‘ಧುರಂಧರ್ 2’ ಅಬ್ಬರಕ್ಕೆ ಹೆದರಿದ ಅಕ್ಷಯ್ ಕುಮಾರ್? ‘ಭೂತ್ ಬಂಗ್ಲ’ ಬಿಡುಗಡೆ ಮುಂದೂಡಿಕೆ ಸಾಧ್ಯತೆ

‘ಧುರಂಧರ್ 2’ ಸಿನಿಮಾದ ಅಬ್ಬರದಿಂದ ಹಲವು ಸಿನಿಮಾಗಳ ಮೇಲೆ ಪರಿಣಾಮ ಬೀರಿದೆ. ಅಕ್ಷಯ್ ಕುಮಾರ್ ನಟನೆಯ ‘ಭೂತ್ ಬಂಗ್ಲ’ ಸಿನಿಮಾಗೂ ಈಗಾಗಲೇ ಹೆದರಿಕೆ ಶುರುವಾಗಿದೆ. ಚಿತ್ರದ ಬಿಡುಗಡೆ ದಿನಾಂಕ ಮುಂದೂಡಿಕೆ ಬಗ್ಗೆ ಚರ್ಚೆ ನಡೆಯುತ್ತಿದೆ ಎನ್ನಲಾಗಿದೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ..

‘ಧುರಂಧರ್ 2’ ಅಬ್ಬರಕ್ಕೆ ಹೆದರಿದ ಅಕ್ಷಯ್ ಕುಮಾರ್? ‘ಭೂತ್ ಬಂಗ್ಲ’ ಬಿಡುಗಡೆ ಮುಂದೂಡಿಕೆ ಸಾಧ್ಯತೆ
Dhurandhar 2, Bhooth Bangla

Updated on: Mar 25, 2026 | 8:12 PM

ಬಾಲಿವುಡ್‌ನಲ್ಲಿ ನಟ ರಣವೀರ್ ಸಿಂಗ್ (Ranveer Singh) ಅವರು ಹೊಸ ಬಾಕ್ಸ್ ಆಫೀಸ್ ಸುಲ್ತಾನ್ ಆಗಿದ್ದಾರೆ. ಅವರು ಅಭಿನಯಿಸಿದ ‘ಧುರಂಧರ್: ದಿ ರಿವೆಂಜ್’ (Dhurandhar: The Revenge) ಚಿತ್ರವು ಥಿಯೇಟರ್‌ಗಳಲ್ಲಿ ಸುನಾಮಿ ಎಬ್ಬಿಸಿದೆ. ಈ ಚಿತ್ರದ ಅಭೂತಪೂರ್ವ ಯಶಸ್ಸು ಈಗ ಅಕ್ಷಯ್ ಕುಮಾರ್ ಅವರ ಮುಂಬರುವ ಹಾರರ್-ಕಾಮಿಡಿ ಚಿತ್ರ ‘ಭೂತ್ ಬಂಗ್ಲ’ (Bhooth Bangla) ಮೇಲೆ ಪ್ರಭಾವ ಬೀರಲಾರಂಭಿಸಿದೆ. ಹಾಗಾಗಿ ‘ಭೂತ್ ಬಂಗ್ಲ’ ಚಿತ್ರದ ಬಿಡುಗಡೆ ದಿನಾಂಕ ಮುಂದೂಡಿಕೆ ಆಗುವ ಸಾಧ್ಯತೆ ಇದೆ ಎಂಬ ಗಾಸಿಪ್ ಕೇಳಿಬರುತ್ತಿದೆ.

ಮಾರ್ಚ್ 19ರಂದು ಬಿಡುಗಡೆಯಾದ ‘ಧುರಂಧರ್ 2’ ಸಿನಿಮಾ ವೀಕೆಂಡ್ ಮಾತ್ರವಲ್ಲದೇ ವಾರದ ದಿನಗಳಲ್ಲೂ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಈ ಕ್ರೇಜ್ ಸದ್ಯಕ್ಕೆ ಕಡಿಮೆಯಾಗುವ ಲಕ್ಷಣಗಳು ಕಾಣುತ್ತಿಲ್ಲ. ಈ ಹಿನ್ನೆಲೆಯಲ್ಲಿ, ಏಪ್ರಿಲ್ 10ರಂದು ಬಿಡುಗಡೆ ಆಗಬೇಕಿದ್ದ ‘ಭೂತ್ ಬಂಗ್ಲ’ ಚಿತ್ರವನ್ನು ಒಂದು ವಾರ ಮುಂದೂಡಲು ಚಿತ್ರತಂಡ ಚಿಂತನೆ ನಡೆಸುತ್ತಿದೆ ಎಂದು ಮಾಧ್ಯಮಗಳಲ್ಲಿ ವರದಿ ಆಗಿದೆ.

‘ಧುರಂಧರ್ 2 ಸಿನಿಮಾ ಐತಿಹಾಸಿಕ ಕಲೆಕ್ಷನ್ ಮಾಡುತ್ತಿದೆ. ಇದು ತನ್ನ ನಾಲ್ಕನೇ ವಾರದಲ್ಲೂ (ಅಂದರೆ ಏಪ್ರಿಲ್ 10ರ ಆಸುಪಾಸು) ಪ್ರಬಲವಾಗಿ ಮುನ್ನುಗ್ಗುವ ಸಾಧ್ಯತೆಯಿದೆ. ಅದೇ ಸಮಯದಲ್ಲಿ ಏಪ್ರಿಲ್ 17ರಂದು ಯಾವುದೇ ದೊಡ್ಡ ಹಿಂದಿ ಚಿತ್ರಗಳು ಬಿಡುಗಡೆಗೆ ನಿಗದಿಯಾಗಿಲ್ಲ. ಹೀಗಾಗಿ ಪೈಪೋಟಿ ತಪ್ಪಿಸಲು ‘ಭೂತ್ ಬಂಗ್ಲ’ ಚಿತ್ರವನ್ನು ಏಪ್ರಿಲ್ 17ಕ್ಕೆ ಮುಂದೂಡುವುದು ಸೂಕ್ತ ಎಂಬ ಚರ್ಚೆ ನಡೆಯುತ್ತಿದೆ’ ಎಂದು ಬಾಲಿವುಡ್ ಹಂಗಾಮ ವರದಿ ಮಾಡಿದೆ.

ಆದರೆ, ಮತ್ತೊಂದು ಮಾಹಿತಿ ಪ್ರಕಾರ, ಏಪ್ರಿಲ್ 10ರ ಹೊತ್ತಿಗೆ ಹೆಚ್ಚಿನ ಜನರು ‘ಧುರಂಧರ್ 2’ ಸಿನಿಮಾವನ್ನು ನೋಡಿ ಮುಗಿಸಿರುತ್ತಾರೆ. ಹಾಗಾಗಿ ಹೊಸ ಚಿತ್ರ ‘ಭೂತ್ ಬಂಗ್ಲ’ ಬಿಡುಗಡೆ ಆದರೆ ಹೆಚ್ಚಿನ ಲಾಭ ಸಿಗಬಹುದು ಎಂಬ ವಾದವೂ ಇದೆ. ನಟ ಅಕ್ಷಯ್ ಕುಮಾರ್ ಮತ್ತು ನಿರ್ಮಾಪಕಿ ಏಕ್ತಾ ಕಪೂರ್ ಈ ಬಗ್ಗೆ ಮುಂದಿನ 24 ಗಂಟೆಗಳಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ.

ಇದನ್ನೂ ಓದಿ: Dhurandhar 2: ರಣವೀರ್ ಸಿಂಗ್ ಮುಂದೆ ಬೇರೆ ಹೀರೋಗಳೆಲ್ಲ ಜೋಕರ್​ಗಳು; ಆರ್​ಜಿವಿ ಟೀಕೆ

ಒಂದು ವೇಳೆ ‘ಭೂತ್ ಬಂಗ್ಲ’ ಚಿತ್ರವು ನಿಗದಿತ ದಿನಾಂಕವಾದ ಏಪ್ರಿಲ್ 10ರಂದೇ ಬಿಡುಗಡೆ ಆಗುವುದಾದರೆ, ಬಹುನಿರೀಕ್ಷಿತ ಟ್ರೇಲರ್​ ಅನ್ನು ಈ ಶುಕ್ರವಾರ (ಮಾರ್ಚ್ 27) ಬಿಡುಗಡೆ ಮಾಡಲು ತಂಡ ಸಜ್ಜಾಗಿದೆ. ಒಂದು ವೇಳೆ, ಸಿನಿಮಾ ಮುಂದೂಡಿಕೆಯಾದರೆ ಟ್ರೇಲರ್ ಲಾಂಚ್ ಕೂಡ ವಿಳಂಬವಾಗಲಿದೆ. ಈ ಬಗ್ಗೆ ಸಿನಿಪ್ರಿಯರಿಗೆ ಕೌತುಕ ಹೆಚ್ಚಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 8:12 pm, Wed, 25 March 26

Follow Us