ಖ್ಯಾತ ನಟ ಅಕ್ಷಯ್ ಕುಮಾರ್ (Akshay Kumar) ಅವರಿಗೆ ಈಗ 54 ವರ್ಷ ವಯಸ್ಸು. ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಅವರು ಬ್ಯುಸಿ ಆಗಿದ್ದಾರೆ. ಫಿಟ್ನೆಸ್ ಬಗ್ಗೆ ಅವರಿಗೆ ಹೆಚ್ಚು ಕಾಳಜಿ ಇದೆ. ಪ್ರತಿ ದಿನ ಮುಂಜಾನೆ ಅವರು ಜಿಮ್ನಲ್ಲಿ ವರ್ಕೌಟ್ ಮಾಡುತ್ತಾರೆ. ಶಿಸ್ತಿನ ಜೀವನಕ್ಕೆ ಅವರು ಹೆಸರಾಗಿದ್ದಾರೆ. ಇತ್ತೀಚೆಗೆ ಅವರು ಮುಂಬೈ ಪೊಲೀಸರ ಜೊತೆ ಸೇರಿ ಒಂದು ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ಬೆಳ್ಳಂಬೆಳಗ್ಗೆ ರನ್ನಿಂಗ್ ಮಾಡಿದರು. ಸೈಕ್ಲಿಂಗ್ ಮಾಡಿಯೂ ಗಮನ ಸೆಳೆದರು. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಕ್ಷಯ್ ಕುಮಾರ್ ಅವರ ಫಿಟ್ನೆಸ್ (Fitness) ಕಂಡು ಅನೇಕ ಅಭಿಮಾನಿಗಳು ಭೇಷ್ ಎಂದಿದ್ದಾರೆ. ಅದರ ಜೊತೆಗೆ ಒಂದಷ್ಟು ಮಂದಿ ಟ್ರೋಲ್ ಮಾಡಿದ್ದಾರೆ ಕೂಡ. ಹೌದು, ವಿಮಲ್ ಜಾಹೀರಾತಿನಲ್ಲಿ ಕಾಣಿಸಿಕೊಂಡ ಕಾರಣಕ್ಕಾಗಿ ಅಕ್ಷಯ್ ಕುಮಾರ್ ಅವರ ಬಗ್ಗೆ ವ್ಯಂಗ್ಯ ಮಾಡಲಾಗಿದೆ. ‘ಗುಟ್ಕಾ (Gutka) ತಿಂದರೂ ಇಷ್ಟೊಂದು ಫಿಟ್ ಆಗಿದ್ದಾರೆ’ ಎಂಬ ಕಮೆಂಟ್ಗಳು ಬಂದಿವೆ.
ಜಾಹೀರಾತುಗಳನ್ನು ಆಯ್ಕೆ ಮಾಡಿಕೊಳ್ಳುವಾಗ ಸೆಲೆಬ್ರಿಟಿಗಳು ಹೆಚ್ಚು ಎಚ್ಚರಿಕೆ ವಹಿಸಬೇಕು. ಈಗಾಗಲೇ ಶಾರುಖ್ ಖಾನ್ ಮತ್ತು ಅಜಯ್ ದೇವಗನ್ ಅವರು ವಿಮಲ್ ಜಾಹೀರಾತಿನಲ್ಲಿ ನಟಿಸಿ ಟೀಕೆಗೆ ಗುರಿ ಆಗಿದ್ದಾರೆ. ಫಿಟ್ನೆಸ್ಗೆ ಹೆಚ್ಚು ಒತ್ತು ನೀಡುವಂತಹ ಅಕ್ಷಯ್ ಕುಮಾರ್ ಅವರು ಕೂಡ ಈ ಜಾಹೀರಾತಿನಲ್ಲಿ ನಟಿಸಿದ್ದು ಅನೇಕರಿಗೆ ಸಹಿಸಲು ಸಾಧ್ಯವಾಗಿಲ್ಲ. ಹಾಗಾಗಿ ಪ್ರತಿ ಬಾರಿಯೂ ಅವರನ್ನು ಟ್ರೋಲ್ ಮಾಡಲಾಗುತ್ತಿದೆ.
ಇನ್ಮುಂದೆ ಇಂಥ ಜಾಹೀರಾತುಗಳನ್ನು ಒಪ್ಪಿಕೊಳ್ಳುವುದಿಲ್ಲ ಎಂದು ಅಕ್ಷಯ್ ಕುಮಾರ್ ಈಗಾಗಲೇ ಭರವಸೆ ನೀಡಿದ್ದಾರೆ. ಹಾಗಿದ್ದರೂ ಕೂಡ ಅವರಿಗೆ ಟ್ರೋಲ್ ಕಾಟ ತಪ್ಪುತ್ತಿಲ್ಲ. ಇನ್ನು ಸಿನಿಮಾ ವಿಚಾರಕ್ಕೆ ಬರುವುದಾದರೆ ಅಕ್ಷಯ್ ಕುಮಾರ್ ಅವರಿಗೆ ಇತ್ತೀಚಿನ ದಿನಗಳಲ್ಲಿ ನಿರೀಕ್ಷಿತ ಮಟ್ಟದ ಗೆಲುವು ಸಿಗುತ್ತಿಲ್ಲ. ಅವರು ನಟಿಸಿದ ‘ಸಾಮ್ರಾಟ್ ಪೃಥ್ವಿರಾಜ್’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಮೋಡಿ ಮಾಡಿಲ್ಲ. ಅದಕ್ಕೂ ಮುನ್ನ ತೆರೆಕಂಡಿದ್ದ ‘ಬಚ್ಚನ್ ಪಾಂಡೆ’ ಸಿನಿಮಾ ಕೂಡ ಹೇಳಿಕೊಳ್ಳುವಷ್ಟು ಕಲೆಕ್ಷನ್ ಮಾಡಿಲ್ಲ.
ಇದನ್ನೂ ಓದಿ: ಹಿಂಗೂ ಕಟ್ಟಿ ಹಾಕ್ತಾರಾ? ಸಿಲ್ಲಿ ಕಾರಣಕ್ಕೆ ಸಖತ್ ಟ್ರೋಲ್ ಆದ ಅಕ್ಷಯ್ ಕುಮಾರ್ ಚಿತ್ರ ‘ಸಾಮ್ರಾಟ್ ಪೃಥ್ವಿರಾಜ್’
ಸಾಲು ಸಾಲು ಸಿನಿಮಾಗಳಲ್ಲಿ ಅಕ್ಷಯ್ ಕುಮಾರ್ ನಟಿಸುತ್ತಿದ್ದಾರೆ. ಆಗಸ್ಟ್ 11ರಂದು ‘ರಕ್ಷಾ ಬಂಧನ್’ ಚಿತ್ರ ತೆರೆ ಕಾಣಲಿದೆ. ಆ ಬಳಿಕ ‘ರಾಮ್ ಸೇತು’ ಸಿನಿಮಾ ಬಿಡುಗಡೆ ಆಗಲಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:08 am, Mon, 20 June 22