ಬಾಲಿವುಡ್ ಬಗ್ಗೆ ಅನುರಾಗ್ ಕಶ್ಯಪ್ಗೆ ಮೂಡಿದೆ ಅಸಹ್ಯ; ದಕ್ಷಿಣ ಬರಲಿದ್ದಾರೆ ಖ್ಯಾತ ನಿರ್ದೇಶಕ
ಅನುರಾಗ್ ಕಶ್ಯಪ್ ಅವರು ಬಾಲಿವುಡ್ ನಲ್ಲಿನ ಲಾಭ-ಆಧಾರಿತ ಚಿತ್ರನಿರ್ಮಾಣದಿಂದ ಬೇಸತ್ತು ದಕ್ಷಿಣ ಭಾರತಕ್ಕೆ ಸ್ಥಳಾಂತರಗೊಳ್ಳುವ ನಿರ್ಧಾರ ಕೈಗೊಂಡಿದ್ದಾರೆ. ಬಾಲಿವುಡ್ನಲ್ಲಿ ಪ್ರಯೋಗಾತ್ಮಕ ಚಿತ್ರ ನಿರ್ಮಾಣಕ್ಕೆ ಅವಕಾಶ ಕಡಿಮೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. 2025ರಲ್ಲಿ ಅವರು ಈ ನಿರ್ಧಾರವನ್ನು ಜಾರಿಗೆ ತರುವ ಉದ್ದೇಶ ಹೊಂದಿದ್ದಾರೆ.
ಬಾಲಿವುಡ್ನಲ್ಲಿ ಸಿನಿಮಾ ನಿರ್ದೇಶನ ಮಾಡುವುದು ಎಲ್ಲರಿಗೂ ಇಷ್ಟ ಆಗುವುದಿಲ್ಲ. ಅಲ್ಲಿ ಕೇವಲ ಮಾಸ್ ಸಿನಿಮಾಗಳಿಗೆ ಮಾತ್ರ ಹೆಚ್ಚಿನ ಆದ್ಯತೆ ಸಿಗುತ್ತದೆ. ಈ ಕಾರಣಕ್ಕೆ ಕೆಲವರು ಬಾಲಿವುಡ್ ತೊರೆದ ಉದಾಹರಣೆಯೂ ಇದೆ. ಈಗ ಅನುರಾಗ್ ಕಶ್ಯಪ್ ಅವರು ಇದೇ ನಿರ್ಧಾರ ಮಾಡಿದ್ದಾರೆ. ಈ ವರ್ಷ ಅವರು ಬಾಲಿವುಡ್ ಬಿಟ್ಟು ದಕ್ಷಿಣ ಭಾರತದ ಕಡೆ ಮುಖ ಮಾಡುವ ಉದ್ದೇಶ ಹೊಂದಿದ್ದಾರೆ.
ಇತ್ತೀಚೆಗೆ ನೀಡಿದ ಸಂದರ್ಶನ ಒಂದರಲ್ಲಿ ಅನುರಾಗ್ ಕಶ್ಯಪ್ ಅವರು ಮಾತನಾಡಿದ್ದಾರೆ. ಬಾಲಿವುಡ್ನಲ್ಲಿ ನಿರ್ಮಾಕರು ಹಾಕುವ ಷರತ್ತುಗಳಿಗೆ, ಅವರು ಕೇವಲ ಲಾಭ ಮಾತ್ರ ನಿರೀಕ್ಷೆ ಮಾಡುವುದನ್ನು ನೋಡಿ ಬೇಸರ ಆಗಿದೆ. ಈ ಕಾರಣದಿಂದಲೇ ದಕ್ಷಿಣ ಭಾರತಕ್ಕೆ ಬಂದು ಪ್ರಯೋಗ ಮಾಡುವ ನಿರ್ಧಾರಕ್ಕೆ ಬಂದಿದ್ದಾರೆ.
‘ನಾನು ಈಗ ಪ್ರಯೋಗಾತ್ಮಕ ಸಿನಿಮಾ ಮಾಡಲು ಸಾಧ್ಯವಿಲ್ಲ. ಏಕೆಂದರೆ ನಿರ್ಮಾಪಕರು ನಿರಂತರವಾಗಿ ಲಾಭದ ಬಗ್ಗೆ ಯೋಚಿಸುತ್ತಾ ಇದ್ದಾರೆ. ಸಿನಿಮಾ ನಿರ್ಮಾಣದ ಖುಷಿ ಈಗ ಇಲ್ಲ. ಅದಕ್ಕಾಗಿಯೇ ನಾನು 2025ರಲ್ಲಿ ಮುಂಬೈ ಬಿಟ್ಟು ದಕ್ಷಿಣ ಭಾರತದ ಕಡೆ ಹೋಗುತ್ತಿದ್ದೇನೆ’ ಎಂದು ಅವರು ನೇರ ಮಾತುಗಳಲ್ಲಿ ಹೇಳಿದ್ದಾರೆ.
‘ಎಲ್ಲಿ ಪ್ರಚೋದನೆ ಇರುತ್ತದೆಯೋ ನಾನು ಅಲ್ಲಿರಲು ಬಯಸುತ್ತೇನೆ. ಇಲ್ಲದಿದ್ದರೆ, ನಾನು ಮುದುಕನಾಗಿ ಸಾಯುತ್ತೇನೆ ಅಷ್ಟೇ. ನನ್ನ ಉದ್ಯಮದಿಂದ ನಾನು ತುಂಬಾ ನಿರಾಶೆಗೊಂಡಿದ್ದೇನೆ ಮತ್ತು ಅಸಹ್ಯಗೊಂಡಿದ್ದೇನೆ. ಇಲ್ಲಿನ ಮನಸ್ಥಿತಿಗಳಿಂದ ನನಗೆ ಅಸಹ್ಯವಾಗಿದೆ’ ಎಂದು ಅವರು ಹೇಳಿದ್ದಾರೆ.
‘ಮಂಜುಮ್ಮೇಲ್ ಬಾಯ್ಸ್’ ಸಿನಿಮಾ ಸೂಪರ್ ಹಿಟ್ ಆಗಿದೆ. ಈ ಚಿತ್ರವನ್ನು ರಿಮೇಕ್ ಮಾಡಲು ಬಾಲಿವುಡ್ ಮಂದಿ ಆಸಕ್ತಿ ತೋರಿಸಿದ್ದು ಇದೆ. ಇದು ಅನುರಾಗ್ ಕಶ್ಯಪ್ಗೆ ಬೇಸರ ತರಿಸಿದೆ. ‘ಈಗಾಗಲೇ ಬಿಡುಗಡೆ ಆಗಿರುವ ಸಿನಿಮಾಗಳನ್ನು ರಿಮೇಕ್ ಮಾಡಲು ಆಸಕ್ತಿ ತೋರಿಸುತ್ತಾರೆ. ಹೊಸದನ್ನು ಮಾಡಲು ಆಸಕ್ತಿ ತೋರಿಸುವುದಿಲ್ಲ’ ಎಂದಿದ್ದಾರೆ ಅನುರಾಗ್.
ಇದನ್ನೂ ಓದಿ: ಒಂದೇ ಸಿನಿಮಾದಿಂದ ನೂರು ಕೋಟಿ ರೂಪಾಯಿ ಕಳೆದಿದ್ದ ಅನುರಾಗ್ ಕಶ್ಯಪ್
ಈ ಮೊದಲು ಮಾತನಾಡಿದ್ದ ಅನುರಾಗ್ ಕಶ್ಯಪ್ ಅವರು ಸ್ಟಾರ್ ಹೀರೋಗಳ ಜೊತೆ ಏಕೆ ಸಿನಿಮಾ ಮಾಡುವುದಿಲ್ಲ ಎಂಬುದನ್ನು ಹೇಳಿದ್ದರು. ಅವರ ಜೊತೆ ಸಿನಿಮಾ ಮಾಡಿ ಅದು ಸೋತರೆ ಅಭಿಮಾನಿಗಳಿಂದ ತೊಂದರೆ ಆಗುತ್ತದೆ ಎನ್ನುವ ಭಯ ಅವರದ್ದು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.