ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ (Sandeep Reddy Vanga) ಅವರು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಖ್ಯಾತಿ ಗಳಿಸಿದ್ದಾರೆ. ‘ಕಬೀರ್ ಸಿಂಗ್’ ಹಾಗೂ ‘ಅನಿಮಲ್’ (Animal) ಸಿನಿಮಾಗಳ ಯಶಸ್ಸಿನ ಬಳಿಕ ಅವರಿಗೆ ಇದ್ದ ಬೇಡಿಕೆ ಹೆಚ್ಚಾಗಿದೆ. ಅವರನ್ನು ನಂಬಿಕೊಂಡು ನೂರಾರು ಕೋಟಿ ರೂಪಾಯಿ ಸುರಿಯಲು ನಿರ್ಮಾಪಕರು ಸಿದ್ಧವಾಗಿದ್ದಾರೆ. ಪ್ರಭಾಸ್ (Prabhas) ನಟನೆಯ ಹೊಸ ಸಿನಿಮಾಗೆ ಸಂದೀಪ್ ರೆಡ್ಡಿ ವಂಗಾ ನಿರ್ದೇಶನ ಮಾಡಲು ಸಕಲ ತಯಾರಿ ಮಾಡಿಕೊಂಡಿದ್ದಾರೆ. ಈ ನಡುವೆ ಅವರು ನಿರ್ಮಾಣದಲ್ಲೂ ಆಸಕ್ತಿ ತೋರಿಸಿದ್ದಾರೆ. ವಿಶೇಷ ಏನೆಂದರೆ, ಕಡಿಮೆ ಬಜೆಟ್ನ ಸಿನಿಮಾಗಳನ್ನು ಸಂದೀಪ್ ರೆಡ್ಡಿ ವಂಗಾ ನಿರ್ಮಾಣ ಮಾಡಲಿದ್ದಾರೆ.
ಸಂದೀಪ್ ರೆಡ್ಡಿ ವಂಗಾ ಅವರು ನಿರ್ಮಾಣದಲ್ಲೂ ಆಸಕ್ತಿ ಹೊಂದಿದ್ದಾರೆ. ಹೊಸ ಪ್ರತಿಭೆಗಳಿಗೆ ಅವಕಾಶ ನೀಡಬೇಕು ಎಂಬ ಕಾರಣಕ್ಕೆ ಅವರು ಕಡಿಮೆ ಬಜೆಟ್ನ ಸಿನಿಮಾಗಳನ್ನು ನಿರ್ಮಾಣ ಮಾಡಲಿದ್ದಾರೆ. ಅವರ ತಂಡದವರು ಈಗ ಸ್ಕ್ರಿಪ್ಟ್ ಆಯ್ಕೆಯಲ್ಲಿ ನಿರತರಾಗಿದ್ದಾರೆ. ಯಾವ ಕಥೆಯನ್ನು ಸಿನಿಮಾ ಮಾಡಬೇಕು ಎಂಬ ಅಂತಿಮ ನಿರ್ಧಾರವನ್ನು ಸಂದೀಪ್ ರೆಡ್ಡಿ ವಂಗಾ ಅವರು ತೆಗೆದುಕೊಳ್ಳಲಿದ್ದಾರೆ.
ಇದನ್ನೂ ಓದಿ: ಶಾರುಖ್ ಖಾನ್ ಜತೆ ಕಾಮಿಡಿ ಸಿನಿಮಾ ಮಾಡುವ ಹಂಬಲದಲ್ಲಿ ‘ಅನಿಮಲ್’ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ
ಇಷ್ಟು ದಿನಗಳ ಕಾಲ ‘ಅನಿಮಲ್’ ಸಿನಿಮಾದ ಸಲುವಾಗಿ ಸಂದೀಪ್ ರೆಡ್ಡಿ ವಂಗಾ ಅವರು ಮುಂಬೈನಲ್ಲಿ ವಾಸವಾಗಿದ್ದರು. ಈಗ ಅವರು ಹೈದರಾಬಾದ್ಗೆ ವಾಪಸ್ ಬಂದಿದ್ದಾರೆ. ಹೈದರಾಬಾದ್ನಲ್ಲಿ ಅವರು ಹೊಸ ಆಫೀಸ್ ತೆರೆದಿದ್ದಾರೆ. ಮುಂದಿನ ಎರಡು ವರ್ಷಗಳ ಕಾಲ ಅವರು ಈ ಹೊಸ ಆಫೀಸ್ನಲ್ಲೇ ಕೆಲಸ ಮಾಡಲಿದ್ದಾರೆ. ತಮ್ಮ ನಿರ್ಮಾಣದಲ್ಲಿ ಸಂದೀಪ್ ರೆಡ್ಡಿ ವಂಗ ಅವರು ಯಾವ ಹೊಸ ಪ್ರತಿಭೆಗಳಿಗೆ ಅವಕಾಶ ನೀಡಲಿದ್ದಾರೆ ಎಂಬುದನ್ನು ಕಾದು ನೋಡಬೇಕು.
ಇದನ್ನೂ ಓದಿ: ಚಿರಂಜೀವಿ ಭೇಟಿ ಮಾಡಿದ ‘ಅನಿಮಲ್’ ನಿರ್ದೇಶಕ ಸಂದೀಪ್ ರೆಡ್ಡಿ ವಂಗ; ಫೋಟೋ ವೈರಲ್
ಸಂದೀಪ್ ರೆಡ್ಡಿ ವಂಗಾ ಅವರು ಈವರೆಗೂ ನಿರ್ದೇಶಿಸಿರುವುದು ಮೂರು ಸಿನಿಮಾ (ಅರ್ಜುನ್ ರೆಡ್ಡಿ, ಕಬೀರ್ ಸಿಂಗ್, ಅನಿಮಲ್) ಮಾತ್ರ. ಈ ಎಲ್ಲ ಸಿನಿಮಾಗಳು ಭಾರಿ ಟೀಕೆಗೆ ಒಳಗಾಗಿದ್ದವು. ಮಹಿಳಾ ವಿರೋಧಿ ಸಂಭಾಷಣೆ ಮತ್ತು ದೃಶ್ಯಗಳು ಇವೆ ಎಂಬ ಕಾರಣಕ್ಕೆ ಈ ಚಿತ್ರಗಳನ್ನು ಅನೇಕರು ಟೀಕಿಸಿದ್ದುಂಟು. ಆದರೆ ಅಂಥ ಟೀಕೆಗಳಿಗೆ ಸಂದೀಪ್ ರೆಡ್ಡಿ ವಂಗಾ ಅವರು ತಲೆ ಕೆಡಿಸಿಕೊಂಡಿಲ್ಲ. ಅವರ ಮುಂದಿನ ‘ಸ್ಪಿರಿಟ್’ ಸಿನಿಮಾ ಹೇಗಿರಲಿದೆ ಎಂಬ ಕೌತುಕ ಎಲ್ಲರಲ್ಲೂ ಇದೆ. ಇತ್ತೀಚೆಗೆ ಸಂದೀಪ್ ರೆಡ್ಡಿ ವಂಗಾ ಅವರು ತಿರುಪತಿ ವೆಂಕಟೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಮುಡಿಕೊಟ್ಟಿದ್ದರು. ಆಗ ‘ಸ್ಪಿರಿಟ್’ ಬಗ್ಗೆ ಮಾತನಾಡಿದ್ದರು. ಈ ಚಿತ್ರದ ಕೆಲಸಗಳು ಆರಂಭ ಆಗಿವೆ ಎಂದು ಅವರು ಹೇಳಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.