Ranbir Kapoor: ‘ರಣಬೀರ್​ ಕಪೂರ್​ ಅವರೇ ಭಾರತದ ಬೆಸ್ಟ್​ ನಟ’: ‘ಅನಿಮಲ್​’ ಹೀರೋಗೆ ಮಹೇಶ್​ ಬಾಬು ಮೆಚ್ಚುಗೆ

ಹೈದರಾಬಾದ್​ನಲ್ಲಿ ಇತ್ತೀಚೆಗೆ ನಡೆದ ‘ಅನಿಮಲ್​’ ಸಿನಿಮಾದ ಅದ್ದೂರಿ ಪ್ರೀ-ರಿಲೀಸ್​ ಇವೆಂಟ್​ನಲ್ಲಿ ಲಕ್ಷಾಂತರ ಜನರು ಭಾಗಿ ಆಗಿದ್ದರು. ಟಾಲಿವುಡ್​ನ ಫೇಮಸ್​ ಸೆಲೆಬ್ರಿಟಿಗಳಾದ ಎಸ್​.ಎಸ್​. ರಾಜಮೌಳಿ, ಮಹೇಶ್​ ಬಾಬು ಮುಂತಾದವರು ಬಂದು ಚಿತ್ರತಂಡದ ಬೆನ್ನು ತಟ್ಟಿದರು. ಈ ಸಂದರ್ಭದ ವಿಡಿಯೋಗಳು ವೈರಲ್​ ಆಗಿವೆ.

Ranbir Kapoor: ‘ರಣಬೀರ್​ ಕಪೂರ್​ ಅವರೇ ಭಾರತದ ಬೆಸ್ಟ್​ ನಟ’: ‘ಅನಿಮಲ್​’ ಹೀರೋಗೆ ಮಹೇಶ್​ ಬಾಬು ಮೆಚ್ಚುಗೆ
ಮಹೇಶ್​ ಬಾಬು, ರಣಬೀರ್ ಕಪೂರ್​

Updated on: Nov 28, 2023 | 11:53 AM

ನಟ ರಣಬೀರ್​ ಕಪೂರ್​ ಅವರು ಅನಿಮಲ್​’ (Animal Movie) ಸಿನಿಮಾದ ಪ್ರಚಾರ ಕಾರ್ಯದಲ್ಲಿ ಬ್ಯುಸಿ ಆಗಿದ್ದಾರೆ. ಅವರಿಗೆ ಮಹೇಶ್​ ಬಾಬು ಕಡೆಯಿಂದ ಭರ್ಜರಿ ಮೆಚ್ಚುಗೆ ಸಿಕ್ಕಿದೆ. ‘ಇವರು ಭಾರತದ ಅತ್ಯುತ್ತಮ ನಟ’ ಎಂದು ಮಹೇಶ್​ ಬಾಬು (Mahesh Babu) ಹೊಗಳಿದ್ದಾರೆ. ಈ ಸಂದರ್ಭದ ವಿಡಿಯೋ ವೈರಲ್​ ಆಗಿದೆ. ಈ ಪರಿ ಪ್ರಶಂಸೆ ಸ್ವೀಕರಿಸಿದ ರಣಬೀರ್​ ಕಪೂರ್​ (Ranbir Kapoor) ಅವರು ನಗು ಚೆಲ್ಲಿದ್ದಾರೆ. ಸೌತ್​ ಸೂಪರ್​ ಸ್ಟಾರ್​ ನಟನಿಂದ ರಣಬೀರ್​ ಕಪೂರ್​ಗೆ ಇಂಥ ಹೊಗಳಿಕೆ ಸಿಕ್ಕಿರುವುದಕ್ಕೆ ಬಾಲಿವುಡ್​ ಸಿನಿಪ್ರಿಯರು ಖುಷಿ ಆಗಿದ್ದಾರೆ. ಡಿಸೆಂಬರ್​ 1ರಂದು ‘ಅನಿಮಲ್​’ ಸಿನಿಮಾ ಬಿಡುಗಡೆ ಆಗಲಿದೆ.

ನಿರ್ದೇಶಕ ಸಂದೀಪ್​ ರೆಡ್ಡಿ ವಂಗಾ ಅವರು ‘ಅನಿಮಲ್​’ ಸಿನಿಮಾಗೆ ಆ್ಯಕ್ಷನ್​-ಕಟ್​ ಹೇಳಿದ್ದಾರೆ. ಅವರು ಈ ಹಿಂದೆ ‘ಅರ್ಜುನ್​ ರೆಡ್ಡಿ’, ‘ಕಬೀರ್​ ಸಿಂಗ್​’ ಸಿನಿಮಾ ಮೂಲಕ ಭರ್ಜರಿ ಗೆಲುವು ಕಂಡಿದ್ದರು. ಈಗ ‘ಅನಿಮಲ್​’ ಚಿತ್ರದ ಮೂಲಕ ಮತ್ತೊಂದು ಯಶಸ್ಸು ಪಡೆಯುವ ನಿರೀಕ್ಷೆಯಲ್ಲಿದ್ದಾರೆ. ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಈ ಸಿನಿಮಾ ಬಿಡುಗಡೆ ಆಗಲಿದೆ. ಅದಕ್ಕಾಗಿ ದೇಶಾದ್ಯಂತ ಪ್ರಚಾರ ನೀಡಲಾಗುತ್ತಿದೆ. ಇತ್ತೀಚೆಗೆ ಹೈದರಾಬಾದ್​ನಲ್ಲಿ ಈ ಸಿನಿಮಾದ ಪ್ರೀ-ರಿಲೀಸ್​ ಕಾರ್ಯಕ್ರಮ ನಡೆಯಿತು.

ಇದನ್ನೂ ಓದಿ: ‘ಅನಿಮಲ್​’ ಸಿನಿಮಾದಲ್ಲಿ ನಟಿಸಲು ರಶ್ಮಿಕಾ ಮಂದಣ್ಣ ಪಡೆದ ಸಂಭಾವನೆ ಎಷ್ಟು?

ಸಂದೀಪ್​ ರೆಡ್ಡಿ ವಂಗಾ ಅವರು ಮೂಲತಃ ತೆಲುಗು ಚಿತ್ರರಂಗದವರು. ‘ಅನಿಮಲ್​’ ಸಿನಿಮಾದ ನಾಯಕಿ ರಶ್ಮಿಕಾ ಮಂದಣ್ಣ ಕೂಡ ಟಾಲಿವುಡ್​ನಲ್ಲಿ ಭಾರಿ ಜನಪ್ರಿಯತೆ ಪಡೆದಿದ್ದಾರೆ. ಹಾಗಾಗಿ ಹೈದರಾಬಾದ್​ನಲ್ಲಿ ಈ ಸಿನಿಮಾಗೆ ಹೆಚ್ಚು ಪ್ರಚಾರ ನೀಡಲಾಗುತ್ತಿದೆ. ಸಿನಿಮಾದ ಪ್ರೀ-ರಿಲೀಸ್​ ಕಾರ್ಯಕ್ರಮಕ್ಕೆ ಮಹೇಶ್​ ಬಾಬು, ಎಸ್​.ಎಸ್​. ರಾಜಮೌಳಿ ಮುಂತಾದ ಸೆಲೆಬ್ರಿಟಿಗಳು ಆಗಮಿಸಿದ್ದರು. ಈ ವೇಳೆ ರಣಬೀರ್​ ಕಪೂರ್​ ಅವರ ಅಭಿನಯದ ಬಗ್ಗೆ ಮಹೇಶ್​ ಬಾಬು ಮೆಚ್ಚುಗೆಯ ಮಾತುಗಳನ್ನು ಆಡಿದರು.

‘ಈ ಮೊದಲು ನಾನು ರಣಬೀರ್​ ಕಪೂರ್​ ಅವರನ್ನು ಭೇಟಿ ಆದಾಗ ಕೂಡ ಈ ಮಾತನ್ನು ಹೇಳಿದ್ದೆ. ಆದರೆ ಅದನ್ನು ಅವರು ಗಂಭೀರವಾಗಿ ಪರಿಗಣಿಸಿರಲಿಲ್ಲ. ಇಂದು ಈ ವೇದಿಕೆಯಲ್ಲಿ ಮತ್ತೆ ಹೇಳುತ್ತಿದ್ದೇನೆ. ನಾನು ರಣಬೀರ್​ ಕಪೂರ್ ಅವರ ದೊಡ್ಡ ಅಭಿಮಾನಿ. ನನ್ನ ಪ್ರಕಾರ, ಅವರೇ ಭಾರತದ ಬೆಸ್ಟ್​ ಆ್ಯಕ್ಟರ್​’ ಎಂದು ಮಹೇಶ್​ ಬಾಬು ಹೇಳಿದ್ದಾರೆ. ಈ ಮಾತು ಕೇಳಿ ಅಭಿಮಾನಿಗಳೆಲ್ಲರೂ ಜೈಕಾರ ಹಾಕಿದ್ದಾರೆ. ‘ಅನಿಮಲ್​’ ಸಿನಿಮಾದಲ್ಲಿ ಬಾಬಿ ಡಿಯೋಲ್​, ಅನಿಲ್​ ಕಪೂರ್​ ಮುಂತಾದವರು ಕೂಡ ನಟಿಸಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us