ಪ್ರಸ್ತುತ ಬಾಲಿವುಡ್ನ ಖ್ಯಾತ ನಿರ್ದೇಶಕರಲ್ಲಿ ಮೊದಲ ಸಾಲಿನಲ್ಲಿ ನಿಲ್ಲುವ ಹೆಸರು ಅನುರಾಗ್ ಕಶ್ಯಪ್. ತಮ್ಮದೇ ವಿಶಿಷ್ಟ ಶೈಲಿಯ ಸಿನಿಮಾಗಳಿಂದ ಅವರು ಅಪಾರ ಅಭಿಮಾನಿ ಬಳಗ ಸಂಪಾದಿಸಿದ್ದಾರೆ. ಇತ್ತೀಚೆಗೆ ಅವರು ತಮ್ಮ ಬಾಲ್ಯದ ಕಷ್ಟದ ದಿನಗಳ ಬಗ್ಗೆ ಹೇಳಿಕೊಂಡಿದ್ದಾರೆ. ಅವರ ಬದುಕಿನ ಜರ್ನಿಯನ್ನು ಕೇಳಿದ ಅಭಿಮಾನಿಗಳಿಗೆ ನಿರ್ದೇಶಕನ ಬದುಕಿನ ಬಗ್ಗೆ ಹೆಮ್ಮೆ ಎನಿಸಿದೆ. ತಂದೆ ಹಾಗೂ ತಾಯಿಯ ಮದುವೆಯ ಚಿತ್ರಗಳನ್ನು ಹಂಚಿಕೊಂಡಿರುವ ಅನುರಾಗ್ ಕಶ್ಯಪ್ (Anurag Kashyap), ಬಾಲ್ಯವನ್ನು ಸ್ಮರಿಸಿಕೊಂಡಿದ್ದಾರೆ. ಉತ್ತರ ಪ್ರದೇಶದ ಗೋರಖ್ಪುರದಲ್ಲಿ ಜನಿಸಿದ ಅನುರಾಗ್, 1993ರಲ್ಲಿ ಮುಂಬೈಗೆ ಕೇವಲ 5,000 ರೂಗಳನ್ನಿಟ್ಟುಕೊಂಡು ಪ್ರವೇಶಿಸಿದವರು. ತಿಂಗಳುಗಳ ಕಾಲ ಬೀದಿಯಲ್ಲಿ ಅಲೆದು, ಬೀಚ್ನಲ್ಲಿ ಮಲಗಿದ್ದ ಅನುರಾಗ್ ಕಶ್ಯಪ್ ವೃತ್ತಿ ಜೀವನದ ಆರಂಭದಲ್ಲಿ ಸಾಕಷ್ಟು ಕಷ್ಟ ಅನುಭವಿಸಿದವರು. 1998ರಲ್ಲಿ ರಾಮ್ ಗೋಪಾಲ್ ವರ್ಮಾ ಅವರ ‘ಸತ್ಯ’ ಅನುರಾಗ್ ಕಶ್ಯಪ್ಗೆ ಬರಹಗಾರರಾಗಿ ಹೆಸರು ತಂದುಕೊಟ್ಟ ಚಿತ್ರ. ಅಲ್ಲಿಂದ ಅವರು ಹಿಂದಿರುಗಿ ನೋಡಿದ್ದೇ ಇಲ್ಲ. ಇತ್ತೀಚೆಗೆ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅನುರಾಗ್, ತಮ್ಮನ್ನು ಓದಿಸಲು ಪೋಷಕರು ಎಷ್ಟು ಕಷ್ಟಪಟ್ಟರು ಎಂಬುದನ್ನು ವಿವರಿಸಿದ್ದಾರೆ.
ಅನುರಾಗ್ ಹಂಚಿಕೊಂಡ ಪೋಸ್ಟ್ನಲ್ಲಿ ಏನೇನಿದೆ?
ತಂದೆ ಹಾಗೂ ತಾಯಿಯ ವಿವಾಹದ ಸಂದರ್ಭದ ಚಿತ್ರವನ್ನು ಹಂಚಿಕೊಂಡಿರುವ ಅನುರಾಗ್ ಕಶ್ಯಪ್, ಅದರಲ್ಲಿ ದೀರ್ಘ ಬರಹದ ಮೂಲಕ ಬಾಲ್ಯದ ಕುರಿತು ಬರೆದುಕೊಂಡಿದ್ದಾರೆ. ‘‘1970ರಲ್ಲಿ ನನ್ನ ಪೋಷಕರು ಗ್ರಾಮವೊಂದರಲ್ಲಿ ವಿವಾಹವಾದರು (ಚಿತ್ರದಲ್ಲಿ ತಲೆಯ ಮೇಲೆ ಸೆರಗು ಹಾಕಿಕೊಂಡಿರುವ ಮಹಿಳೆ). ಅವರು (ತಾಯಿ) ಮದುವೆಯ ನಂತರ ಪದವಿ ವ್ಯಾಸಂಗವನ್ನು ಪೂರ್ಣಗೊಳಿಸಿದರು ಮತ್ತು ನಾನು ಜನಿಸಿದ ನಂತರ ಸ್ನಾತಕೋತ್ತರ ವ್ಯಾಸಂಗ ಪೂರ್ಣಗೊಳಿಸಿದರು. ಅದನ್ನು ಹೇಗೆ ಪೂರ್ಣಗೊಳಿಸಿದರು ಎಂದು ನನಗೆ ತಿಳಿದಿಲ್ಲ. ಇಬ್ಬರೂ ಬೇರೆ ಬೇರೆ ಹಳ್ಳಿಗಳಿಂದ ಬನಾರಸ್ ವಿಶ್ವವಿದ್ಯಾಲಯಕ್ಕೆ ಓದಲು ತೆರಳಿದ್ದರು. ಅದರಲ್ಲೂ ನನ್ನನ್ನು ಪ್ರತಿಷ್ಠಿತ ಸಿಂಧಿಯಾ ಶಾಲೆಗೆ ಕಳುಹಿಸಿದ್ದರು’’
‘‘ಸಿಂಧಿಯಾ ಶಾಲೆಗೆ ಕಳುಹಿಸುವುದು ನನ್ನ ಪೋಷಕರ ಸಾಮರ್ಥ್ಯಕ್ಕಿಂತ ಹಿರಿದಾಗಿತ್ತು. ಅತ್ಯುತ್ತಮ ಶಾಲೆಗೆ ನನ್ನನ್ನು ಕಳುಹಿಸಬೇಕು ಎಂಬ ಒಂದೇ ಉದ್ದೇಶದಿಂದ ಅವರು ಬೇರೆಯವರಿಂದ ಹಣ ಪಡೆದು ನನ್ನನ್ನು ಭಾರತದ ಅತ್ಯುತ್ತಮ ಶಾಲೆಗೆ ಕಳುಹಿಸಿದರು. ನಾನು ಇಂದು ಏನಾಗಿದ್ದೇನೋ ಅದಕ್ಕೆ ಅವರ ತ್ಯಾಗವೇ ಕಾರಣ. ಅದಕ್ಕೆ ನಾನು ಎಂದಿಗೂ ಋಣಿಯಾಗಿರುತ್ತೇನೆ’’ ಎಂದು ಅನುರಾಗ್ ಕಶ್ಯಪ್ ಬರೆದುಕೊಂಡಿದ್ದಾರೆ.
ಅನುರಾಗ್ ಹಂಚಿಕೊಂಡ ಪೋಸ್ಟ್:
ಅನುರಾಗ್ ಕಶ್ಯಪ್ ಬರಹಕ್ಕೆ ತಾರೆಯರ ಮೆಚ್ಚುಗೆ:
ಅನುರಾಗ್ ಕಶ್ಯಪ್ ಚಿತ್ರದಿಂದಲೇ ಹಿಂದಿ ಚಿತ್ರರಂಗದಲ್ಲಿ ಪ್ರಸ್ತುತ ಗುರುತಿಸಿಕೊಂಡಿರುವ ಅನೇಕ ಕಲಾವಿದರು ಬೆಳಕಿಗೆ ಬಂದವರು. ಪ್ರಸ್ತುತ ಅನುರಾಗ್ ಬರೆದ ಬರಹಕ್ಕೆ ಕಲಾವಿದರೂ ಸೇರಿದಂತೆ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ. ಅದರಲ್ಲಿ ಅಮೃತಾ ಸುಭಾಷ್, ಪುಲ್ಕಿತ್ ಸಾಮ್ರಾಟ್, ಶ್ಲೋಕ್ ಶರ್ಮಾ ಸೇರಿದಂತೆ ಅನೇಕರು ಅನುರಾಗ್ ಪೋಷಕರ ನಿಲುವು ಹಾಗೂ ಅವರ ಬರಹವನ್ನು ಕಾಮೆಂಟ್ನಲ್ಲಿ ಹೊಗಳಿದ್ದಾರೆ.
ಇದನ್ನೂ ಓದಿ:
ರೀಲ್ಸ್ ಮಾಡುವಾಗ ಬಿಗ್ ಬಾಸ್ ಸ್ಪರ್ಧಿ ಧರಿಸಿದ ಬಟ್ಟೆ ನೋಡಿ ಶಾಕ್ ಆದ ಅಭಿಮಾನಿಗಳು