ನಟ ಅಕ್ಷಯ್ ಕುಮಾರ್ (Akshay Kumar) ಅವರು ಚಿತ್ರರಂಗದಲ್ಲಿ ಅನೇಕ ದಾಖಲೆಗಳನ್ನು ಬರೆದಿದ್ದಾರೆ. ಹಲವು ವರ್ಷಗಳಿಂದ ಬಣ್ಣದ ಲೋಕದಲ್ಲಿ ಸಕ್ರಿಯರಾಗಿರುವ ಅವರು ಸಾಕಷ್ಟು ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ದೇಶಭಕ್ತಿ ಕಥಾಹಂದರದ ಸಿನಿಮಾಗಳನ್ನು ಮಾಡಿಯೂ ಸೈ ಎನಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೇ, ಹಲವು ಸಂದರ್ಭದಲ್ಲಿ ಅಕ್ಷಯ್ ಕುಮಾರ್ ರಿಯಲ್ ಹೀರೋ ಎನಿಸಿಕೊಂಡಿದ್ದುಂಟು. ಈಗ ತೆರಿಗೆ (Income Tax) ವಿಚಾರದಲ್ಲಿ ಅವರು ಸುದ್ದಿ ಆಗುತ್ತಿದ್ದಾರೆ. ಅತಿ ಹೆಚ್ಚು ಟ್ಯಾಕ್ಸ್ ಪಾವತಿಸುವ ಸೆಲೆಬ್ರಿಟಿ ಎಂಬ ಖ್ಯಾತಿಗೆ ಅವರು ಪಾತ್ರರಾಗಿದ್ದಾರೆ. ಇದಕ್ಕಾಗಿ ಆದಾಯ ತೆರಿಗೆ ಇಲಾಖೆಯಿಂದ (Income Tax Department) ಮೆಚ್ಚುಗೆ ಪತ್ರ ನೀಡಲಾಗಿದೆ. ಇದರ ಫೋಟೋ ವೈರಲ್ ಆಗುತ್ತಿದೆ. ಈ ಸುದ್ದಿ ಕೇಳಿ ಅಕ್ಷಯ್ ಕುಮಾರ್ ಅಭಿಮಾನಿಗಳು ಹಿರಿಹಿರಿ ಹಿಗ್ಗುತ್ತಿದ್ದಾರೆ.
ಬಾಲಿವುಡ್ನ ಟಾಪ್ ಹೀರೋಗಳ ಪೈಕಿ ಅಕ್ಷಯ್ ಕುಮಾರ್ ಕೂಡ ಪ್ರಮುಖರು. ಪ್ರತಿ ಸಿನಿಮಾಗೆ ಅವರು ಬಹುಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಸಿನಿಮಾ ಮಾತ್ರವಲ್ಲದೇ ಜಾಹೀರಾತುಗಳಲ್ಲಿ ನಟಿಸುವ ಮೂಲಕವೂ ಸಂಪಾದನೆ ಮಾಡುತ್ತಾರೆ. ಅನೇಕ ಪ್ರತಿಷ್ಠಿತ ಬ್ರ್ಯಾಂಡ್ಗಳಿಗೆ ಅವರು ರಾಯಭಾರಿ ಆಗಿದ್ದಾರೆ. ತಮ್ಮದೇ ನಿರ್ಮಾಣ ಸಂಸ್ಥೆ ಹೊಂದಿದ್ದಾರೆ. ದೇಶದ ಅನೇಕ ಕಡೆಗಳಲ್ಲಿ ಅಕ್ಷಯ್ ಕುಮಾರ್ ಆಸ್ತಿ ಹೊಂದಿದ್ದಾರೆ. ಹಲವು ಉದ್ಯಮದ ಮೇಲೆ ಅವರು ಹೂಡಿಕೆ ಮಾಡಿದ್ದಾರೆ.
ಭಾರತದ ಶ್ರೀಮಂತ ನಟರಲ್ಲಿ ಒಬ್ಬರಾಗಿರುವ ಅಕ್ಷಯ್ ಕುಮಾರ್ ಅವರು ತೆರಿಗೆ ಕಟ್ಟುವ ವಿಚಾರದಲ್ಲಿ ಹೆಚ್ಚು ಪ್ರಾಮಾಣಿಕತೆ ತೋರಿಸಿದ್ದಾರೆ. ಸದ್ಯ ಅವರು ಸಿನಿಮಾ ಶೂಟಿಂಗ್ ಸಲುವಾಗಿ ಇಂಗ್ಲೆಂಡ್ಗೆ ತೆರಳಿದ್ದಾರೆ. ಅಕ್ಷಯ್ ಕುಮಾರ್ ಪರವಾಗಿ ಅವರ ತಂಡದವರು ತೆರಿಗೆ ಇಲಾಖೆಯಿಂದ ಮೆಚ್ಚುಗೆ ಪತ್ರವನ್ನು ಸ್ವೀಕರಿಸಿದ್ದಾರೆ. ಅಕ್ಕಿ ಅಭಿಮಾನಿಗಳ ವಲಯದಲ್ಲಿ ಇದರ ಫೋಟೋ ವೈರಲ್ ಆಗುತ್ತಿದೆ.
ಅಂದಹಾಗೆ, ಅಕ್ಷಯ್ ಕುಮಾರ್ ಅವರು ಈ ರೀತಿ ಪ್ರಶಂಸೆಗೆ ಪಾತ್ರರಾಗಿರುವುದು ಇದೇ ಮೊದಲೇನಲ್ಲ. ತೆರಿಗೆ ಪಾವತಿಸುವಲ್ಲಿ ಕಳೆದ 5 ವರ್ಷಗಳಿಂದ ಅವರು ನಂಬರ್ ಒನ್ ಸ್ಥಾನವನ್ನು ಕಾಯ್ದುಕೊಂಡು ಬಂದಿದ್ದಾರೆ. ಸಿನಿಮಾ ವಿಚಾರಕ್ಕೆ ಬರುವುದಾದರೆ, ಅಕ್ಷಯ್ ಕುಮಾರ್ ಅವರಿಗೆ 2022ರ ವರ್ಷದ ಮೊದಲಾರ್ಧ ಅಷ್ಟೊಂದು ಆಶಾದಾಯಕವಾಗಿ ಇರಲಿಲ್ಲ. ‘ಬಚ್ಚನ್ ಪಾಂಡೆ’ ಹಾಗೂ ‘ಸಾಮ್ರಾಟ್ ಪೃಥ್ವಿರಾಜ್’ ಸಿನಿಮಾಗಳು ಸೋಲುಂಡಿವೆ. ಈಗ ಹೊಸ ಭರವಸೆಯೊಂದಿಗೆ ಆಗಸ್ಟ್ 11ರಂದು ಅವರ ‘ರಕ್ಷಾ ಬಂಧನ್’ ಸಿನಿಮಾ ತೆರೆ ಕಾಣುತ್ತಿದೆ.