ಈ ವಾರ ಬಾಲಿವುಡ್ ಬಾಕ್ಸ್ ಆಫೀಸ್ನಲ್ಲಿ ಸ್ಟಾರ್ ನಟರ ಮುಖಾಮುಖಿ ಆಗಿದೆ. ಎರಡು ಬಹುನಿರೀಕ್ಷಿತ ಸಿನಿಮಾಗಳು ಗಲ್ಲಾಪೆಟ್ಟಿಗೆಯಲ್ಲಿ ಪೈಪೋಟಿ ನಡೆಸುತ್ತಿವೆ. ಅಕ್ಷಯ್ ಕುಮಾರ್ (Akshay Kumar) ಅಭಿನಯದ ‘ರಕ್ಷಾ ಬಂಧನ್’ ಸಿನಿಮಾ ಹಾಗೂ ಆಮಿರ್ ಖಾನ್ (Aamir Khan) ನಟನೆಯ ‘ಲಾಲ್ ಸಿಂಗ್ ಚಡ್ಡಾ’ ಚಿತ್ರಗಳು ಆಗಸ್ಟ್ 11ರಂದು ಬಿಡುಗಡೆ ಆದವು. ಸ್ಟಾರ್ ಸಿನಿಮಾಗಳಿಗೆ ಮೊದಲ ದಿನ ಭರ್ಜರಿ ಓಪನಿಂಗ್ ಸಿಗಲಿ ಎಂಬ ಹಂಬಲ ಇರುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಬಾಲಿವುಡ್ ಸಿನಿಮಾಗಳು ಆ ನಿರೀಕ್ಷೆಯ ಮಟ್ಟ ತಲುಪಲು ವಿಫಲ ಆಗುತ್ತಿವೆ. ‘ರಕ್ಷಾ ಬಂಧನ್’ ಚಿತ್ರ ಕೇವಲ 8.20 ಕೋಟಿ ರೂಪಾಯಿ ಗಳಿಸಿದೆ. ಅದರ ಎದುರು ಬಿಡುಗಡೆ ಆಗಿರುವ ‘ಲಾಲ್ ಸಿಂಗ್ ಚಡ್ಡಾ’ ಚಿತ್ರ 12 ಕೋಟಿ ರೂಪಾಯಿ ಕಲೆಕ್ಷನ್ (Box Office Collection) ಮಾಡಿದೆ.
ಆಮಿರ್ ಖಾನ್ ಅವರ ಸಿನಿಮಾಗಳಿಗೆ ಬಹಿಷ್ಕಾರದ ಬಿಸಿ ತಟ್ಟುತ್ತಿದೆ. ‘ಲಾಲ್ ಸಿಂಗ್ ಚಡ್ಡಾ’ ಚಿತ್ರವನ್ನೂ ಬಹಿಷ್ಕಾರ ಮಾಡಬೇಕು ಎಂದು ಸೋಶಿಯಲ್ ಮೀಡಿಯಾದಲ್ಲಿ ಅಭಿಯಾನ ಮಾಡಲಾಗುತ್ತಿದೆ. ಹಾಗಿದ್ದರೂ ಕೂಡ ಪ್ರೇಕ್ಷಕರು ಈ ಚಿತ್ರವನ್ನು ಮೊದಲ ದಿನವೇ ನೋಡಿದ್ದಾರೆ. ಅಕ್ಷಯ್ ಕುಮಾರ್ ನಟನೆಯ ‘ರಕ್ಷಾ ಬಂಧನ್’ ಚಿತ್ರಕ್ಕಿಂತಲೂ ‘ಲಾಲ್ ಸಿಂಗ್ ಚಡ್ಡಾ’ ಹೆಚ್ಚು ಕಲೆಕ್ಷನ್ ಮಾಡಿರುವುದು ವಿಶೇಷ. ಮುಂದಿನ ದಿನಗಳಲ್ಲಿ ಈ ಎರಡು ಚಿತ್ರಗಳಲ್ಲಿ ಯಾವುದಕ್ಕೆ ಹೆಚ್ಚು ಆದಾಯ ಹರಿದುಬರಲಿದೆ ಎಂಬ ಕೌತುಕ ಮೂಡಿದೆ.
‘ಲಾಲ್ ಸಿಂಗ್ ಚಡ್ಡಾ’ ಸಿನಿಮಾಗೆ ಉತ್ತಮ ವಿಮರ್ಶೆ ಸಿಕ್ಕಿಲ್ಲ. ಹಾಗಾಗಿ ಅನೇಕ ಕಡೆಗಳಲ್ಲಿ ಶೋ ಸಂಖ್ಯೆ ಕಡಿಮೆ ಮಾಡಲಾಗುತ್ತಿದೆ ಎಂದು ಮಾಹಿತಿ ಕೇಳಿಬಂದಿದೆ. ಇದರ ಪರಿಣಾಮವಾಗಿ ವೀಕೆಂಡ್ನಲ್ಲಿ ಈ ಚಿತ್ರದ ಕಲೆಕ್ಷನ್ ಗಣನೀಯವಾಗಿ ಕುಸಿದರೂ ಅಚ್ಚರಿ ಏನಿಲ್ಲ. ‘ರಕ್ಷಾ ಬಂಧನ್’ ಚಿತ್ರಕ್ಕೆ ಫ್ಯಾಮಿಲಿ ಪ್ರೇಕ್ಷಕರನ್ನು ಸೆಳೆಯುವ ಗುಣ ಇದೆ. ಹಾಗಾಗಿ ಈ ಚಿತ್ರ ನಿಧಾನವಾಗಿ ಉತ್ತಮ ಕಲೆಕ್ಷನ್ ಮಾಡಲಿದೆ ಎಂದು ಅಂದಾಜಿಸಲಾಗುತ್ತಿದೆ.
‘ಲಾಲ್ ಸಿಂಗ್ ಚಡ್ಡಾ’ ಚಿತ್ರದಲ್ಲಿ ಆಮಿರ್ ಖಾನ್ಗೆ ಜೋಡಿಯಾಗಿ ಕರೀನಾ ಕಪೂರ್ ಖಾನ್ ನಟಿಸಿದ್ದಾರೆ. ಟಾಲಿವುಡ್ ನಟ ನಾಗ ಚೈತನ್ಯ ಅವರು ಒಂದು ಅತಿಥಿ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಇದು ಹಾಲಿವುಡ್ನ ‘ಫಾರೆಸ್ಟ್ ಗಂಪ್’ ಚಿತ್ರದ ಹಿಂದಿ ರಿಮೇಕ್. ಅದ್ವೈತ್ ಚಂದನ್ ಅವರು ನಿರ್ದೇಶನ ಮಾಡಿದ್ದಾರೆ.
– Taran Adarsh (@taran_adarsh) 12 Aug 2022
‘ಬಚ್ಚನ್ ಪಾಂಡೆ’, ‘ಸಾಮ್ರಾಟ್ ಪೃಥ್ವಿರಾಜ್’ ಚಿತ್ರಗಳ ಸೋಲಿನಿಂದ ಕಂಗೆಟ್ಟಿರುವ ಅಕ್ಷಯ್ ಕುಮಾರ್ ಅವರು ‘ರಕ್ಷಾ ಬಂಧನ್’ ಚಿತ್ರದ ಮೂಲಕ ಗೆಲ್ಲಬೇಕು ಎಂಬ ಆಶಯ ಅವರ ಅಭಿಮಾನಿಗಳದ್ದು. ನಿರೀಕ್ಷೆಯಂತೆ ವೀಕೆಂಡ್ನಲ್ಲಿ ಈ ಚಿತ್ರದ ಕಲೆಕ್ಷನ್ ಹೆಚ್ಚಿದರೆ ಅಕ್ಷಯ್ ಕುಮಾರ್ಗೆ ಯಶಸ್ಸು ಸಿಗುತ್ತದೆ. ಈ ಚಿತ್ರದಲ್ಲಿ ಭೂಮಿ ಪೆಡ್ನೇಕರ್ ಅವರು ನಾಯಕಿಯಾಗಿ ನಟಿಸಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:27 pm, Fri, 12 August 22