ನಟ ಆಮಿರ್ ಖಾನ್ (Aamir Khan) ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಹಲವು ಬಗೆಯ ಮೀಮ್ಸ್ ಹರಿದಾಡಿವೆ. ಅವರು ನಟಿಸಿರುವ ‘ಲಾಲ್ ಸಿಂಗ್ ಚಡ್ಡಾ’ ಸಿನಿಮಾವನ್ನು ಬಹಿಷ್ಕಾರ ಮಾಡಬೇಕು ಎಂದು ಅನೇಕರು ಅಭಿಯಾನ ಮಾಡುತ್ತಿದ್ದಾರೆ. ಇದರ ಬಿಸಿ ಅವರಿಗೆ ತಟ್ಟಿದೆ. ಹಾಗಾಗಿ ‘ಲಾಲ್ ಸಿಂಗ್ ಚಡ್ಡಾ’ (Laal Singh Chaddha) ಸಿನಿಮಾದ ಬಿಡುಗಡೆ ಸಂದರ್ಭದಲ್ಲಿ ಆಮಿರ್ ಖಾನ್ ಅವರು ದೇಶದ ಜನತೆಯ ಕ್ಷಮೆ (Aamir Khan Apology) ಕೇಳಿದ್ದಾರೆ ಎಂದು ವರದಿ ಆಗಿದೆ. ‘ಯಾವುದೇ ರೀತಿಯಲ್ಲಿ ನಾನು ಯಾರ ಭಾವನೆಗಾದರೂ ಧಕ್ಕೆ ತಂದಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ. ಯಾರನ್ನೂ ನೋಯಿಸಲು ನಾನು ಬಯಸುವುದಿಲ್ಲ. ಯಾರಿಗಾದರೂ ನನ್ನ ಸಿನಿಮಾ ನೋಡಲು ಇಷ್ಟವಿಲ್ಲ ಎಂದಾದರೆ ಅವರ ಭಾವನೆಯನ್ನೂ ನಾನು ಗೌರವಿಸುತ್ತೇನೆ’ ಎಂದು ಆಮಿರ್ ಖಾನ್ ಹೇಳಿಕೆ ನೀಡಿದ್ದಾರೆ.
ಭಾರತದಲ್ಲಿ ಅಸಹಿಷ್ಣುತೆ ಹೆಚ್ಚಾಗಿದೆ ಎಂದು ಈ ಹಿಂದೆ ಆಮಿರ್ ಖಾನ್ ಹೇಳಿದ್ದನ್ನು ಜನರು ಈಗಲೂ ಮರೆತಿಲ್ಲ. ಹಾಗಾಗಿ ಅವರ ಸಿನಿಮಾಗಳನ್ನು ಬಹಿಷ್ಕಾರ ಮಾಡಲು ನಿರ್ಧರಿಸಿದ್ದಾರೆ. ‘ಲಾಲ್ ಸಿಂಗ್ ಚಡ್ಡಾ’ ಸಿನಿಮಾದ ರಿಲೀಸ್ ವೇಳೆ ಬ್ಯಾನ್ ಬಿಸಿ ಹೆಚ್ಚಾಗಿದೆ. ದೇಶಾದ್ಯಂತ ಈ ಚಿತ್ರವನ್ನು ಬಹಿಷ್ಕಾರ ಮಾಡಬೇಕು ಎಂದು ನೆಟ್ಟಿಗರು ಅಭಿಯಾನ ಮಾಡುತ್ತಿದ್ದಾರೆ. ಇದರ ಬೆನ್ನಲ್ಲೇ ಆಮಿರ್ ಖಾನ್ ಕ್ಷಮೆ ಕೇಳಿದ್ದಾರೆ.
‘ಅನಗತ್ಯವಾಗಿ ನನ್ನ ಬಗ್ಗೆ ದ್ವೇಷ ಹಬ್ಬಿಸುತ್ತಿರುವುದರಿಂದ ನನಗೆ ಬೇಸರ ಆಗುತ್ತದೆ. ನಾನು ಭಾರತವನ್ನು ಇಷ್ಟಪಡುವ ವ್ಯಕ್ತಿ ಅಲ್ಲ ಎಂದು ಕೆಲವರು ನಂಬಿದ್ದಾರೆ. ಆದರೆ ಅದು ನಿಜವಲ್ಲ. ಜನರು ಹಾಗೆ ಅಂದುಕೊಂಡಿರುವುದು ದುರದೃಷ್ಟಕರ. ದಯವಿಟ್ಟು ನನ್ನ ಸಿನಿಮಾಗಳನ್ನು ನೋಡಿ. ಬಹಿಷ್ಕಾರ ಮಾಡಬೇಡಿ’ ಎಂದು ಆಮಿರ್ ಖಾನ್ ಇತ್ತೀಚೆಗಷ್ಟೇ ಮನವಿ ಮಾಡಿಕೊಂಡಿದ್ದರು.
‘ಲಾಲ್ ಸಿಂಗ್ ಚಡ್ಡಾ’ ಸಿನಿಮಾ ಆಗಸ್ಟ್ 11ರಂದು ಬಿಡುಗಡೆ ಆಗುತ್ತಿದೆ. ಹಲವು ಕಾರಣದಿಂದ ಈ ಚಿತ್ರ ಚರ್ಚೆ ಹುಟ್ಟುಹಾಕಿದೆ. ಹಾಲಿವುಡ್ನ ‘ಫಾರೆಸ್ಟ್ ಗಂಪ್’ ಚಿತ್ರದ ರಿಮೇಕ್ ಆಗಿ ಈ ಸಿನಿಮಾ ಮೂಡಿಬಂದಿದೆ. ಟ್ರೇಲರ್ ನೋಡಿದ ಅನೇಕರು ಟೀಕೆ ಮಾಡಿದ್ದಾರೆ. ‘ಪಿಕೆ’ ಚಿತ್ರದ ರೀತಿಯಲ್ಲೇ ಆಮಿರ್ ಖಾನ್ ಮತ್ತೆ ಕಾಣಿಸಿಕೊಂಡಿದ್ದಾರೆ ಎಂಬ ಕಮೆಂಟ್ಗಳು ಬಂದಿವೆ. ಈ ಸಿನಿಮಾದಲ್ಲಿ ಅವರಿಗೆ ಜೋಡಿಯಾಗಿ ಕರೀನಾ ಕಪೂರ್ ಖಾನ್ ನಟಿಸಿದ್ದಾರೆ. ತೆಲುಗು ಸ್ಟಾರ್ ನಟ ನಾಗ ಚೈತನ್ಯ ಅವರು ಈ ಚಿತ್ರದಲ್ಲೊಂದು ಅತಿಥಿ ಪಾತ್ರ ಮಾಡಿದ್ದಾರೆ.
Published On - 1:33 pm, Wed, 10 August 22