ಬಾಲಿವುಡ್ ನಿರ್ದೇಶಕನಿಗೆ ಹಾಲಿವುಡ್ ಅವಕಾಶ, ಕಾರಣವಾಗಿದ್ದು ದಕ್ಷಿಣ ಭಾರತದ ಸಿನಿಮಾ

|

Updated on: Jan 15, 2025 | 5:56 PM

Hollywood Movie News: ಇದೀಗ ಬಾಲಿವುಡ್​ನ ಜನಪ್ರಿಯ ಆದರೆ ಅಂಡರ್ರೇಟೆಡ್ ನಿರ್ದೇಶಕರೊಬ್ಬರಿಗೆ ಆಸ್ಕರ್ ವಿಜೇತ ಹಾಲಿವುಡ್​ ನಿರ್ದೇಶಕನಿಂದ ಆಫರ್ ದೊರೆತಿದೆ. ಅದಕ್ಕೆ ಕಾರಣವಾಗಿರುವುದು ದಕ್ಷಿಣ ಭಾರತದ ಸಿನಿಮಾ. ಹಾಲಿವುಡ್​ ಸಿನಿಮಾದಲ್ಲಿ ನಟಿಸುತ್ತಿರುವ ಆ ಬಾಲಿವುಡ್ ನಿರ್ದೇಶಕ ಯಾರು? ಇಲ್ಲಿದೆ ಪೂರ್ಣ ಮಾಹಿತಿ....

ಬಾಲಿವುಡ್ ನಿರ್ದೇಶಕನಿಗೆ ಹಾಲಿವುಡ್ ಅವಕಾಶ, ಕಾರಣವಾಗಿದ್ದು ದಕ್ಷಿಣ ಭಾರತದ ಸಿನಿಮಾ
Alejandro
Follow us on

ಬಾಲಿವುಡ್​ನಲ್ಲಿ ನಟಿಸುವ ಕೆಲವು ಸ್ಟಾರ್ ನಟ, ನಟಿಯರಿಗೆ ಹಾಲಿವುಡ್ ಸಿನಿಮಾಗಳಲ್ಲಿ ನಟಿಸಲು ಅವಕಾಶ ಸಿಗುವುದು ಇತ್ತೀಚೆಗೆ ಮಾಮೂಲು. ಆಯಾ ನಟ-ನಟಿಯರ ಪಿಆರ್​ ತಂಡ ಇದಕ್ಕೆ ಪ್ರಮುಖ ಕಾರಣ. ಅಲ್ಲದೆ ಸಿನಿಮಾ ಮಾರುಕಟ್ಟೆಯ ಬದಲಾದ ಪರಿಸ್ಥಿತಿಗಳು ಸಹ ಹಾಲಿವುಡ್ ನಿರ್ಮಾಪಕರು, ಬಾಲಿವುಡ್​ನ ಸ್ಟಾರ್ ನಟ-ನಟಿಯರನ್ನು ಸಿನಿಮಾನಲ್ಲಿ ಹಾಕಿಕೊಳ್ಳಲು ಕಾರಣವಾಗಿದೆ. ಆದರೆ ಇದೀಗ ಬಾಲಿವುಡ್​ನ ಅಂಡರ್ರೇಟೆಡ್ ನಿರ್ದೇಶಕರೊಬ್ಬರಿಗೆ ಇದೀಗ ಆಸ್ಕರ್ ವಿಜೇತ ಹಾಲಿವುಡ್​ ನಿರ್ದೇಶಕನಿಂದ ಆಫರ್ ದೊರೆತಿದೆ. ಅದಕ್ಕೆ ಕಾರಣವಾಗಿರುವುದು ದಕ್ಷಿಣ ಭಾರತದ ಸಿನಿಮಾ.

ಕಳೆದ ಕೆಲ ತಿಂಗಳಿನಿಂದ ತಮಿಳಿನ ‘ಮಹಾರಾಜ’ ಸಿನಿಮಾದ ಬಗ್ಗೆ ಚರ್ಚೆಗಳು ಜೋರಾಗಿ ನಡೆಯುತ್ತಿದೆ. ವಿಜಯ್ ಸೇತುಪತಿ ಮುಖ್ಯ ಪಾತ್ರದಲ್ಲಿ ನಟಿಸಿರುವ ಈ ಸಿನಿಮಾಕ್ಕೆ ವಿಶ್ವಮಟ್ಟದಲ್ಲಿ ಪ್ರಶಂಸೆಗಳು ಕೇಳಿ ಬಂದಿವೆ. ಈ ಸಿನಿಮಾದ ವಿಲನ್ ಪಾತ್ರದಲ್ಲಿ ಬಾಲಿವುಡ್​ನ ಹೆಸರಾಂತ ನಿರ್ದೇಶಕ ಅನುರಾಗ್ ಕಶ್ಯಪ್ ನಟಿಸಿದ್ದಾರೆ. ವಿಜಯ್ ಸೇತುಪತಿಗೆ ಠಕ್ಕರ್ ಕೊಡುವಂತೆ ಅವರ ನಟನೆ ಇದೆ. ‘ಮಹಾರಾಜ’ ಸಿನಿಮಾ ನೋಡಿದ ಹಾಲಿವುಡ್​ನ ಆಸ್ಕರ್ ವಿಜೇತ ನಿರ್ದೇಶಕರೊಬ್ಬರು, ಅನುರಾಗ್ ಕಶ್ಯಪ್​ಗೆ ತಮ್ಮ ಮುಂದಿನ ಸಿನಿಮಾದಲ್ಲಿ ಅವಕಾಶ ನೀಡಿದ್ದಾರೆ.

‘ಮಹಾರಾಜ’ ಸಿನಿಮಾ ನಿರ್ದೇಶನ ಮಾಡಿರುವ ನಿತಿಲನ್ ಸ್ವಾಮಿನಾಥನ್ ಈ ವಿಷಯವನ್ನು ಅವಾರ್ಡ್ ಫಂಕ್ಷನ್ ಒಂದರಲ್ಲಿ ಹೇಳಿಕೊಂಡಿದ್ದಾರೆ. ‘ಇತ್ತೀಚೆಗೆ ಅನುರಾಗ್ ಕಶ್ಯಪ್ ಅವರ ಮಗಳ ಮದುವೆಗೆ ಮುಂಬೈಗೆ ಹೋಗಿದ್ದೆ. ಆಗ ಅನುರಾಗ್ ಅವರು ಒಂದು ವಿಷಯ ಹೇಳಿದರು. ಕೇಳಿ ನನಗೆ ಬಹಳ ಖುಷಿಯಾಯ್ತು. ಅವರಿಗೆ ಹಾಲಿವುಡ್ ನಿರ್ದೇಶಕ ಅಲೆಕ್ಸಾಂಡ್ರಿಯೊ ಗಾಂಜಾಲ್ವೆಸ್ ಹಿನ್ಯಾರಿತೊ ಅವರಿಂದ ಕರೆ ಬಂದಿತ್ತಂತೆ. ಅವರ ಸಿನಿಮಾದಲ್ಲಿ ಆಫರ್ ನೀಡಿದ್ದಾರಂತೆ. ಅದಕ್ಕೆಲ್ಲ ‘ಮಹಾರಾಜ’ ಕಾರಣ ಎಂದರು. ಅದು ನನಗೆ ಬಹಳ ಖುಷಿ ಕೊಟ್ಟಿತು’ ಎಂದಿದ್ದಾರೆ ಸ್ವಾಮಿನಾಥನ್.

ಇದನ್ನೂ ಓದಿ:ಬಾಲಿವುಡ್​ ಬಗ್ಗೆ ಅನುರಾಗ್ ಕಶ್ಯಪ್​ಗೆ ಮೂಡಿದೆ ಅಸಹ್ಯ; ದಕ್ಷಿಣ ಬರಲಿದ್ದಾರೆ ಖ್ಯಾತ ನಿರ್ದೇಶಕ

ಅಲೆಕ್ಸಾಂಡ್ರಿಯೊ ಗಾಂಜಾಲ್ವೆಸ್ ಹಿನ್ಯಾರಿತೊ, ಹಾಲಿವುಡ್​ನ ಅತ್ಯುತ್ತಮ ನಿರ್ದೇಶಕರಲ್ಲಿ ಒಬ್ಬರು. ಮೆಕ್ಸಿಕನ್ ಸಿನಿಮಾ ನಿರ್ದೇಶಕರಾಗಿರುವ ಇವರು, ಹಲವು ಅತ್ಯುತ್ತಮ ಸಿನಿಮಾಗಳನ್ನು ನೀಡಿದ್ದಾರೆ. ಅಲೆಕ್ಸಾಂಡ್ರಿಯೊ ಗಾಂಜಾಲ್ವೆಸ್ ಹಿನ್ಯಾರಿತೊ ಸಿನಿಮಾಗಳಿಗೆ ಬಂದಿರುವ ಆಸ್ಕರ್​ಗಳ ಸಂಖ್ಯೆ ಬರೋಬ್ಬರಿ 8. ಮೂವತ್ತೈದು ಬಾರಿ ಅಂತಿಮ ಹಂತದ ಆಸ್ಕರ್ ನಾಮಿನೇಷನ್​ಗಳನ್ನು ಇವರ ಸಿನಿಮಾಗಳು ಪಡೆದುಕೊಂಡಿವೆ.

ಆಸ್ಕರ್ ವಿಜೇತ, ‘ಬೆಬಲ್’, ‘ಬರ್ಡ್​ಮ್ಯಾನ್’, ಲಿಯೊನಾರ್ಡೊ ಡಿಕ್ಯಾಪ್ರಿಯೊಗೆ ಆಸ್ಕರ್ ತಂದುಕೊಟ್ಟ ‘ದಿ ರೆವೆನೆಂಟ್’ ನಿರ್ದೇಶಕರೂ ಇವರೆ. ಇದೀಗ ಅವರು ಹೆಸರಿಡದ ಸಿನಿಮಾ ಒಂದನ್ನು ನಿರ್ದೇಶನ ಮಾಡುತ್ತಿದ್ದು, ಸಿನಿಮಾದ ನಾಯಕ ವಿಶ್ವದ ಬಲು ದುಬಾರಿ ನಟ ಟಾಮ್ ಕ್ರೂಸ್. ಇದೇ ಸಿನಿಮಾದಲ್ಲಿ ಅನುರಾಗ್ ಕಶ್ಯಪ್ ಸಹ ಪ್ರಮುಖವಾದ ಪಾತ್ರವೊಂದರಲ್ಲಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:49 pm, Wed, 15 January 25