ರಾಷ್ಟ್ರ ಪ್ರಶಸ್ತಿ ಸಿಕ್ಕ ಬಳಿಕವೂ ನನಗೆ ಕೆಲಸ ಸಿಗಲಿಲ್ಲ: ಸತ್ಯ ತೆರೆದಿಟ್ಟ ಕಂಗನಾ ರಣಾವತ್
ಮಧುರ್ ಭಂಡಾರ್ಕರ್ ನಿರ್ದೇಶನದ ‘ಫ್ಯಾಷನ್’ ಚಿತ್ರದ ನಟನೆಗಾಗಿ ಕಂಗನಾ ರಣಾವತ್ ಅವರಿಗೆ ‘ಅತ್ಯುತ್ತಮ ಪೋಷಕ ನಟಿ’ ರಾಷ್ಟ್ರ ಪ್ರಶಸ್ತಿ ಸಿಕ್ಕಿತ್ತು. ಇದೇ ಚಿತ್ರಕ್ಕಾಗಿ ಪ್ರಿಯಾಂಕಾ ಚೋಪ್ರಾ ಅವರಿಗೆ ‘ಅತ್ಯುತ್ತಮ ನಟಿ’ ರಾಷ್ಟ್ರ ಪ್ರಶಸ್ತಿ ಲಭಿಸಿತ್ತು. ನ್ಯಾಷನಲ್ ಅವಾರ್ಡ್ ಸಿಕ್ಕ ಬಳಿಕವೂ ಕಂಗನಾ ಅವರಿಗೆ ಅವಕಾಶ ಸಿಗುತ್ತಿರಲಿಲ್ಲ.

ಬಾಲಿವುಡ್‌ನ ಖ್ಯಾತ ನಟಿ, ಮಂಡಿ ಕ್ಷೇತ್ರದ ಬಿಜೆಪಿ ಸಂಸದೆ ಕಂಗನಾ ರಣಾವತ್ (Kangana Ranaut) ಚಿತ್ರರಂಗದಲ್ಲಿ ತಮಗಿದ್ದ ಕಠಿಣ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ‘ಫ್ಯಾಷನ್’ ಚಿತ್ರದ ಭರ್ಜರಿ ಯಶಸ್ಸು ಮತ್ತು ಅದಕ್ಕಾಗಿ ರಾಷ್ಟ್ರ ಪ್ರಶಸ್ತಿ ಪಡೆದ ನಂತರವೂ ತಮಗೆ ಚಿತ್ರರಂಗದಲ್ಲಿ ಕೆಲಸ ಸಿಗುತ್ತಿರಲಿಲ್ಲ ಎಂದು ಅವರು ಬಹಿರಂಗಪಡಿಸಿದ್ದಾರೆ. ಆ ಸಮಯದಲ್ಲಿ ಕೇವಲ ಬದುಕುಳಿಯಲು ತಮ್ಮ ಸಾಮರ್ಥ್ಯಕ್ಕೆ ಹೊಂದದ ಕಳಪೆ ಸಿನಿಮಾಗಳನ್ನೂ ಮಾಡಬೇಕಾಗಿ ಬಂದಿತ್ತು ಎಂದು ಅವರು ಹೇಳಿದ್ದಾರೆ.
2006ರಲ್ಲಿ ಅನುರಾಗ್ ಬಸು ನಿರ್ದೇಶನದ ‘ಗ್ಯಾಂಗ್‌ಸ್ಟರ್: ಎ ಲವ್ ಸ್ಟೋರಿ’ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ ಕಂಗನಾ, ಚಿತ್ರರಂಗದಲ್ಲಿ ಈಗ ಯಶಸ್ವಿಯಾಗಿ 20 ವರ್ಷಗಳನ್ನು ಪೂರೈಸಿದ್ದಾರೆ. ಸದ್ಯದಲ್ಲೇ ಬಿಡುಗಡೆಯಾಗಲಿರುವ ‘ಭಾರತ್ ಭಾಗ್ಯ ವಿಧಾತ’ ಚಿತ್ರದ ಪ್ರಚಾರದ ವೇಳೆ ಅವರು ತಮ್ಮ ಹಳೆಯ ದಿನಗಳ ಹೋರಾಟವನ್ನು ಬಿಚ್ಚಿಟ್ಟಿದ್ದಾರೆ.
ಸುದ್ದಿ ಸಂಸ್ಥೆ ಪಿಟಿಐ ಜೊತೆ ಮಾತನಾಡಿದ ಕಂಗನಾ, ‘ಜೀವನದಲ್ಲಿ ಹೋರಾಟದ ದಿನಗಳು ಎದುರಾದಾಗ ಅದನ್ನು ಧನಾತ್ಮಕವಾಗಿ ತೆಗೆದುಕೊಳ್ಳಬೇಕು. ಯಾಕೆಂದರೆ ಆ ಸಂದರ್ಭದಲ್ಲಿ ಜೀವನ ನಮಗೆ ಏನನ್ನೋ ಕಲಿಸಲು ಪ್ರಯತ್ನಿಸುತ್ತಿರುತ್ತದೆ. 2007-2008ರ ಅವಧಿಯಲ್ಲಿ, ಅಂದರೆ ಫ್ಯಾಷನ್ ಸಿನಿಮಾಗೆ ರಾಷ್ಟ್ರ ಪ್ರಶಸ್ತಿ ಬಂದ ನಂತರವೂ ನನಗೆ ಚಿತ್ರರಂಗದಲ್ಲಿ ಯಾವುದೇ ಕೆಲಸ ಸಿಗುತ್ತಿರಲಿಲ್ಲ. ಆಗ ನಾನು ಯಾಕೆ ನನಗೆ ಕೆಲಸ ಸಿಗುತ್ತಿಲ್ಲ? ನಾನೇಕೆ ಇದಕ್ಕಿಂತ ಉತ್ತಮವಾದುದನ್ನು ಮಾಡಲು ಸಾಧ್ಯವಾಗುತ್ತಿಲ್ಲ ಅಂತ ನನ್ನನ್ನು ನಾನೇ ಪ್ರಶ್ನಿಸಿಕೊಳ್ಳುತ್ತಿದ್ದೆ’ ಎಂದು ಹೇಳಿದ್ದಾರೆ.
‘ಆ ಸಮಯದಲ್ಲಿ ದೊಡ್ಡ ಸ್ಟಾರ್ ಕಲಾವಿದರ ಮ್ಯಾನೇಜರ್‌ಗಳನ್ನು ಕೆಲಸಕ್ಕೆ ಇಟ್ಟುಕೊಳ್ಳುವಂತೆ ನನಗೆ ಹಲವರು ಸಲಹೆ ನೀಡಿದರು. ನಾನು ಹಾಗೆಯೇ ಮಾಡಿದೆ. ಆದರೆ ಅದರ ಪರಿಣಾಮವಾಗಿ ನನಗೆ ‘ರಾಸ್ಕಲ್ಸ್’ ಮತ್ತು ‘ಡಬಲ್ ಧಮಾಲ್’ ರೀತಿಯ ಕಮರ್ಷಿಯಲ್ ಸಿನಿಮಾಗಳು ಸಿಕ್ಕವು. ನಾನು ನನ್ನ ಬುದ್ಧಿಮತ್ತೆಗಿಂತ ತೀರಾ ಕೆಳಮಟ್ಟದ ಸಿನಿಮಾಗಳಲ್ಲಿ ನಟಿಸುತ್ತಿದ್ದೇನೆ ಎಂಬುದು ನನಗೆ ಚೆನ್ನಾಗಿ ಗೊತ್ತಿತ್ತು. ಆದರೆ ಬದುಕಲು ನನಗೆ ಬೇರೆ ದಾರಿ ಇರಲಿಲ್ಲ. ಇವತ್ತಿನ ದಿನಗಳಲ್ಲಿ ಜನರು ನಿಮಗೆ ಇಷ್ಟ ಬಂದಿದ್ದನ್ನು ಮಾತ್ರ ಮಾಡಿ ಎಂದು ಸುಲಭವಾಗಿ ಹೇಳುತ್ತಾರೆ. ಆದರೆ ಅದು ತೀರಾ ಮೂರ್ಖತನದ ಹೇಳಿಕೆ. ಆಯಾ ಪರಿಸ್ಥಿತಿಗೆ ಏನು ಅಗತ್ಯವಿದೆಯೋ ಮತ್ತು ನಮ್ಮಿಂದ ಏನು ಸಾಧ್ಯವೋ ಅದನ್ನು ನಾವು ಮಾಡಬೇಕಾಗುತ್ತದೆ’ ಎಂದು ಕಂಗನಾ ಮಾರ್ಮಿಕವಾಗಿ ನುಡಿದಿದ್ದಾರೆ.
ಕಂಗನಾ ರಣಾವತ್ ‘ವೋ ಲಮ್ಹೆ’, ಲೈಫ್ ಇನ್ ಎ ಮೆಟ್ರೋ’ ಚಿತ್ರಗಳ ಮೂಲಕ ಗುರುತಿಸಿಕೊಂಡು, ‘ಕ್ವೀನ್’ ಸಿನಿಮಾ ಮೂಲಕ ಸ್ಟಾರ್ ನಟಿಯಾಗಿ ಹೊರಹೊಮ್ಮಿದರು. ನಂತರ ‘ಮಣಿಕರ್ಣಿಕಾ’, ‘ಪಂಗಾ’ ಮತ್ತು ‘ಎಮರ್ಜೆನ್ಸಿ’ ರೀತಿಯ ಮಹಿಳಾ ಪ್ರಧಾನ ಚಿತ್ರಗಳ ಮೂಲಕ ಜನರನ್ನು ರಂಜಿಸುವ ಪ್ರಯತ್ನ ಮಾಡಿದರು.
ಇದನ್ನೂ ಓದಿ: 26/11 ಮುಂಬೈ ಉಗ್ರರ ದಾಳಿ ನಡೆದಾಗ ಪಾರ್ಟಿ ಮಾಡುತ್ತಿದ್ದ ನಟಿ ಕಂಗನಾ ರಣಾವತ್
ಕಂಗನಾ ರಣಾವತ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ‘ಭಾರತ್ ಭಾಗ್ಯ ವಿಧಾತ’ ಸಿನಿಮಾ ಜೂನ್ 12ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲು ಸಿದ್ಧವಾಗಿದೆ. ಮುಂಬೈನ ಕಾಮಾ ಆಸ್ಪತ್ರೆಯ ಹಿನ್ನೆಲೆಯಲ್ಲಿ ಈ ಕಥೆ ನಡೆಯುತ್ತದೆ. 26/11 ಮುಂಬೈ ಭಯೋತ್ಪಾದಕ ದಾಳಿಯ ಸಮಯದಲ್ಲಿ ನರ್ಸ್‌ಗಳು ಮತ್ತು ವಾರ್ಡ್ ಬಾಯ್‌ಗಳ ನಡೆಸಿದ ಧೀರತನದ ಕಥೆಯನ್ನು ಈ ಸಿನಿಮಾ ಅನಾವರಣಗೊಳಿಸಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




