
ಬಾಲಿವುಡ್‌ನ ಅತ್ಯಂತ ಯಶಸ್ವಿ ಕಾಮಿಡಿ ಫ್ರಾಂಚೈಸಿಗಳಲ್ಲಿ ಒಂದಾದ ‘ಧಮಾಲ್’ ಸರಣಿಯ ಬಹುನಿರೀಕ್ಷಿತ ‘ಧಮಾಲ್ 4’ ಚಿತ್ರದ ಟ್ರೇಲರ್ (Dhamaal 4 Trailer) ಅದ್ಧೂರಿಯಾಗಿ ಬಿಡುಗಡೆಯಾಗಿದೆ. ಮುಂಬೈ ಹೊರವಲಯದ ಪ್ರಸಿದ್ಧ ಅಮ್ಯೂಸ್‌ಮೆಂಟ್ ಪಾರ್ಕ್ ‘ಇಮ್ಯಾಜಿಕಾ’ದಲ್ಲಿ ಚಿತ್ರತಂಡವು ವಿಭಿನ್ನವಾದ ಇಮರ್ಸಿವ್ ಶೈಲಿಯಲ್ಲಿ ಟ್ರೇಲರ್ ಲಾಂಚ್ ಮಾಡಿದ್ದು, ಸಿನಿಪ್ರೇಮಿಗಳಲ್ಲಿ ಭಾರಿ ಕುತೂಹಲ ಮೂಡಿಸಿದೆ. ಈ ಬಹುನಿರೀಕ್ಷಿತ ಸಿನಿಮಾದ ಬಿಡುಗಡೆಗಾಗಿ ಅಭಿಮಾನಿಗಳು ಕಾದಿದ್ದಾರೆ. ಕಾಮಿಡಿ ಪ್ರಿಯರಿಗೆ ‘ಧಮಾಲ್ 4’ (Dhamaal 4) ಸಿನಿಮಾ ಮೇಲೆ ಸಖತ್ ನಿರೀಕ್ಷೆ ಇದೆ.
ಚಿತ್ರದ ಟ್ರೇಲರ್ ಎಂದಿನಂತೆ ನಗು, ಸಾಹಸ ಮತ್ತು ಗೊಂದಲಗಳ ಮಹಾಪೂರವನ್ನೇ ಹೊತ್ತು ತಂದಿದೆ. ಇಡೀ ಕುಟುಂಬ ಒಟ್ಟಿಗೆ ಕುಳಿತು ನಗುವಂತಹ ಕಚಗುಳಿ ಇಡುವ ದೃಶ್ಯಗಳು ಟ್ರೇಲರ್‌ನಲ್ಲಿ ಹೈಲೈಟ್ ಆಗಿವೆ. ಈ ಬಾರಿ ಧಮಾಲ್ ಗ್ಯಾಂಗ್‌ಗೆ ಬಂಗಾರದ ಬೆಟ್ಟದಂತಹ ದೊಡ್ಡ ನಿಧಿಯೊಂದರ ಸುಳಿವು ಸಿಗುತ್ತದೆ. ಅದನ್ನು ಹುಡುಕಿಕೊಂಡು ಹೊರಡುವ ಇಡೀ ಗ್ಯಾಂಗ್ ಸಿಕ್ಕಿಬೀಳುವ ಹಾಸ್ಯಾಸ್ಪದ ಸನ್ನಿವೇಶಗಳು, ಕಾಡಿನ ಸಾಹಸಗಳು ಮತ್ತು ಅನಿರೀಕ್ಷಿತ ಟ್ವಿಸ್ಟ್‌ಗಳು ಟ್ರೇಲರ್‌ನಲ್ಲಿ ಭರಪೂರ ಮನರಂಜನೆ ನೀಡುವ ಭರವಸೆ ಮೂಡಿಸಿವೆ.
‘ಧಮಾಲ್ 4’ ಚಿತ್ರದಲ್ಲಿ ದೊಡ್ಡ ತಾರಾಬಳಗವೇ ಒಂದಾಗಿದೆ. ಅಜಯ್ ದೇವ್ಗನ್, ಅರ್ಶದ್ ವಾರ್ಸಿ, ರಿತೇಶ್ ದೇಶ್‌ಮುಖ್, ಜಾವೇದ್ ಜಾಫೇರಿ ಮತ್ತು ಸಂಜಯ್ ಮಿಶ್ರಾ ಮುಖ್ಯ ಭೂಮಿಕೆಯಲ್ಲಿ ಮರಳಿದ್ದಾರೆ. ಇವರ ಜೊತೆಗೆ ಇಶಾ ಗುಪ್ತಾ, ಸಂಜೀದಾ ಶೇಖ್, ಅಂಜಲಿ ಆನಂದ್, ಉಪೇಂದ್ರ ಲಿಮಾಯೆ, ವಿಜಯ್ ಪಾಟ್ಕರ್ ಮತ್ತು ರವಿ ಕಿಶನ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಈ ಚಿತ್ರವನ್ನು ಹಿರಿಯ ನಿರ್ದೇಶಕ ಇಂದ್ರ ಕುಮಾರ್ ನಿರ್ದೇಶಿಸಿದ್ದು, ಅಜಯ್ ದೇವ್ಗನ್, ಭೂಷಣ್ ಕುಮಾರ್, ಕ್ರಿಷಣ್ ಕುಮಾರ್ ಸೇರಿದಂತೆ ಪ್ರಮುಖರು ಜಂಟಿಯಾಗಿ ಟಿ-ಸೀರಿಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಿದ್ದಾರೆ. ಜುಲೈ 10ರಂದು ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದೆ. ಈ ಮೊದಲಿನ 3 ಸಿನಿಮಾಗಳ ರೀತಿಯೇ ‘ಧಮಾಲ್ 4’ ಕೂಡ ಭರ್ಜರಿ ಮನರಂಜನೆ ನೀಡುವ ನಿರೀಕ್ಷೆ ಇದೆ.
ಇದನ್ನೂ ಓದಿ: ‘ಕಾಲಾ ಹಿರಣ್’ ಟೀಸರ್: ವಿವಾದಿತ ಸಿನಿಮಾದಲ್ಲಿ ಸಲ್ಮಾನ್ ಖಾನ್ ರೀತಿಯೇ ಕಾಣುವ ನಟ
ಧಮಾಲ್ (2007): ನಾಲ್ಕು ಜನ ಸೋಮಾರಿ ಗೆಳೆಯರು ಗೋವಾದಲ್ಲಿ ಬಚ್ಚಿಟ್ಟ ಕೋಟ್ಯಂತರ ರೂಪಾಯಿ ನಿಧಿಯನ್ನು ಹುಡುಕುವ ಕಥೆಯೊಂದಿಗೆ ಈ ಸರಣಿ ಆರಂಭವಾಗಿ ಸೂಪರ್ ಹಿಟ್ ಆಗಿತ್ತು. ಇದರಲ್ಲಿ ಸಂಜಯ್ ದತ್ ಪೊಲೀಸ್ ಅಧಿಕಾರಿಯಾಗಿ ನಟಿಸಿದ್ದರು.
ಡಬಲ್ ಧಮಾಲ್ (2011): ಮೊದಲ ಭಾಗದ ಮುಂದುವರಿದ ಕಥೆಯಾಗಿ ತೆರೆಕಂಡು ಯಶಸ್ವಿಯಾಗಿತ್ತು.
ಟೋಟಲ್ ಧಮಾಲ್ (2019): ಹೊಸ ಪಾತ್ರಗಳು ಮತ್ತು ಅಜಯ್ ದೇವ್ಗನ್ ಎಂಟ್ರಿಯೊಂದಿಗೆ ಸ್ಟ್ಯಾಂಡ್-ಅಲೋನ್ ರಿಬೂಟ್ ಆಗಿ ಬಂದು ಭರ್ಜರಿ ಕಲೆಕ್ಷನ್ ಮಾಡಿತ್ತು. ಈಗ ಅದೇ ಯಶಸ್ಸಿನ ಸರಣಿಯಲ್ಲಿ ನಾಲ್ಕನೇ ಭಾಗವಾಗಿ ‘ಧಮಾಲ್ 4’ ಬಾಕ್ಸ್ ಆಫೀಸ್ ಧೂಳೀಪಟ ಮಾಡಲು ಸಜ್ಜಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 9:53 pm, Fri, 12 June 26