Akshay Kumar: ಗಣಿಗಾರಿಕೆ ಕುರಿತು ಅಕ್ಷಯ್ ಕುಮಾರ್ ಹೊಸ ಸಿನಿಮಾ; ಗೆಲುವಿಗಾಗಿ ಟೈಟಲ್ ಬದಲಾವಣೆ ಮಾಡಿದ ಚಿತ್ರತಂಡ?
The Great Indian Rescue: ಅಕ್ಷಯ್ ಕುಮಾರ್ ಅವರು ಬಯೋಪಿಕ್ಗಳ ಬಗ್ಗೆ ಹೆಚ್ಚು ಆಸಕ್ತಿ ಹೊಂದಿದ್ದಾರೆ. ರಿಯಲ್ ಲೈಫ್ ಘಟನೆಗಳನ್ನು ಆಧರಿಸಿದ ಸಿನಿಮಾಗಳಲ್ಲಿ ಅವರು ಹೆಚ್ಚಾಗಿ ನಟಿಸುತ್ತಾರೆ.
ಬಹಳ ವೇಗವಾಗಿ ಸಿನಿಮಾ ಕೆಲಸಗಳನ್ನು ಮುಗಿಸೋದು ಅಕ್ಷಯ್ ಕುಮಾರ್ (Akshay Kumar) ಅವರ ರೂಢಿ. ಹಾಗಾಗಿ ಪ್ರತಿ ವರ್ಷ ಅವರ 4-5 ಸಿನಿಮಾಗಳು ಬಿಡುಗಡೆ ಆಗುತ್ತವೆ. ಈ ಅವಸರದ ಕಾರಣದಿಂದ ಕೆಲವೊಮ್ಮೆ ಅವರು ಎಡವಿದ್ದೂ ಉಂಟು. ಹಾಗಂತ ಅಕ್ಷಯ್ ಕುಮಾರ್ ಅವರ ವೇಗಕ್ಕೆ ಬ್ರೇಕ್ ಬಿದ್ದಿಲ್ಲ. ಈಗಲೂ ಕೂಡ ಅವರು ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಒಪ್ಪಿಕೊಂಡು ನಟಿಸುತ್ತಿದ್ದಾರೆ. 2023ರಲ್ಲಿ ಅಕ್ಷಯ್ ಕುಮಾರ್ ಅಭಿನಯದ ‘ಸೆಲ್ಫಿ’ ಸಿನಿಮಾ ತೆರೆಕಂಡಿತು. ಆದರೆ ಆ ಚಿತ್ರ ಗೆಲುವು ಕಾಣಲಿಲ್ಲ. ಈಗ ಅವರ ಮುಂಬರುವ ಸಿನಿಮಾಗಳಿಗಾಗಿ ಫ್ಯಾನ್ಸ್ ಕಾದಿದ್ದಾರೆ. ಆ ಪೈಕಿ ‘ಕ್ಯಾಪ್ಸೂಲ್ ಗಿಲ್’ (Capsule Gill) ಚಿತ್ರದ ಬಗ್ಗೆ ಹೆಚ್ಚು ನಿರೀಕ್ಷೆ ಇದೆ. ಈ ಸಿನಿಮಾದ ಬಗ್ಗೆ ಒಂದು ಗಾಸಿಪ್ ಕೇಳಿಬಂದಿದೆ. ಬಿಡುಗಡೆಗೆ ಹತ್ತಿರವಾಗುತ್ತಿರುವ ಸಂದರ್ಭದಲ್ಲಿ ಈ ಚಿತ್ರದ ಟೈಟಲ್ ಬದಲಾವಣೆ ಮಾಡಲಾಗಿದೆ ಎಂದು ‘ಬಾಲಿವುಡ್ ಹಂಗಾಮಾ’ ವರದಿ ಮಾಡಿದೆ. ‘ದಿ ಗ್ರೇಟ್ ಇಂಡಿಯನ್ ರೆಸ್ಕ್ಯೂ’ (The Great Indian Rescue) ಎಂದು ಶೀರ್ಷಿಕೆ ಇಡಲಾಗಿದೆ ಎಂದು ಹೇಳಲಾಗುತ್ತಿದೆ. ಗಣಿಗಾರಿಕೆ ಕುರಿತು ಈ ಸಿನಿಮಾ ಮೂಡಿಬರುತ್ತಿದೆ.
ಅಕ್ಷಯ್ ಕುಮಾರ್ ಅವರು ಬಯೋಪಿಕ್ಗಳ ಬಗ್ಗೆ ಹೆಚ್ಚು ಆಸಕ್ತಿ ಹೊಂದಿದ್ದಾರೆ. ರಿಯಲ್ ಲೈಫ್ ಘಟನೆಗಳನ್ನು ಆಧರಿಸಿದ ಸಿನಿಮಾಗಳಲ್ಲಿ ಅವರು ಹೆಚ್ಚಾಗಿ ನಟಿಸುತ್ತಾರೆ. ಈಗ ‘ದಿ ಗ್ರೇಟ್ ಇಂಡಿಯನ್ ರೆಸ್ಕ್ಯೂ’ ಸಿನಿಮಾದಲ್ಲೂ ಅಂಥದ್ದೇ ಒಂದು ಕಥಾಹಂದರ ಇರಲಿದೆ. 1989ರಲ್ಲಿ ನಡೆದ ಒಂದು ಗಣಿ ದುರಂತದ ಬಗ್ಗೆ ಈ ಸಿನಿಮಾದಲ್ಲಿ ಹೇಳಲಾಗುವುದು. ಅದರಲ್ಲಿ ಅಕ್ಷಯ್ ಕುಮಾರ್ ಅವರು ಮೈನಿಂಗ್ ಇಂಜಿನಿಯರ್ ಜಸ್ವಂತ್ ಸಿಂಗ್ ಗಿಲ್ ಪಾತ್ರವನ್ನು ಮಾಡುತ್ತಿದ್ದಾರೆ. ಜಸ್ವಂತ್ ಸಿಂಗ್ ಗಿಲ್ ಅವರು 65 ಜನರ ಪ್ರಾಣ ಉಳಿಸಿದ ಕಥೆಯನ್ನು ಈ ಸಿನಿಮಾ ವಿವರಿಸಲಿದೆ.
ಇದನ್ನೂ ಓದಿ: ಅಕ್ಷಯ್ ಕುಮಾರ್ ಜತೆ ವಿದೇಶ ಸುತ್ತಿದ ಮೌನಿ ರಾಯ್
‘ಕ್ಯಾಪ್ಸೂಲ್ ಗಿಲ್’ ಎಂಬುದಕ್ಕಿಂತಲೂ ‘ದಿ ಗ್ರೇಟ್ ಇಂಡಿಯನ್ ರೆಸ್ಕ್ಯೂ’ ಎಂಬ ಶೀರ್ಷಿಕೆಯೇ ಈ ಸಿನಿಮಾಗೆ ಸೂಕ್ತ ಆಗಲಿದೆ ಎಂದು ಚಿತ್ರತಂಡ ಅಭಿಪ್ರಾಯ ಪಟ್ಟಿದೆ. ಹಾಗಾಗಿ ಶೀರ್ಷಿಕೆ ಬದಲಾಯಿಸಲು ನಿರ್ಧರಿಸಲಾಗಿದೆ ಎಂದು ವರದಿ ಆಗಿದೆ. ಆದರೆ ಚಿತ್ರತಂಡದಿಂದ ಈ ಬಗ್ಗೆ ಇನ್ನಷ್ಟೇ ಅಧಿಕೃತ ಮಾಹಿತಿ ಬಹಿರಂಗ ಆಗಬೇಕಿದೆ.
ಇದನ್ನೂ ಓದಿ: Akshay Kumar: ‘ಸೆಲ್ಫೀ’ ಹೀನಾಯ ಸೋಲು; ‘ಎಲ್ಲ ತಪ್ಪು ನನ್ನದೇ’ ಎಂದು ಹೊಣೆ ಹೊತ್ತುಕೊಂಡ ಅಕ್ಷಯ್ ಕುಮಾರ್
ಈ ಸಿನಿಮಾದ ಬಿಡುಗಡೆ ಬಗ್ಗೆ ಒಂದಷ್ಟು ಗೊಂದಲಗಳು ಇವೆ. ‘ಸೂರರೈ ಪೋಟ್ರು’ ಸಿನಿಮಾದ ಹಿಂದಿ ರಿಮೇಕ್ನಲ್ಲೂ ಅಕ್ಷಯ್ ಕುಮಾರ್ ಅವರು ನಟಿಸಿದ್ದಾರೆ. ಸೆಪ್ಟೆಂಬರ್ 1ರಂದು ಆ ಚಿತ್ರ ಬಿಡುಗಡೆ ಆಗಲಿದೆ. ಅದಕ್ಕೂ ಮುನ್ನವೇ ‘ದಿ ಗ್ರೇಟ್ ಇಂಡಿಯನ್ ರೆಸ್ಕ್ಯೂ’ ಬಿಡುಗಡೆ ಆಗಬಹುದು ಎಂದು ಹೇಳಲಾಗುತ್ತಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:20 pm, Thu, 11 May 23