‘ಕೆಜಿಎಫ್ ಚಾಪ್ಟರ್ 2’ ಸಿನಿಮಾ (KGF Chapter 2) ತೆರೆಗೆ ಬಂದ ನಂತರದಲ್ಲಿ ಬಾಲಿವುಡ್ ಕಥೆ ಮುಗಿದೇ ಹೋಯಿತು ಎನ್ನುವ ಮಾತು ಕೇಳಿಬರುತ್ತಿದೆ. ಇದು ಬಾಲಿವುಡ್ (Bollywood) ಸ್ಟಾರ್ಗಳು ಹಾಗೂ ಅಲ್ಲಿನ ನಿರ್ದೇಶಕರಿಗೆ ಚಿಂತೆ ತಂದಿದೆ. ಹೇಗಾದರೂ ಮಾಡಿ ಮತ್ತೆ ಮೊದಲಿನ ಚಾರ್ಮ್ ಮರಳಿ ತರುವ ಪ್ರಯತ್ನದಲ್ಲಿ ತೊಡಗಿದ್ದಾರೆ ಅಲ್ಲಿನ ನಿರ್ದೇಶಕರು. ಹೀಗಿರುವಾಗಲೇ ಶಾರುಖ್ ಖಾನ್ ಅವರು (Shah Rukh Khan) ಹೊಸ ಸಿನಿಮಾದ ಶೂಟಿಂಗ್ ಆರಂಭಿಸಿದ್ದಾರೆ. ಸೋಲನ್ನೇ ಕಾಣದ ನಿರ್ದೇಶಕ ರಾಜ್ ಕುಮಾರ್ ಹಿರಾನಿ ಜತೆ ಅವರು ಕೆಲಸ ಮಾಡುತ್ತಿದ್ದಾರೆ.
‘ಪುಷ್ಪ’, ‘ಆರ್ಆರ್ಆರ್’, ‘ಕೆಜಿಎಫ್ 2’ ಚಿತ್ರದ ಕಲೆಕ್ಷನ್ ನೋಡಿ ಬಾಲಿವುಡ್ ಮಂದಿ ಮಂಕಾಗಿದ್ದಾರೆ. ಸಲ್ಮಾನ್ ಖಾನ್ ಮೊದಲಾದವರ ಚಿತ್ರಗಳು ಗೆಲುವಿನ ಮುಖವನ್ನು ಕಾಣುತ್ತಿಲ್ಲ. ದಕ್ಷಿಣ ಭಾರತದ ಸಿನಿಮಾಗಳನ್ನು ಬಾಲಿವುಡ್ಗೆ ರಿಮೇಕ್ ಮಾಡಿ ಕೊಂಚ ಬಿಸ್ನೆಸ್ ಮಾಡಿಕೊಳ್ಳುತ್ತಿದ್ದಾರೆ. ‘ನಾನು ಪ್ರಾದೇಶಿಕ ಸಿನಿಮಾಗಳನ್ನು ಮಾಡುವುದಿಲ್ಲ’ ಎಂದು ಧಿಮಾಕಿನ ಮಾತುಗಳನ್ನು ಆಡಿದ್ದರು ಜಾನ್ ಅಬ್ರಾಹಂ. ಅವರಿಗೆ ಜನರು ಸೋಲಿನ ರುಚಿ ತೋರಿಸಿದ್ದಾರೆ. ಹೀಗಿರುವಾಗಲೇ ಮತ್ತೆ ಬಾಲಿವುಡ್ಅನ್ನು ಮೇಲಕ್ಕೆತ್ತಬೇಕು ಎಂದು ಅಲ್ಲಿನ ಸ್ಟಾರ್ಗಳು ನಿರ್ಧರಿಸಿದಂತಿದೆ.
ಶಾರುಖ್ ಖಾನ್ ಅವರು ಒಂದೇ ಬಾರಿಗೆ ಮೂರು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಸಿದ್ದಾರ್ಥ್ ಆನಂದ್ ನಿರ್ದೇಶನದ ‘ಪಠಾಣ್’ ಚಿತ್ರದ ಕೆಲಸಗಳಲ್ಲಿ ಶಾರುಖ್ ಬ್ಯುಸಿ ಇದ್ದಾರೆ. ಇದಲ್ಲದೆ, ದಕ್ಷಿಣ ಭಾರತದ ಖ್ಯಾತ ನಿರ್ದೇಶಕ ಅಟ್ಲೀ ಜತೆ ಸಿನಿಮಾ ಮಾಡುತ್ತಿದ್ದಾರೆ. ಇದಲ್ಲದೆ, ರಾಜ್ಕುಮಾರ್ ಹಿರಾನಿ ಜತೆಗಿನ ಸಿನಿಮಾಗೆ ಅವರು ಚಾಲನೆ ನೀಡಿದ್ದಾರೆ.
ರಾಜ್ಕುಮಾರ್ ಹಿರಾನಿ ನಿರ್ದೇಶನದ ಸಿನಿಮಾಗಳು ಬಾಕ್ಸ್ ಆಫೀಸ್ನಲ್ಲಿ ಹಿಟ್ ಆಗಿವೆ. ಅವರ ಕೊನೆಯ ಸಿನಿಮಾ ‘ಸಂಜು’. ಸಂಜಯ್ ದತ್ ಅವರ ಕುರಿತು ಸಿದ್ಧವಾದ ಈ ಬಯೋಪಿಕ್ ಹಿಟ್ ಆಗಿತ್ತು. ಇದಾದ ಬಳಿಕ ಅವರು ಯಾವುದೇ ಸಿನಿಮಾ ಘೋಷಿಸಿಲ್ಲ. ಈಗ ಶಾರುಖ್ ಖಾನ್ ಜತೆ ಶೂಟಿಂಗ್ ಆರಂಭಿಸಿದ್ದಾರೆ.
ಶಾರುಖ್ ಖಾನ್ ಹಾಗೂ ರಾಜ್ಕುಮಾರ್ ಹಿರಾನಿ ಪಂಜಾಬ್ನ ಗ್ರಾಮದಲ್ಲಿ ಶೂಟಿಂಗ್ ಮಾಡುತ್ತಿದ್ದಾರೆ. ಕೆಲ ದಿನಗಳ ಕಾಲ ಅವರು ಇಲ್ಲಿಯೇ ಶೂಟಿಂಗ್ ನಡೆಸಲಿದ್ದಾರೆ. ನಂತರ ಚಿತ್ರತಂಡ ಲಂಡನ್ಗೆ ಪ್ರಯಾಣ ಬೆಳೆಸಲಿದೆ. ಈ ಸಿನಿಮಾ ಯಾವ ಶೈಲಿಯಲ್ಲಿ ಮೂಡಿ ಬರಲಿದೆ ಎನ್ನುವ ಕುತೂಹಲ ಅಭಿಮಾನಿಗಳನ್ನು ಮೂಡಿದೆ.
ಇದನ್ನೂ ಓದಿ: ‘ಕೆಜಿಎಫ್ 2’ ಅಬ್ಬರದಿಂದ ಮಲ್ಟಿಪ್ಲೆಕ್ಸ್ಗಳಲ್ಲಿ ‘ಬೀಸ್ಟ್’ಗೆ ಸಿಗಲಿಲ್ಲ ಸ್ಕ್ರೀನ್; ನಿರ್ಮಾಪಕನ ಅಸಮಾಧಾನ?
Published On - 10:52 am, Sun, 17 April 22