ಸಣ್ಣ ವಯಸ್ಸಿಗೆ ಕುಡಿತ ಆರಂಭಿಸಿದ್ದ ಅಜಯ್ ದೇವಗನ್, ಈಗಲೂ ಕುಡಿಯುತ್ತಾರೆ ಆದರೆ…

|

Updated on: Nov 13, 2024 | 11:09 AM

Ajay Devgn: ಅಜಯ್ ದೇವಗನ್ ಅವರು ಇತ್ತೀಚಿನ ಸಂದರ್ಶನದಲ್ಲಿ ತಮ್ಮ ಮದ್ಯಪಾನದ ಅಭ್ಯಾಸದ ಬಗ್ಗೆ ಮಾತನಾಡಿದ್ದಾರೆ. ಅತ್ಯಂತ ಕಡಿಮೆ ವಯಸ್ಸಿನಿಂದಲೇ ಮದ್ಯಪಾನ ಮಾಡುತ್ತಿರುವ ಅವರು, ತಮ್ಮ ಮೇಲೆ ಕೆಲವು ನಿಯಮಗಳನ್ನು ಹೇರಿಕೊಂಡಿದ್ದಾರಂತೆ.

ಸಣ್ಣ ವಯಸ್ಸಿಗೆ ಕುಡಿತ ಆರಂಭಿಸಿದ್ದ ಅಜಯ್ ದೇವಗನ್, ಈಗಲೂ ಕುಡಿಯುತ್ತಾರೆ ಆದರೆ...
Follow us on

ಬಾಲಿವುಡ್​ನ ಸ್ಟಾರ್ ನಟರ ಸಾಲಿನಲ್ಲೇ ನಿಲ್ಲುವ ನಟ ಅಜಯ್ ದೇವಗನ್. ಶಾರುಖ್, ಸಲ್ಮಾನ್, ಆಮಿರ್, ಅಕ್ಷಯ್, ಅಜಯ್ ದೇವಗನ್ ಅವರೆಲ್ಲ ಒಂದೇ ಕಾಲಘಟ್ಟದ ನಟರು. ಎಲ್ಲರೂ ಸ್ಟಾರ್​ಗಳೇ. ಒಂದು ಸಮಯದಲ್ಲಿ ಅಜಯ್ ದೇವಗನ್ ಒಂದು ವರ್ಷಕ್ಕೆ 14-15 ಸಿನಿಮಾಗಳಲ್ಲಿ ನಟಿಸುತ್ತಿದ್ದರು. ಅಜಯ್ ದೇವಗನ್ ಮತ್ತು ಅಕ್ಷಯ್ ಕುಮಾರ್ ಅವರಿಗಾಗಿ ಬಾಲಿವುಡ್​ನಲ್ಲಿ ಹೊಸ ನಿಯಮವನ್ನೇ ಜಾರಿ ಮಾಡಲಾಗಿತ್ತು. ಒಬ್ಬ ನಟ ಒಂದು ವರ್ಷಕ್ಕೆ 11 ಸಿನಿಮಾಗಳಲ್ಲಿ ಮಾತ್ರ ನಟಿಸಬೇಕು ಎಂದು. ಅಜಯ್ ದೇವಗನ್ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಾಗಿನಿಂದಲೂ ಫಿಟ್ ನಟ, ಶಿಸ್ತಿನ ನಟ, ಇತ್ತೀಚೆಗಿನ ಸಂದರ್ಶನವೊಂದರಲ್ಲಿ ಅವರು ತಮ್ಮ ಕುಡಿತದ ಚಟದ ಬಗ್ಗೆ ಮಾತನಾಡಿದ್ದಾರೆ.

ಪಾಡ್​ಕಾಸ್ಟ್ ಒಂದರಲ್ಲಿ ಮಾತನಾಡಿರುವ ಅಜಯ್ ದೇವಗನ್, ‘ನಾನು ಬಹಳ ಸಣ್ಣ ವಯಸ್ಸಿಗೆ ಮದ್ಯ ಸೇವಿಸಲು ಆರಂಭಿಸಿಬಿಟ್ಟೆ. ಪಂಜಾಬಿ ಕುಟುಂಬದವನಾದ್ದರಿಂದ ನಮ್ಮ ಕಡೆ ಅದು ತುಸು ಸಾಮಾನ್ಯ ಎಂಬಂತೆ ಇತ್ತು’ ಎಂದಿರುವ ಅಜಯ್, ತಾವು ತಮ್ಮ 15ನೇ ವಯಸ್ಸಿಗೆ ಕುಡಿತ ಆರಂಭಿಸಿದ್ದಾಗಿ ಹೇಳಿಕೊಂಡಿದ್ದಾರೆ. ಆದರೆ ಎಂದಿಗೂ ಸಹ ಕುಡಿತು ಅತಿಯಾಗಿ ತೂರಾಡಿದ್ದಾಗಲಿ, ಸಮಸ್ಯೆ ತಂದುಕೊಂಡಿದ್ದಾಗಲಿ ಇಲ್ಲ ಎಂದಿರುವ ಅಜಯ್ ದೇವಗನ್, ಇತ್ತೀಚೆಗೆ ಕುಡಿತಕ್ಕೆ ಕೆಲವು ನಿಯಮಗಳನ್ನು ಹೇರಿಕೊಂಡಿರುವುದಾಗಿ ಹೇಳಿದ್ದಾರೆ.

ಇದನ್ನೂ ಓದಿ:‘ನನಗೆ ಪರವಾಗಿಲ್ಲ’; ಗುಟ್ಕಾ ಜಾಹೀರಾತಿನ ಪ್ರಚಾರದ ಬಗ್ಗೆ ಅಜಯ್ ದೇವಗನ್ ಮಾತು

‘ಈಗಲೂ ಕುಡಿಯುತ್ತೇನೆ ಆದರೆ ಪಾರ್ಟಿಗಳಲ್ಲಿ, ಅಥವಾ ಹೆಚ್ಚು ಜನ ಸೇರಿರುವಲ್ಲಿ ನಾನು ಮದ್ಯ ಸೇವಿಸುವುದಿಲ್ಲ. ಹಲವರಿಗೆ ಮದ್ಯವನ್ನು ಹ್ಯಾಂಡಲ್ ಮಾಡಲು ಬರುವುದಿಲ್ಲ, ಕುಡಿದು ಹೆಚ್ಚಾಗಿ ತೂರಾಡುವವರು, ಅತಿಯಾಗಿ ಮಾತನಾಡುವವರು, ಭಾವನೆಗಳನ್ನು ಅತಿಯಾಗಿ ಎಕ್ಸ್​ಪ್ರೆಸ್ ಮಾಡುವುದು ನನಗೆ ಇಷ್ಟವಾಗುವುದಿಲ್ಲ. ಹಾಗಾಗಿ ನಾನು ಖಾಸಗಿಯಾಗಿ ಒಬ್ಬನೇ ಕುಡಿಯುತ್ತೇನೆ. ಕಡಿಮೆ ಕುಡಿಯುತ್ತೇನೆ, ಕುಡಿಯುವಾಗ ಯಾವುದಾದರೂ ಸಿನಿಮಾ ನೋಡುತ್ತೇನೆ, ಅಥವಾ ಬಹಳ ಕಡಿಮೆ ಮಂದಿ ಸ್ನೇಹಿತರ ಜೊತೆಗೆ ಮಾತ್ರವೇ ಕುಡಿಯುತ್ತೇನೆ’ ಎಂದಿದ್ದಾರೆ ಅಜಯ್ ದೇವಗನ್.

ಅಜಯ್ ದೇವಗನ್ ನಟನೆಯ ‘ಸಿಂಘಂ ಅಗೇನ್’ ಸಿನಿಮಾ ಕೆಲ ವಾರದ ಹಿಂದಷ್ಟೆ ಬಿಡುಗಡೆ ಆಗಿದೆ. ಸಿನಿಮಾ ಬ್ಲಾಕ್ ಬಸ್ಟರ್ ಆಗಿದ್ದು 500 ಕೋಟಿಗೂ ಹೆಚ್ಚಿನ ಹಣವನ್ನು ಗಳಿಕೆ ಮಾಡಿದೆ. ಅಜಯ್ ಪ್ರಸ್ತುತ ‘ದೃಶ್ಯಂ 3’ ಸಿನಿಮಾದಲ್ಲಿ ನಟಿಸಲಿದ್ದಾರೆ. ಮಲಯಾಳಂ ‘ದೃಶ್ಯಂ 3’ ಹಾಗೂ ಹಿಂದಿಯ ‘ದೃಶ್ಯಂ 3’ ಸಿನಿಮಾ ಒಂದೇ ಬಾರಿಗೆ ಚಿತ್ರೀಕರಣಗೊಳ್ಳಲಿವೆ. ಅದರ ಹೊರತಾಗಿ, ‘ಆಜಾದ್’, ‘ರೈಡ್ 2’, ‘ದೇ ದೇ ಪ್ಯಾರ್ ದೇ 2’, ‘ಸನ್ ಆಫ್ ಸರ್ದಾರ್ 2’ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ