‘ಮಂಗಳ ಗ್ರಹದಿಂದ ಬಂದಂತೆ ವಿಚಿತ್ರವಾಗಿದ್ದಾರೆ’; ರಾಹುಲ್ ಗಾಂಧಿಗೆ ಕಂಗನಾ ಟೀಕೆ
‘ಕಾಂಗ್ರೆಸ್ ಯಾವಾಗಲೂ ನನ್ನ ಪಾಲಿಗೆ ಕೆಟ್ಟ ಪಕ್ಷ ಆಗಿತ್ತು. ಈ ಪಕ್ಷದಲ್ಲಿ ಇರುವ ನೆಪೋಟಿಸಂ ನನಗೆ ಬಹಳ ಸಮಸ್ಯೆ ಎನಿಸುತ್ತಿತ್ತು’ ಎಂದು ಕಂಗನಾ ರಣಾವತ್ ಹೇಳಿದ್ದಾರೆ. ಅಲ್ಲದೇ ಕಾಂಗ್ರೆಸ್ ಪಕ್ಷದ ಮುಖಂಡ ರಾಹುಲ್ ಗಾಂಧಿ ಅವರನ್ನು ನೆಪೋ ಕಿಡ್ ಎಂದು ಕಂಗನಾ ರಣಾವತ್ ಕರೆದಿದ್ದಾರೆ. ಅದಕ್ಕೆ ಕಾರಣ ಏನು ಎಂಬುದನ್ನು ಕೂಡ ಅವರು ವಿವರಿಸಿದ್ದಾರೆ.
ನಟಿ ಕಂಗನಾ ರಣಾವತ್ (Kangana Ranaut) ಅವರು ಅಧಿಕೃತವಾಗಿ ರಾಜಕೀಯಕ್ಕೆ ಸೇರ್ಪಡೆ ಆದ ಬಳಿಕ ಕಾಂಗ್ರೆಸ್ ಪಕ್ಷದ ವಿರುದ್ಧ ಗುಡುಗಲು ಆರಂಭಿಸಿದ್ದಾರೆ. ಇಷ್ಟು ದಿನ ಬಾಲಿವುಡ್ ಮಂದಿಯನ್ನು ಟೀಕಿಸುತ್ತಿದ್ದ ಅವರು ಈಗ ಕಾಂಗ್ರೆಸ್ (Congress) ಪಕ್ಷದವರನ್ನು ಟೀಕಿಸುತ್ತಿದ್ದಾರೆ. ಆದರೆ ಕಾರಣ ಮಾತ್ರ ಒಂದೇ. ಅದು ನೆಪೋಟಿಸಂ! ಹೌದು, ಕಂಗನಾ ರಣಾವತ್ ಅವರಿಗೆ ನೆಪೋಟಿಸಂ ಎಂದರೆ ಆಗುವುದಿಲ್ಲ. ಅವಕಾಶಗಳು ಕೇವಲ ವಂಶ ಪಾರಂಪರ್ಯವಾಗಿ ಸಿಗುವುದನ್ನು ಅವರು ವಿರೋಧಿಸುತ್ತಾ ಬಂದಿದ್ದಾರೆ. ಈಗ ಅವರು ರಾಹುಲ್ ಗಾಂಧಿ (Rahul Gandhi) ಬಗ್ಗೆ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ರಾಹುಲ್ ಗಾಂಧಿಯನ್ನು ನೆಪೋಟಿಸಂ ಮಗು ಎಂದು ಕಂಗನಾ ಕರೆದಿದ್ದಾರೆ.
ಟೈಮ್ಸ್ ನೌ ನಡೆಸಿದ ಸಂದರ್ಶನದಲ್ಲಿ ಕಂಗನಾ ರಣಾವತ್ ಅವರು ಈ ವಿಚಾರ ಮಾತನಾಡಿದ್ದಾರೆ. ‘ನನ್ನ ಪಾಲಿಗೆ ಕಾಂಗ್ರೆಸ್ ಯಾವಾಗಲೂ ಕೆಟ್ಟ ಪಕ್ಷ ಆಗಿತ್ತು. ಆ ಪಕ್ಷದಲ್ಲಿ ಇರುವ ನೆಪೋಟಿಸಂ ನನಗೆ ಬಹಳ ತೊಂದರೆ ಎನಿಸುತ್ತಿತ್ತು. ಯಾಕೆಂದರೆ ಚಿತ್ರರಂಗದಲ್ಲಿ ನೆಪೋಟಿಸಂ ಕಾರಣದಿಂದಲೇ ನಾನು ಟಾರ್ಗೆಟ್ ಆಗಿದ್ದೆ. ಅದನ್ನು ನಾನು ನೇರವಾಗಿಯೇ ವಿರೋಧಿಸಿದೆ. ಅದು ನನ್ನನ್ನು ಶೋಷಣೆ ಮಾಡುತ್ತಿತ್ತು. ನೆಪೋಟಿಸಂ, ಗುಂಪುಗಾರಿಕೆ, ವಂಶ ಪಾರಂಪರ್ಯ ರಾಜಕೀಯ. ಈ ಕಾರಣದಿಂದಲೇ ನಾನು ಕಾಂಗ್ರೆಸ್ ಪಕ್ಷವನ್ನು ಇಷ್ಟಪಡುವುದಿಲ್ಲ’ ಎಂದು ಕಂಗನಾ ರಣಾವತ್ ಹೇಳಿದ್ದಾರೆ.
ಇದನ್ನೂ ಓದಿ: ನಾನೊಬ್ಬಳೇ ಅಲ್ಲ, ಶಾರುಖ್ ಖಾನ್ ಕೂಡ 10 ಫ್ಲಾಪ್ ಕೊಟ್ಟಿದ್ದರು ಎಂದ ಕಂಗನಾ
ಸೋನಿಯಾ ಗಾಂಧಿ ಅವರ ಮಕ್ಕಳಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರ ಬಗ್ಗೆ ಒಂದೇ ಪದದಲ್ಲಿ ವಿವರಿಸಿ ಎಂದು ಕೇಳಿದ್ದಕ್ಕೆ, ‘ನೆಪೋಟಿಸಂ ಮಕ್ಕಳು’ ಎಂದು ಕಂಗನಾ ರಣಾವತ್ ಹೇಳಿದ್ದಾರೆ. ‘ಅವರು ಮಂಗಳ ಗ್ರಹದಿಂದ ಬಂದಿದ್ದಾರೆ ಎಂಬಷ್ಟು ವಿಚಿತ್ರವಾಗಿದ್ದಾರೆ’ ಎಂದು ಅವರು ಟೀಕೆ ಮಾಡಿದ್ದಾರೆ. ಇದಕ್ಕೆ ರಾಹುಲ್ ಗಾಂಧಿ ಅಥವಾ ಪ್ರಿಯಾಂಕಾ ಗಾಂಧಿ ಪ್ರತಿಕ್ರಿಯೆ ನೀಡುತ್ತಾರಾ ಎಂಬುದನ್ನು ಕಾದುನೋಡಬೇಕು.
ಇದನ್ನೂ ಓದಿ: ಊರ್ಮಿಳಾಗೆ ಟಿಕೆಟ್ ದೊರೆತಾಗ ಏನು ಹೇಳಿದ್ದರು ಕಂಗನಾ: ವೈರಲ್ ಆಗುತ್ತಿದೆ ಹಳೆ ವಿಡಿಯೋ
ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದಿಂದ ಕಂಗನಾ ರಣಾವತ್ ಅವರಿಗೆ ಬಿಜೆಪಿ ಟಿಕೆಟ್ ಸಿಕ್ಕಿದೆ. ಮೊದಲಿನಿಂದಲೂ ಈ ಪಕ್ಷದ ಜೊತೆ ಅವರು ಗುರುತಿಸಿಕೊಂಡಿದ್ದರು. ಅನೇಕ ಬಾರಿ ಯೋಗಿ ಆದಿತ್ಯನಾಥ್ ಅವರನ್ನು ಕಂಗನಾ ಭೇಟಿ ಆಗಿದ್ದರು. ಮೋದಿ ನೇತೃತ್ವದ ಕೇಂದ್ರ ಸರ್ಕಾರದ ನಡೆಯನ್ನು ಅವರು ಯಾವಾಗಲೂ ಬೆಂಬಲಿಸುತ್ತಲೇ ಬಂದಿದ್ದರು. ಈಗ ಅವರು ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆ ಆಗಿದ್ದಾರೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಅವರು ಅದೃಷ್ಟ ಪರೀಕ್ಷೆ ಮಾಡಿಕೊಳ್ಳಲಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.