ಸಿನಿಮಾ ಪ್ರದರ್ಶನದ ವೇಳೆ ತಿಂಡಿ-ತಿನಿಸು ಮಾರಬೇಡಿ: ಆಮೀರ್ ಖಾನ್ ಮನವಿ

Aamir Khan movies: ಆಮಿರ್ ಖಾನ್ ಬಾಲಿವುಡ್​ನ ಸ್ಟಾರ್ ನಟ, ನಿರ್ದೇಶಕ ಮತ್ತು ನಿರ್ಮಾಪಕ ಸಹ. ಚಿತ್ರರಂಗದ ಪ್ರಗತಿ, ಪ್ರೇಕ್ಷಕರಿಗೆ ಗುಣಮಟ್ಟದ ಸಿನಿಮಾ ಇನ್ನೂ ಹಲವು ವಿಷಯಗಳ ಬಗ್ಗೆ ಅವರು ಚರ್ಚಿಸುತ್ತಿರುತ್ತಾರೆ, ಈ ನಿಟ್ಟಿನಲ್ಲಿ ಪ್ರಯೋಗಗಳನ್ನು ಮಾಡುತ್ತಿರುತ್ತಾರೆ. ಇದೀಗ ಅವರು ಮಲ್ಟಿಪ್ಲೆಕ್ಸ್ ಮತ್ತು ಚಿತ್ರಮಂದಿರಗಳ ಬಳಿ ಮನವಿ ಒಂದನ್ನು ಮಾಡಿದ್ದಾರೆ.

ಸಿನಿಮಾ ಪ್ರದರ್ಶನದ ವೇಳೆ ತಿಂಡಿ-ತಿನಿಸು ಮಾರಬೇಡಿ: ಆಮೀರ್ ಖಾನ್ ಮನವಿ
Aamir Khan

Updated on: Sep 21, 2025 | 6:42 PM

ನಟ ಆಮಿರ್ ಖಾನ್ (Aamir Khan) ಬಾಲಿವುಡ್ ಸೂಪರ್ ಸ್ಟಾರ್, ಇತರೆ ಸ್ಟಾರ್​​ಗಳ ರೀತಿ ಕೇವಲ ಬಾಕ್ಸ್ ಆಫೀಸ್​ ಯಶಸ್ಸಿಗಾಗಿ ಸಿನಿಮಾ ಮಾಡುವವರಲ್ಲ ಆಮಿರ್ ಖಾನ್. ಜನಕ್ಕೆ ಒಳ್ಳೆಯ ಸಿನಿಮಾಗಳನ್ನು ನೀಡಬೇಕು, ಭಾರತೀಯ ಚಿತ್ರರಂಗ ವಿಶ್ವಮಟ್ಟದಲ್ಲಿ ಮಿಂಚಬೇಕು, ಗುಣಮಟ್ಟದ ಸಿನಿಮಾಗಳನ್ನು ನಿರ್ಮಿಸಬೇಕು, ಪ್ರೇಕ್ಷಕರಿಗೆ ಕಡಿಮೆ ದರದಲ್ಲಿ ಉತ್ತಮ ಮನೊರಂಜನೆ ಸಿಗಬೇಕು ಇತ್ಯಾದಿಗಳ ಬಗ್ಗೆ ಆಲೋಚನೆ ಮಾಡುತ್ತಾರೆ. ಸಿನಿಮಾ ಉದ್ಯಮದ ಬಗ್ಗೆ ಹೊಸ ಹೊಸ ಪ್ರಯೋಗಗಳನ್ನು ಜಾರಿಗೆ ತರುತ್ತಿರುತ್ತಾರೆ. ಇತ್ತೀಚೆಗಷ್ಟೆ ತಮ್ಮ ಸೂಪರ್ ಹಿಟ್ ಸಿನಿಮಾ ‘ಸಿತಾರೆ ಜಮೀನ್ ಪರ್’ ಅನ್ನು ಒಟಿಟಿಗೆ ಕೊಡದೆ ಯೂಟ್ಯೂಬ್​​​ನಲ್ಲಿ ಪೇ ಪರ್ ವೀವ್ ಮಾದರಿಯಲ್ಲಿ ವೀಕ್ಷಣೆಗೆ ಇರಿಸಿದ್ದರು. ಇದರಿಂದ ಎಲ್ಲರಿಗೂ ಸಿನಿಮಾ ತಲುಪುತ್ತದೆ ಎಂದಿದ್ದರು. ಇದೀಗ ಚಿತ್ರಮಂದಿರಗಳ ಬಳಿ ಮನವಿಯೊಂದನ್ನು ಮಾಡಿದ್ದಾರೆ.

ಮಲ್ಟಿಪ್ಲೆಕ್ಸ್​​ಗಳು ಸಿನಿಮಾ ವೀಕ್ಷಣೆ ಅನುಭವವನ್ನೇ ಬದಲಾಯಿಸಿವೆ. ಅದರ ಜೊತೆಗೆ ತಿಂಡಿ-ತಿನಿಸು, ಪಾನೀಯಗಳನ್ನು ಭಾರಿ ಮೊತ್ತಕ್ಕೆ ಮಾರಾಟ ಮಾಡುತ್ತಾ ಭಾರಿ ದೊಡ್ಡ ಲಾಭವನ್ನೂ ಮಾಡುತ್ತಿವೆ. ಜೊತೆಗೆ ಪ್ರೇಕ್ಷಕರಿಗೆ ಸಿನಿಮಾ ವೀಕ್ಷಣೆಯನ್ನು ಹೊರೆ ಅನ್ನಾಗಿಸಿವೆ. ಮಲ್ಟಿಪ್ಲೆಕ್ಸ್​ಗಳು, ಸಿನಿಮಾ ಟಿಕೆಟ್ ಮಾರಾಟಕ್ಕಿಂತಲೂ ತಿಂಡಿ-ತಿನಿಸು, ಪಾನೀಯಗಳ ಮಾರಾಟಕ್ಕೆ ಹೆಚ್ಚು ಆದ್ಯತೆ ನೀಡುತ್ತವೆ. ಸಿನಿಮಾ ಪ್ರದರ್ಶನ ಆಗುತ್ತಿರುವಾಗಲೂ, ಸಿನಿಮಾ ನೋಡುತ್ತಿರುವ ಪ್ರೇಕ್ಷಕರ ಬಳಿ ಬಂದು ಆರ್ಡರ್ ಪಡೆಯುವುದು, ತಿಂಡಿ-ತಿನಿಸುಗಳನ್ನು ಮಾರಲು ಪ್ರಯತ್ನಿಸುವುದು, ಆರ್ಡರ್ ನೀಡಿದ ಪ್ರೇಕ್ಷಕನಿಗೆ ಸರ್ವೀಸ್ ನೀಡುವುದು ಮಾಡಲಾಗುತ್ತದೆ.

ಈ ರೀತಿಯ ಸೇವೆಯ ಬಗ್ಗೆ ಆಮಿರ್ ಖಾನ್ ವಿರೋಧ ವ್ಯಕ್ತಪಡಿಸಿರುತ್ತಾರೆ. ಚಿತ್ರಮಂದಿರದ ಒಳಗೆ ಸಿನಿಮಾ ಪ್ರದರ್ಶನ ಆಗುತ್ತಿರುವ ಸಮಯದಲ್ಲಿ ತಿಂಡಿ-ತಿನಿಸು ಮಾರಾಟ ಮಾಡುವುದು, ಅಥವಾ ಸೇವೆ ನೀಡುವುದು ಸರಿಯಲ್ಲ ಎಂದು ಆಮಿರ್ ಖಾನ್ ಹೇಳಿದ್ದಾರೆ. ಈ ಬಗ್ಗೆ ನಾನು ಮಲ್ಟಿಪ್ಲೆಕ್ಸ್​ಗಳವರಿಗೆ ಹಲವು ಬಾರಿ ಮನವಿ ಮಾಡಿದ್ದೇನೆ. ಸಿನಿಮಾ ಶುರುವಾಗುವ ಮುಂಚೆಯೇ ತಿಂಡಿ-ತಿನಿಸು ತೆಗೆದುಕೊಳ್ಳಬೇಕು ಅಥವಾ ಇಂಟರ್ವೆಲ್ ಸಮಯದಲ್ಲಿ ತೆಗೆದುಕೊಳ್ಳಬೇಕು. ಸಿನಿಮಾ ಪ್ರದರ್ಶನ ಆಗುತ್ತಿರುವ ವೇಳೆ ತಿಂಡಿ-ತಿನಿಸು ಮಾರುವುದು ಸರಿಯಲ್ಲ, ಅದು ಸಿನಿಮಾ ವೀಕ್ಷಣೆಯ ಅನುಭವವನ್ನು ಹಾಳು ಮಾಡುತ್ತದೆ’ ಎಂದಿದ್ದಾರೆ.

ಇದನ್ನೂ ಓದಿ:ಆಮಿರ್ ಖಾನ್ ರಾಷ್ಟ್ರಪ್ರೇಮ ಮೆಚ್ಚಲೇಬೇಕು; ಪಾಕಿಸ್ತಾನದ ವಿಚಾರ ಬಂದಿದ್ದಕ್ಕೆ ಬಿಸ್ನೆಸ್ ಬಿಟ್ಟ ಹೀರೋ

ಈಗಿನ ಸಿನಿಮಾ ಪ್ರೇಕ್ಷಕರ ಬಗ್ಗೆಯೂ ಮಾತನಾಡಿರುವ ಆಮಿರ್ ಖಾನ್, ಮುಂಚೆ ಸಿನಿಮಾ ವೀಕ್ಷಕರಿಗೆ ಹೆಚ್ಚು ಏಕಾಗ್ರತೆ ಇತ್ತು, ಅವರು ಗಮನವಿಟ್ಟು ಸಿನಿಮಾ ವೀಕ್ಷಿಸುತ್ತಿದ್ದರು, ಒಂದೊಮ್ಮೆ ಸಿನಿಮಾ ಅವರಿಗೆ ಇಷ್ಟ ಆಗಲಿಲ್ಲವೆಂದರೆ ಮಧ್ಯದಲ್ಲಿಯೇ ಎದ್ದು ಹೋಗಿಬಿಡುತ್ತಿದ್ದರು. ಆದರೆ ಈಗಿನ ಪ್ರೇಕ್ಷಕರಿಗೆ ಏಕಾಗ್ರತೆ ಇಲ್ಲ, ಸಿನಿಮಾ ನೋಡುವಾಗ ಮೊಬೈಲ್ ನೋಡುತ್ತಾರೆ, ಮೆಸೇಜ್ ಮಾಡುತ್ತಾರೆ. ಸಾಮಾಜಿಕ ಜಾಲತಾಣಗಳನ್ನು ವೀಕ್ಷಿಸುತ್ತಾರೆ. ಸಿನಿಮಾದ ಮೇಲೆ ಅವರಿಗೆ ಏಕಾಗ್ರತೆಯೇ ಇರುವುದಿಲ್ಲ’ ಎಂದಿದ್ದಾರೆ.

ಆಮಿರ್ ಖಾನ್ ಅವರು ಈ ಹಿಂದೆ ಒಟಿಟಿಗಳ ಬಗ್ಗೆಯೂ ಆಕ್ಷೇಪ ವ್ಯಕ್ತಪಡಿಸಿದ್ದರು. ಒಟಿಟಿ ಮಾಡೆಲ್ ಸರಿಯಿಲ್ಲ, ಇದರಿಂದ ಚಿತ್ರಮಂದಿರಗಳಲ್ಲಿ ಸಿನಿಮಾಗಳು ಓಡುವುದಿಲ್ಲ ಎಂದಿದ್ದರು. ಅದರಂತೆಯೇ ಅವರು ತಮ್ಮ ಇತ್ತೀಚೆಗೆ ಬಿಡುಗಡೆ ಆಗಿ ಸೂಪರ್ ಹಿಟ್ ಆದ ‘ಸಿತಾರೆ ಜಮೀನ್ ಪರ್’ ಸಿನಿಮಾವನ್ನು ಭಾರಿ ದೊಡ್ಡ ಆಫರ್ ನೀಡಿದರೂ ಸಹ ಒಟಿಟಿಗೆ ಮಾರಾಟ ಮಾಡಲಿಲ್ಲ. ಬದಲಿಗೆ ಪೇ ಪರ್ ವೀವ್ ಮಾದರಿಯಲ್ಲಿ ಯೂಟ್ಯೂಬ್​​​ನಲ್ಲಿ ಬಿಡುಗಡೆ ಮಾಡಿದರು. ಯೂಟ್ಯೂಬ್​​​ನಲ್ಲಿ ಸಿನಿಮಾಕ್ಕೆ ಒಳ್ಳೆಯ ಪ್ರತಿಕ್ರಿಯೆಯೇ ಬಂದಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ