ಬೋಲ್ಡ್ ಸೀನ್ಗೆ ಒಪ್ಪಬೇಕು ಎಂಬ ಕಂಡೀಷನ್ ಹಾಕಿ ‘ಸೇಕ್ರೆಡ್ ಗೇಮ್ಸ್ 3’ರ ಮಹಿಳಾ ಪಾತ್ರಗಳಿಗೆ ನಕಲಿ ಜಾಹಿರಾತು!; ನಿರ್ದೇಶಕ ಹೇಳಿದ್ದೇನು?
Sacred Games Series | Anurag Kashyap: ಭಾರತದ ಜನಪ್ರಿಯ ಸೀರೀಸ್ಗಳಲ್ಲಿ ಒಂದಾದ ‘ಸೇಕ್ರೆಡ್ ಗೇಮ್ಸ್ 3’ಕ್ಕೆ ಮಹಿಳಾ ಪಾತ್ರಧಾರಿಗಳು ಬೇಕು ಎಂದು ವಂಚಕರು ನಕಲಿ ಜಾಹಿರಾತು ನೀಡಿದ್ದಾರೆ. ಈ ಕುರಿತು ಜನರನ್ನು ಎಚ್ಚರಿಸಿರುವ ನಿರ್ದೇಶಕ ಅನುರಾಗ್ ಕಶ್ಯಪ್ ‘ಸೇಕ್ರೆಡ್ ಗೇಮ್ಸ್ 3’ರ ಯಾವುದೇ ಯೋಚನೆಯಿಲ್ಲ. ವಂಚಕರ ವಿರುದ್ಧ ದೂರು ನೀಡಲಾಗುವುದು ಎಂದಿದ್ದಾರೆ.
ಭಾರತೀಯ ಚಿತ್ರರಂಗ ದೊಡ್ಡ ಮಟ್ಟದಲ್ಲಿ ವೆಬ್ ಸೀರೀಸ್ ನಿರ್ಮಾಣದೆಡೆಗೆ ಗಮನ ನೀಡಿರಲಿಲ್ಲ. ಆದರೆ ‘ಸೇಕ್ರೆಡ್ ಗೇಮ್ಸ್’ (Sacred Games) ತೆರೆಕಂಡ ನಂತರ ಟ್ರೆಂಡ್ ಬದಲಾಯಿತು. ಜನರ ಮನಗೆಲ್ಲಲು ಯಶಸ್ವಿಯಾದ ‘ಸೇಕ್ರೆಡ್ ಗೇಮ್ಸ್’ನ ಎರಡನೇ ಭಾಗವೂ ಬಂತು. ಅದರ ಅಂತ್ಯದಲ್ಲಿ ಮೂರನೇ ಭಾಗದ ಸುಳಿವೂ ಇತ್ತು. ಇದರಿಂದ ಜನರು 3ನೇ ಭಾಗ ನಿರೀಕ್ಷಿಸಿದ್ದರು. ಆದರೆ ಈ ಕುರಿತು ನಿರ್ದೇಶಕರಾಗಲಿ ಅಥವಾ ಅದನ್ನು ಪ್ರಸಾರ ಮಾಡಿದ ನೆಟ್ಫ್ಲಿಕ್ಸ್ (Netflix) ಆಗಲಿ ಅಧಿಕೃತ ಹೇಳಿಕೆ ನೀಡಿರಲಿಲ್ಲ. ಆದರೂ ಜನರಲ್ಲಿ ಕುತೂಹಲ ಇದ್ದೇ ಇತ್ತು. ಇದನ್ನೇ ದಾಳವಾಗಿಸಿಕೊಂಡ ವಂಚಕರು ಸಾಮಾಜಿಕ ಜಾಲತಾಣಗಳಲ್ಲಿ ‘ಸೇಕ್ರೆಡ್ ಗೇಮ್ಸ್ 3’ಕ್ಕೆ ಆಡಿಷನ್ ನಡೆಯುತ್ತಿದೆ ಎಂಬ ಜಾಹಿರಾತನ್ನು ಹರಿಬಿಟ್ಟಿದ್ದಾರೆ. ಇದನ್ನು ಗಮನಿಸಿರುವ ನಿರ್ದೇಶಕ ಅನುರಾಗ್ ಕಶ್ಯಪ್ (Anurag Kashyap) ಜನರಿಗೆ ಈ ಕುರಿತು ಎಚ್ಚರಿಕೆ ನೀಡಿದ್ದು, ಕಿಡಿಗೇಡಿಗಳ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ. ಅಲ್ಲದೇ ಸೇಕ್ರೆಡ್ ಗೇಮ್ಸ್ನ ಮೂರನೇ ಭಾಗ ತಯಾರಾಗುತ್ತಿಲ್ಲ ಎಂದೂ ಖಚಿತಪಡಿಸಿದ್ದಾರೆ.
‘ಸೇಕ್ರೆಡ್ ಗೇಮ್ಸ್’ ದೇಶದಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆ ಹುಟ್ಟುಹಾಕಿತ್ತು. ಸೀರೀಸ್ನಲ್ಲಿ ಹಸಿಬಿಸಿ ದೃಶ್ಯಗಳೂ ಸಾಕಷ್ಟಿತ್ತು. ಚಿತ್ರಮಂದಿರಳಿಗೆ ಅನ್ವಯವಾಗುವ ಸೆನ್ಸಾರ್ ಓಟಿಟಿಗಳಿಗೆ ಇಲ್ಲದ ಕಾರಣ, ಸೀರೀಸ್ ಅನ್ನು ಬೋಲ್ಡ್ ಆಗಿ ತಯಾರಿಸಲಾಗಿತ್ತು. ಇದೇ ಅಂಶವನ್ನು ದಾಳವಾಗಿಸಿಕೊಂಡಿರುವ ಕಿಡಿಗೇಡಿಗಳು, ಸೀರೀಸ್ನ ಮೂರನೇ ಅವತರಣಿಕೆಗೆ ಬೋಲ್ಡ್ ಪಾತ್ರದಲ್ಲಿ ನಟಿಸಲು ಒಪ್ಪುವ ಯುವತಿಯರು/ ಮಹಿಳೆಯರು ಬೇಕಾಗಿದ್ದಾರೆ ಎಂದು ಜಾಹಿರಾತು ನೀಡಿದ್ದಾರೆ.
ನಕಲಿ ಜಾಹಿರಾತಿನಲ್ಲಿ ಏನಿದೆ? ರಾಜ್ಬೀರ್ ಎನ್ನುವ ವ್ಯಕ್ತಿ, ಕಾಸ್ಟಿಂಗ್ ಡೈರೆಕ್ಟರ್ ಎಂದು ಹೇಳಿಕೊಂಡು ಇನ್ಸ್ಟಾಗ್ರಾಂನಲ್ಲಿ ಜಾಹಿರಾತು ನೀಡಿದ್ದಾನೆ. ಇದರಲ್ಲಿ ನಿರ್ಮಾಣ ಸಂಸ್ಥೆ ನೆಟ್ಫ್ಲಿಕ್ಸ್ ಹಾಗೂ ನಿರ್ದೇಶಕ ಅನುರಾಗ್ ಕಶ್ಯಪ್ ಅವರ ಹೆಸರನ್ನೂ ಹಾಕಿದ್ದು, ‘ಸೇಕ್ರೆಡ್ ಗೇಮ್ಸ್ 3’ರ ಪಾತ್ರಗಳಿಗೆ ಆಡಿಷನ್ ನಡೆಯಲಿದೆ ಎಂದಿದ್ದಾನೆ.
20-28 ವರ್ಷದ ಯುವತಿಯರು ಪ್ರಮುಖ ಪಾತ್ರಗಳಲ್ಲಿ ನಟಿಸಲು ಬೇಕಾಗಿದ್ದಾರೆ. ಡಾನ್ಸ್, ಬೋಲ್ಡ್ ಸೀನ್ಗಳಲ್ಲಿ ನಟಿಸಲು ಒಪ್ಪಬೇಕು ಎಂದು ಜಾಹಿರಾತಿನಲ್ಲಿ ರಾಜ್ಬೀರ್ ಎಂಬಾತ ಹೇಳಿದ್ದಾನೆ. ಅಲ್ಲದೇ 30-0 ವರ್ಷದ ಮಹಿಳೆಯೂ ಬೇಕಾಗಿದ್ದು, ಬೋಲ್ಡ್ ಸೀನ್ಗಳಲ್ಲಿ ನಟಿಸಲು ಒಪ್ಪಬೇಕು ಎಂದು ಬರೆಯಲಾಗಿದೆ.
ನಕಲಿ ಜಾಹಿರಾತಿನ ಕುರಿತು ಜನರನ್ನು ಎಚ್ಚರಿಸಿದ ನಿರ್ದೇಶಕ ಅನುರಾಗ್ ಕಶ್ಯಪ್: ‘ಸೇಕ್ರೆಡ್ ಗೇಮ್ಸ್’ ನಿರ್ದೇಶಕ ಅನುರಾಗ್ ಕಶ್ಯಪ್ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ನಕಲಿ ಜಾಹಿರಾತಿನ ಬಗ್ಗೆ ಜನರಿಗೆ ಎಚ್ಚರಿಕೆ ನೀಡಿದ್ದಾರೆ. ಅಸಲಿಗೆ ‘ಸೇಕ್ರೆಡ್ ಗೇಮ್ಸ್’ 3ನೇ ಸೀಸನ್ ನಿರ್ಮಾಣವಾಗುತ್ತಲೇ ಇಲ್ಲ. ರಾಜ್ಬೀರ್ ಎನ್ನುವವ ವಂಚಕ. ಈ ಕುರಿತು ಪೊಲೀಸರಿಗೆ ದೂರು ನೀಡಿ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅನುರಾಗ್ ಕಶ್ಯಪ್ ನುಡಿದಿದ್ದಾರೆ.
ಅನುರಾಗ್ ಕಶ್ಯಪ್ ಹಂಚಿಕೊಂಡ ಪೋಸ್ಟ್:
View this post on Instagram
‘ಸೇಕ್ರೆಡ್ ಗೇಮ್ಸ್’ನಲ್ಲಿ ಸೈಫ್ ಅಲಿ ಖಾನ್, ನವಾಜುದ್ದೀನ್ ಸಿದ್ದಿಕಿ, ರಾಧಿಕಾ ಆಪ್ಟೆ, ಕುಬ್ರಾ ಸೇಟ್ ಮೊದಲಾದವರು ನಟಿಸಿದ್ದರು. ಮೊದಲ ಸೀಸನ್ 2018ರ ಜುಲೈನಲ್ಲಿ ತೆರೆಕಂಡಿತ್ತು. ಎರಡನೇ ಸೀಸನ್ 2019ರ ಆಗಸ್ಟ್ನಲ್ಲಿ ಬಿಡುಗಡೆಯಾಗಿತ್ತು.
ಪ್ರಸ್ತುತ ಅನುರಾಗ್ ಕಶ್ಯಪ್ ಕೃತಿ ಸನೋನ್ ಹಾಗೂ ನಿಖಿಲ್ ದ್ವಿವೇದಿ ನಟನೆಯಲ್ಲಿ ಮೂಡಿಬರುತ್ತಿರುವ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯದಲ್ಲೇ ಚಿತ್ರ ಸೆಟ್ಟೇರಲಿದೆ.
ಇದನ್ನೂ ಓದಿ:
ತಮಿಳು ಸಿನಿಮಾದಲ್ಲಿ ರಾಗಿಣಿ ದ್ವಿವೇದಿ; ತುಪ್ಪದ ಬೆಡಗಿಯ ಹೊಸ ಚಿತ್ರಕ್ಕೆ ಶೂಟಿಂಗ್ ಶುರು
ಗೋಮಾತೆ ಜೊತೆ ಅಕ್ಷಯ್ ಕುಮಾರ್ ಪುತ್ರಿ; ಮಕ್ಕಳಿಗೆ ಈ ಅನುಭವ ಬೇಕು ಎಂದ ಸ್ಟಾರ್ ನಟ