ದಕ್ಷಿಣದ ಸಿನಿಮಾಗಳನ್ನು ರಿಮೇಕ್ ಮಾಡಿದ ಅಜಯ್-ಅಕ್ಷಯ್​ಗೆ ಅಗ್ನಿಪರೀಕ್ಷೆ

ಅಲ್ಲು ಅರ್ಜುನ್ ನಟನೆಯ ‘ಅಲ ವೈಕುಂಠಪುರಮುಲೋ’ ಸಿನಿಮಾ ಸೂಪರ್ ಹಿಟ್ ಆಯಿತು. ಇದನ್ನು ಹಿಂದಿಗೆ ‘ಶೆಹಜಾದ’ ಎಂದು ರಿಮೇಕ್ ಮಾಡಲಾಯಿತು. ಆದರೆ, ಬಾಲಿವುಡ್​ ಮಂದಿಗೆ ಈ ಚಿತ್ರ ಇಷ್ಟವಾಗಿಲ್ಲ.

ದಕ್ಷಿಣದ ಸಿನಿಮಾಗಳನ್ನು ರಿಮೇಕ್ ಮಾಡಿದ ಅಜಯ್-ಅಕ್ಷಯ್​ಗೆ ಅಗ್ನಿಪರೀಕ್ಷೆ
ಅಜಯ್ ದೇವಗನ್-ಅಕ್ಷಯ್ ಕುಮಾರ್

Updated on: Feb 22, 2023 | 7:47 AM

ದಕ್ಷಿಣದ ಸಿನಿಮಾಗಳನ್ನು ರಿಮೇಕ್ ಮಾಡುವ ಟ್ರೆಂಡ್ ಬಾಲಿವುಡ್​ನಲ್ಲಿ ಜೋರಾಗಿದೆ. ದಕ್ಷಿಣದ ಹಲವು ಸಿನಿಮಾಗಳು ಬಾಲಿವುಡ್​​ಗೆ ರಿಮೇಕ್ ಆಗಿವೆ. ಈ ಪೈಕಿ ಕೆಲ ಸಿನಿಮಾಗಳು ಗೆದ್ದರೆ, ಇನ್ನೂ ಕೆಲ ಚಿತ್ರಗಳು ಸೋತಿವೆ. ಈಗ ಅಕ್ಷಯ್ ಕುಮಾರ್ (Akshay Kumar) ನಟನೆಯ ‘ಸೆಲ್ಫಿ’ (Selfie) ಹಾಗೂ ಅಜಯ್ ದೇವಗನ್ ಅಭಿನಯದ ‘ಭೋಲಾ’ ಚಿತ್ರಗಳು ರಿಲೀಸ್ ಆಗುತ್ತಿವೆ. ಎರಡೂ ಚಿತ್ರಗಳು ರಿಮೇಕ್ ಆಗಿದ್ದು, ಈ ಸಿನಿಮಾಗಳು ಬಾಕ್ಸ್ ಆಫೀಸ್​​ನಲ್ಲಿ ಕಮಾಲ್ ಮಾಡಲಿದೆಯೇ ಎನ್ನುವ ಪ್ರಶ್ನೆ ಸಿನಿಪ್ರಿಯರಲ್ಲಿ ಮೂಡಿದೆ.

ಅಲ್ಲು ಅರ್ಜುನ್ ನಟನೆಯ ‘ಅಲ ವೈಕುಂಠಪುರಮುಲೋ’ ಸಿನಿಮಾ ಸೂಪರ್ ಹಿಟ್ ಆಯಿತು. ಇದನ್ನು ಹಿಂದಿಗೆ ‘ಶೆಹಜಾದ’ ಎಂದು ರಿಮೇಕ್ ಮಾಡಲಾಯಿತು. ಆದರೆ, ಬಾಲಿವುಡ್​ ಮಂದಿಗೆ ಈ ಚಿತ್ರ ಇಷ್ಟವಾಗಿಲ್ಲ. ಸಿನಿಮಾ ಸಾಧಾರಣ ಗಳಿಕೆ ಮಾಡುತ್ತಿದೆ. ಹೀಗಾಗಿ, ಈ ಸಿನಿಮಾ ಕೆಲವೇ ದಿನಗಳಲ್ಲಿ ಅಂಗಡಿ ಬಾಗಿಲು ಮುಚ್ಚಲಿದೆ. ಕಳೆದ ವರ್ಷ ರಿಲೀಸ್ ಆಗಿದ್ದ ಅಜಯ್ ದೇವಗನ್ ನಟನೆಯ ‘ದೃಶ್ಯಂ 2’ ಸಿನಿಮಾ ಸೂಪರ್ ಹಿಟ್ ಆಗಿದೆ. ಇದು ಕೂಡ ರಿಮೇಕ್. ಹೀಗಾಗಿ, ರಿಮೇಕ್ ಚಿತ್ರಗಳ ಪೈಕಿ ಯಾವುದನ್ನು ಇಷ್ಟಪಡುತ್ತಾರೆ, ಯಾವುದನ್ನು ಇಷ್ಟಪಡುವುದಿಲ್ಲ ಎಂಬುದನ್ನು ನಿರ್ಧರಿಸೋದು ಕಷ್ಟವಾಗಿದೆ.

ಮಲಯಾಳಂನ ಸೂಪರ್ ಹಿಟ್ ಸಿನಿಮಾ ‘ಡ್ರೈವಿಂಗ್ ಲೈಸೆನ್ಸ್​’ ಚಿತ್ರ ಹಿಂದಿಗೆ ‘ಸೆಲ್ಫಿ’ ಆಗಿ ರಿಮೇಕ್ ಆಗಿದೆ. ಫೆ.24ರಂದು ಸಿನಿಮಾ ರಿಲೀಸ್ ಆಗುತ್ತಿದೆ. ಅಕ್ಷಯ್ ಕುಮಾರ್ ಹಾಗೂ ಇಮ್ರಾನ್ ಹಷ್ಮಿ ಈ ಚಿತ್ರದಲ್ಲಿ ಒಟ್ಟಾಗಿ ನಟಿಸಿದ್ದಾರೆ. ‘ಸೆಲ್ಫಿ’ ದೊಡ್ಡ ಮಟ್ಟದ ಪ್ರಮೋಷನ್ ಮಾಡಲಾಗುತ್ತಿದೆ. ಈ ಚಿತ್ರ ಗೆಲ್ಲುತ್ತದೆಯೇ ಅಥವಾ ಇಲ್ಲವೇ ಎನ್ನುವ ಪ್ರಶ್ನೆಗೆ ಫೆ.24ರಂದು ಉತ್ತರ ಸಿಗಲಿದೆ.

ಇನ್ನು ತಮಿಳಿನ ಸೂಪರ್ ಹಿಟ್ ಚಿತ್ರ ‘ಕೈದಿ’ ಸಿನಿಮಾ ಹಿಂದಿಗೆ ‘ಭೋಲಾ’ ಆಗಿ ರಿಮೇಕ್ ಆಗಿದೆ. ಅಜಯ್ ದೇವಗನ್ ಅವರು ಈ ಚಿತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಮಾರ್ಚ್​ 30ರಂದು ರಿಲೀಸ್ ಆಗುತ್ತಿದೆ. ಈ ಸಿನಿಮಾ ಕೂಡ ರಿಮೇಕ್ ಆಗಿದ್ದು, ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ.

ಒಟಿಟಿ ಇಲ್ಲದ ಸಮಯದಲ್ಲಿ ರಿಮೇಕ್ ಚಿತ್ರಗಳು ಕೆಲಸ ಮಾಡುತ್ತಿದ್ದವು. ಆದರೆ, ಈಗ ಕಾಲ ಬದಲಾಗಿದೆ. ಒಟಿಟಿ ಜಗತ್ತು ಹಿರಿದಾಗಿದೆ. ಹಲವು ಚಿತ್ರಗಳನ್ನು ಬೇರೆ ಬೇರೆ ಭಾಷೆಗಳಲ್ಲಿ ನೋಡಲು ಅವಕಾಶ ಇದೆ. ಹೀಗಾಗಿ, ರಿಮೇಕ್ ಚಿತ್ರಗಳು ಮೊದಲಿನಷ್ಟು ಕೆಲಸ ಮಾಡುತ್ತಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ