
ಪರಿಸ್ಥಿತಿ ಚೆನ್ನಾಗಿ ಇದ್ದಿದ್ದರೆ ನಟ ಅಕ್ಷಯ್ ಕುಮಾರ್ ಅವರು ಇಂದು (ಸೆ.9) ಅದ್ದೂರಿಯಾಗಿ ಬರ್ತ್ಡೇ ಆಚರಣೆ ಮಾಡಿಕೊಳ್ಳಬೇಕಿತ್ತು. ಆದರೆ ಈಗ ಅವರ ಕುಟುಂಬದಲ್ಲಿ ಹುಟ್ಟುಹಬ್ಬದ ಸಂಭ್ರಮವಿಲ್ಲ. ಜನ್ಮದಿನಕ್ಕೂ ಒಂದು ದಿನ ಮುನ್ನ ಅಂದರೆ ಸೆ.8ರಂದು ಮುಂಜಾನೆ ಅಕ್ಷಯ್ ಕುಮಾರ್ ತಾಯಿ ಅರುಣಾ ಭಾಟಿಯಾ ನಿಧನರಾದರು. ಹಾಗಾಗಿ ಅವರು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ. ಈ ಸಂದಿಗ್ಧ ಸಂದರ್ಭದಲ್ಲಿ ತಾಯಿಯನ್ನು ನೆನೆದು ಅಕ್ಷಯ್ ಕುಮಾರ್ ಭಾವುಕವಾಗಿ ಪೋಸ್ಟ್ ಮಾಡಿದ್ದಾರೆ. ಅವರ ಮನೆಯಲ್ಲೀಗ ಶೋಕದ ವಾತಾವರಣ ನಿರ್ಮಾಣ ಆಗಿದೆ. ತಾಯಿಯನ್ನು ಕಳೆದುಕೊಂಡ ಅವರಿಗೆ ಅಭಿಮಾನಿಗಳು, ಸ್ನೇಹಿತರು, ಸೆಲೆಬ್ರಿಟಿಗಳು ಸಾಂತ್ವನ ಹೇಳುತ್ತಿದ್ದಾರೆ.
ಅಕ್ಷಯ್ ಕುಮಾರ್ ಕೆನ್ನೆಗೆ ಅರುಣಾ ಭಾಟಿಯಾ ಅವರು ತನ್ಮಯತೆಯಿಂದ ಮುತ್ತಿಡುತ್ತಿರುವ ಕ್ಷಣ ಈ ಫೋಟೋದಲ್ಲಿ ಸೆರೆಯಾಗಿದೆ. ಅದನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಶೇರ್ ಮಾಡಿಕೊಂಡಿರುವ ಅಕ್ಕಿ, ಅಮ್ಮನನ್ನು ಭಾವುಕವಾಗಿ ಸ್ಮರಿಸಿದ್ದಾರೆ. ‘ಅಮ್ಮ ನನಗಾಗಿ ಮೇಲಿಂದಲೇ ಹ್ಯಾಪಿ ಬರ್ತ್ಡೇ ಅಂತ ಹಾಡುತ್ತಿದ್ದಾರೆ ಎಂಬ ನಂಬಿಕೆ ನನಗಿದೆ. ಸಾಂತ್ವನ ಹೇಳಿದ ಮತ್ತು ಹುಟ್ಟುಹಬ್ಬಕ್ಕೆ ಶುಭ ಹಾರೈಸಿದ ನಿಮ್ಮೆಲ್ಲರಿಗೂ ಧನ್ಯವಾದಗಳು. ಜೀವನ ಮುಂದೆ ಸಾಗಲೇಬೇಕು’ ಎಂದು ಅಕ್ಷಯ್ ಕುಮಾರ್ ಬರೆದುಕೊಂಡಿದ್ದಾರೆ.
ತಾಯಿ ನಿಧನರಾದ ಸುದ್ದಿಯನ್ನು ಸೆ.8ರಂದು ಬೆಳಗ್ಗೆ ಅಕ್ಷಯ್ ಕುಮಾರ್ ಸೋಶಿಯಲ್ ಮೀಡಿಯಾ ಖಾತೆಗಳ ಮೂಲಕ ತಿಳಿಸಿದ್ದರು. ‘ನನ್ನ ತಾಯಿಯೇ ನನ್ನ ಸರ್ವಸ್ವ. ಇಂದು ಅವರನ್ನು ಕಳೆದುಕೊಂಡು ನಾನು ಅಸಹನೀಯ ನೋವನ್ನು ಅನುಭವಿಸುತ್ತಿದ್ದೇನೆ. ನನ್ನ ಅಮ್ಮ ಅರುಣಾ ಭಾಟಿಯಾ ಇಂದು ಬೆಳಿಗ್ಗೆ ಶಾಂತಿಯುತವಾಗಿ ಈ ಜಗತ್ತನ್ನು ತೊರೆದರು. ಬೇರೆ ಜಗತ್ತಿನಲ್ಲಿರುವ ನನ್ನ ತಂದೆಯೊಂದಿಗೆ ಅವರು ಸೇರಿಕೊಂಡರು. ನನ್ನ ತಾಯಿ ಗುಣಮುಖರಾಗಲೆಂದು ಬಯಸಿದ ನಿಮ್ಮ ಪ್ರಾರ್ಥನೆಯನ್ನು ನಾನು ಮತ್ತು ನನ್ನ ಕುಟುಂಬದವರು ಹೃದಯಪೂರ್ವಕವಾಗಿ ಗೌರವಿಸುತ್ತೇವೆ. ಓಂ ಶಾಂತಿ’ ಎಂದು ಅವರು ಬರೆದುಕೊಂಡಿದ್ದರು.
ಅಕ್ಷಯ್ ಕುಮಾರ್ ಅವರ ಗೆಳೆಯ, ನಿರ್ದೇಶಕ ಆನಂದ್ ಎಲ್. ರಾಯ್ ಅವರ ತಾಯಿ ಕೂಡ ಸೆ.8ರಂದು ನಿಧನರಾದರು. ತಮ್ಮ ತಾಯಿಯ ಅಂತ್ಯ ಸಂಸ್ಕಾರ ಮುಗಿಸಿದ ಬಳಿಕ ಗೆಳೆಯನ ತಾಯಿಯ ಅಂತ್ಯಕ್ರಿಯೆಯಲ್ಲೂ ಅಕ್ಷಯ್ ಕುಮಾರ್ ಪಾಲ್ಗೊಂಡಿದ್ದರು. ಅವರ ಈ ನಡೆಗೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಫೋಟೋಗಳು ವೈರಲ್ ಆಗಿವೆ.
ಇದನ್ನೂ ಓದಿ:
Akshay Kumar: ಅಕ್ಷಯ್ ಕುಮಾರ್ಗೆ ಮಾತೃ ವಿಯೋಗ; ಅಗಲಿದ ಅಮ್ಮನಿಗೆ ಅಕ್ಷರ ನಮನ ಸಲ್ಲಿಸಿದ ನಟ
ತಾಯಿಯ ನಿಧನದ ಬಳಿಕ ಬೇರೊಬ್ಬರ ಅಂತ್ಯಕ್ರಿಯೆಯಲ್ಲೂ ಪಾಲ್ಗೊಂಡ ಅಕ್ಷಯ್ ಕುಮಾರ್; ಭಾವುಕರಾದ ಫ್ಯಾನ್ಸ್