲರ್ಸ್ ಕನ್ನಡ ವಾಹಿನಿ ತನ್ನ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡಿದೆ.
ಶುಭಾ ಪೂಂಜಾ, ರಘ ಗೌಡ, ಪ್ರಶಾಂತ್ ಸಂಬರಗಿ, ದಿವ್ಯಾ ಸುರೇಶ್, ದಿವ್ಯಾ ಉರುಗುಡ, ಅರವಿಂದ್ ಕೆಪಿ, ಮಂಜು ಪಾವಗಡ, ಶಮಂತ್ ಬ್ರೋ ಗೌಡ, ಚಕ್ರವರ್ತಿ ಚಂದ್ರಚೂಡ್, ವೈಷ್ಣವಿ ಗೌಡ ಹಾಗೂ ಪ್ರಿಯಾಂಕಾ ತಿಮ್ಮೇಶ್ ಅವರು ಈ ವಿಡಿಯೋ ಕಾನ್ಫರೆನ್ಸ್ನಲ್ಲಿ ಭಾಗಿ ಆಗಿದ್ದರು.
ಇದನ್ನೂ ಓದಿ:
Kichcha Sudeep: ಬಿಗ್ ಬಾಸ್ ಸ್ಪರ್ಧಿ ಸೋನು ಪಾಟೀಲ್ ತಾಯಿಯ ಚಿಕಿತ್ಸೆಗೆ ಲಕ್ಷಾಂತರ ರೂ. ನೀಡಿದ ಕಿಚ್ಚ ಸುದೀಪ್
Kichcha Sudeep: ಕೊರೊನಾದಿಂದ ಸುದೀಪ್ ಗುಣಮುಖ; ಕಷ್ಟದ ದಿನಗಳನ್ನು ಎದುರಿಸಿ ಬಂದ ಕಿಚ್ಚ ಹೇಳಿದ್ದೇನು?