ಬರೀ ಸಿನಿಮಾದಲ್ಲಿ ಮಾತ್ರವಲ್ಲದೇ ನಿಜ ಜೀವನದಲ್ಲೂ ಕೂಡ ಅಕ್ಷಯ್ ಕುಮಾರ್ (Akshay Kumar) ಅವರು ತುಂಬ ಆ್ಯಕ್ಟೀವ್ ಆಗಿರುತ್ತಾರೆ. ಪ್ರತಿದಿನ ಅವರು ವ್ಯಾಯಾಮ ತಪ್ಪಿಸುವುದಿಲ್ಲ. ಕ್ರೀಡೆ ಬಗ್ಗೆಯೂ ಅವರಿಗೆ ಸಖತ್ ಆಸಕ್ತಿ ಇದೆ. ಈಗ ಅವರು ಪೊಲೀಸರ ಜೊತೆ ವಾಲಿಬಾಲ್ (Volleyball) ಆಡಿದ್ದಾರೆ. ಆ ಸಂದರ್ಭದ ವಿಡಿಯೋ ವೈರಲ್ ಆಗಿದೆ. ಶೂಟಿಂಗ್ ಸಲುವಾಗಿ ಡೆಹರಾಡೂನ್ಗೆ ತೆರಳಿರುವ ಅಕ್ಷಯ್ ಕುಮಾರ್ ಅವರು ಬಿಡುವಿನ ವೇಳೆ ವಾಲಿಬಾಲ್ ಆಡಿದ್ದಾರೆ. ಅವರ ಪಂದ್ಯವನ್ನು ನೋಡಲು ಸ್ಟೇಡಿಯಂನಲ್ಲಿ ಜನರು ನೆರೆದಿದ್ದರು. ಸದ್ಯ ವೈರಲ್ ಆಗಿರುವ ವಿಡಿಯೋಗೆ (Akshay Kumar Viral Video) ಫ್ಯಾನ್ಸ್ ಕಮೆಂಟ್ ಮಾಡುತ್ತಿದ್ದಾರೆ. ಅಕ್ಷಯ್ ಕುಮಾರ್ ಅವರ ಆಸಕ್ತಿಗೆ ನೆಟ್ಟಿಗರು ಭೇಷ್ ಎನ್ನುತ್ತಿದ್ದಾರೆ. ಸಾಲು ಸಾಲು ಸಿನಿಮಾಗಳ ಸೋಲಿನ ನೋವು ಮರೆತು ಅವರು ಮುನ್ನುಗ್ಗುತ್ತಿದ್ದಾರೆ.
ಕೆಲವೇ ದಿನಗಳ ಹಿಂದೆ ಅಕ್ಷಯ್ ಕುಮಾರ್ ಅವರು ಕೇದಾರನಾಥ್ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಆಗಲೂ ಕೂಡ ವಿಡಿಯೋ ವೈರಲ್ ಆಗಿತ್ತು. ಪ್ರಸ್ತುತ ಅಕ್ಷಯ್ ಕುಮಾರ್ ಅವರು ‘ಶಂಕರ’ ಸಿನಿಮಾದ ಶೂಟಿಂಗ್ನಲ್ಲಿ ಬ್ಯುಸಿ ಆಗಿದ್ದಾರೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಒಪ್ಪಿಕೊಂಡು, ಅತಿ ವೇಗವಾಗಿ ಶೂಟಿಂಗ್ ಮುಗಿಸುವುದು ಅವರಿಗೆ ರೂಢಿ ಆಗಿದೆ. ಆದರೆ ಇದರಿಂದ ಅವರಿಗೆ ತೊಂದರೆ ಆಗಿದ್ದು ಕೂಡ ಉಂಟು. ಅವಸರದ ಕಾರಣಕ್ಕೆ ಗುಣಮಟ್ಟದ ಸಿನಿಮಾಗಳನ್ನು ಮಾಡಲು ಸಾಧ್ಯವಾಗುತ್ತಿಲ್ಲ ಎಂಬ ಟೀಕೆ ಇದೆ.
#AkshayKumar मिस्टर खिलाड़ी पहुंचे पुलिस लाइन देहरादून, जवानों के साथ एक्टर ने खेला वॉलीबॉल मैच pic.twitter.com/QOnLiqkil6
— Nikhil katariya (@Nikhilkatariy20) May 26, 2023
ಅಕ್ಷಯ್ ಕುಮಾರ್ ಅವರು ನಟಿಸುತ್ತಿರುವ ‘ಶಂಕರ’ ಸಿನಿಮಾದಲ್ಲಿ ನಾಯಕಿಯಾಗಿ ಅನನ್ಯಾ ಪಾಂಡೆ ಅಭಿನಯಿಸುತ್ತಿದ್ದಾರೆ. ಈ ಸಿನಿಮಾದ ಬಗ್ಗೆ ಅವರು ಹೆಚ್ಚಿನ ಮಾಹಿತಿ ಬಿಟ್ಟುಕೊಟ್ಟಿಲ್ಲ. ಸಾಕಷ್ಟು ಗೌಪ್ಯವಾಗಿಯೇ ಎಲ್ಲ ಕೆಲಸಗಳನ್ನು ಮುಗಿಸಲಾಗುತ್ತಿದೆ. ಇದಲ್ಲದೇ ಹಲವು ಚಿತ್ರಗಳು ಅವರ ಕೈಯಲ್ಲಿವೆ. ‘ಸೂರರೈ ಪೋಟ್ರು’ ಹಿಂದಿ ರಿಮೇಕ್, ‘ಬಡೆಮಿಯಾ ಚೋಟೆ ಮಿಯಾ’, ‘ಓಹ್ ಮೈ ಗಾಡ್ 2’, ‘ವೇಡಾತ್ ಮರಾಠೆ ವೀರ್ ದೌಡಲೇ ಸಾಥ್’, ‘ದ ಗ್ರೇಡ್ ಇಂಡಿಯನ್ ರೆಸ್ಕ್ಯೂ’ ಮುಂತಾದ ಸಿನಿಮಾಗಳು ಒಂದರಹಿಂದೊಂದು ಬಿಡುಗಡೆ ಆಗಲಿವೆ.
ಇದನ್ನೂ ಓದಿ: Akshay Kumar: ಸಾಹಸ ದೃಶ್ಯದ ಶೂಟಿಂಗ್ ವೇಳೆ ಅಕ್ಷಯ್ ಕುಮಾರ್ಗೆ ಪೆಟ್ಟು; ಇಲ್ಲಿದೆ ಹೆಲ್ತ್ ಅಪ್ಡೇಟ್
2022ರ ವರ್ಷ ಅಕ್ಷಯ್ ಕುಮಾರ್ ಪಾಲಿಗೆ ನೀರಸವಾಗಿತ್ತು. ಅವರು ನಟಿಸಿದ ಯಾವ ಚಿತ್ರಗಳೂ ಗೆಲ್ಲಲಿಲ್ಲ. ಕೊನೇ ಪಕ್ಷ 2023ರಲ್ಲಾದರೂ ಅವರು ಗೆಲುವಿನ ಖಾತೆ ತೆರೆಯಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಅದು ಕೂಡ ಸಾಧ್ಯವಾಗಲಿಲ್ಲ. ಅವರು ನಟಿಸಿದ ‘ಸೆಲ್ಫೀ’ ಸಿನಿಮಾ ಫೆಬ್ರವರಿಯಲ್ಲಿ ತೆರೆಕಂಡು ಸೋತಿತು. ಮುಂಬರುವ ಚಿತ್ರಗಳ ಮೂಲಕವಾದರೂ ಅವರಿಗೆ ಯಶಸ್ಸು ಸಿಗಲಿ ಎಂದು ಫ್ಯಾನ್ಸ್ ಹಾರೈಸುತ್ತಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.