2018ರಲ್ಲಿ ತೆರೆಗೆ ಬಂದ ಶಾರುಖ್ ಖಾನ್ (Shah Rukh Khan) ನಟನೆಯ ‘ಜೀರೋ’ (Zero) ಚಿತ್ರ ಮಕಾಡೆ ಮಲಗಿತ್ತು. ಈ ಚಿತ್ರದ ಸೋಲಿನಿಂದ ಶಾರುಖ್ ಖಾನ್ ತುಂಬಾನೇ ಬೇಸರಗೊಂಡಿದ್ದರು. ಆ ಬಳಿಕ ಅವರು ಎರಡು ವರ್ಷ ಯಾವುದೇ ಸಿನಿಮಾ ಒಪ್ಪಿಕೊಂಡಿರಲಿಲ್ಲ. ಈ ಸಿನಿಮಾದಲ್ಲಿ ಅನುಷ್ಕಾ ಶರ್ಮಾ (Anushka Sharma) ಕೂಡ ನಟಿಸಿದ್ದರು. ಅವರು ಕೂಡ ನಟನೆಯಿಂದ ಅಂತರ ಕಾಯ್ದುಕೊಂಡರು. ಈ ಚಿತ್ರ ಬಂದು 3 ವರ್ಷ ಕಳೆದಿದೆ. ಅನುಷ್ಕಾ ಹೊಸ ಸಿನಿಮಾದ ಬಗ್ಗೆ ಯಾವುದೇ ಘೋಷಣೆ ಆಗಿಲ್ಲ. ಈಗ ಕೇಳಿ ಬರುತ್ತಿರುವ ಲೇಟೆಸ್ಟ್ ಸುದ್ದಿ ಎಂದರೆ, ಅನುಷ್ಕಾ ಒಟ್ಟೊಟ್ಟಿಗೆ ಮೂರು ಚಿತ್ರಗಳನ್ನು ಒಪ್ಪಿಕೊಂಡಿದ್ದಾರಂತೆ.
ಟೀಂ ಇಂಡಿಯಾ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿಯನ್ನು ಮದುವೆ ಆದ ನಂತರದಲ್ಲಿ ಅನುಷ್ಕಾ ಕುಟುಂಬದಲ್ಲಿ ಹೆಚ್ಚು ಬ್ಯುಸಿ ಆದರು. ಮಗಳು ವಮಿಕಾ ಜನಿಸಿದ ಬಳಿಕ ಅವಳ ಆರೈಕೆಯಲ್ಲಿ ಅನುಷ್ಕಾ ತೊಡಗಿಕೊಂಡಿದ್ದಾರೆ. ಹಾಗಂತ ಅವರು ಚಿತ್ರರಂಗದಿಂದ ದೂರ ಉಳಿದಿಲ್ಲ. ಕೆಲ ಸಿನಿಮಾಗಳನ್ನು ಹಾಗೂ ವೆಬ್ ಸೀರಿಸ್ಗಳನ್ನು ನಿರ್ಮಾಣ ಮಾಡಿ ಭೇಷ್ ಎನಿಸಿಕೊಂಡಿದ್ದಾರೆ. ಸಿನಿಮಾ ನಿರ್ಮಾಣದತ್ತ ಅವರ ಗಮನ ಹೆಚ್ಚಿದೆ. ಅನುಷ್ಕಾ ಆ್ಯಕ್ಟಿಂಗ್ಗೆ ಮರಳಬೇಕು ಎಂದು ಅವರ ಅಭಿಮಾನಿಗಳು ಬಯಸುತ್ತಿದ್ದಾರೆ.
ಇತ್ತೀಚೆಗೆ ಅನುಷ್ಕಾ ಜಿಮ್ನಲ್ಲಿ ಸಮಯ ಕಳೆಯುತ್ತಿರುವ ಬಗ್ಗೆ ಪೋಸ್ಟ್ ಮಾಡಿದ್ದರು. ಅವರು ಮೊದಲಿನ ಫಿಟ್ನೆಸ್ಗೆ ಬರೋಕೆ ಎಲ್ಲ ರೀತಿಯ ಪ್ರಯತ್ನ ಮಾಡುತ್ತಿದ್ದಾರೆ. ಇದು ಅವರ ಅಭಿಮಾನಿಗಳಿಗೆ ಖುಷಿ ನೀಡಿದೆ. ಈಗ ಹೊಸ ವರ್ಷಕ್ಕೆ ಅವರ ಬಗ್ಗೆ ಹೊಸ ಅಪ್ಡೇಟ್ ಕೇಳಿ ಅಭಿಮಾನಿಗಳು ಖುಷಿಯಾಗಿದ್ದಾರೆ.
ಮೂಲಗಳ ಪ್ರಕಾರ ಅನುಷ್ಕಾ ಮೂರು ಚಿತ್ರಕ್ಕೆ ಸಹಿ ಹಾಕಿದ್ದಾರೆ. ಒಂದು ಸಿನಿಮಾ ನೇರವಾಗಿ ಒಟಿಟಿಯಲ್ಲಿ ರಿಲೀಸ್ ಆದರೆ, ಉಳಿದ ಎರಡು ಚಿತ್ರಗಳು ದೊಡ್ಡ ಪರದೆಯಮೇಲೆ ಬಿಡುಗಡೆ ಆಗಲಿವೆ ಎನ್ನಲಾಗುತ್ತಿದೆ. ಅನುಷ್ಕಾ ಯಾರ ಜತೆ ನಟಿಸಲಿದ್ದಾರೆ, ಅವರ ಕಂಬ್ಯಾಕ್ ಪ್ರಾಜೆಕ್ಟ್ ಹೇಗಿರಲಿದೆ ಎನ್ನುವ ಕೂತೂಹಲಕ್ಕೆ ಇನ್ನಷ್ಟೇ ಉತ್ತರ ಸಿಗಬೇಕಿದೆ.
ಸದ್ಯ, ಅನುಷ್ಕಾ ಶರ್ಮಾ ದಕ್ಷಿಣ ಆಫ್ರಿಕಾದಲ್ಲಿದ್ದಾರೆ. ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವೆ ಟೆಸ್ಟ್ ಸರಣಿ ನಡೆಯುತ್ತಿದೆ. ವಿರಾಟ್ ಜತೆ ಅವರು ಕೂಡ ಅಲ್ಲಿಗೆ ತೆರಳಿದ್ದಾರೆ. ಟೀಂ ಇಂಡಿಯಾ ದಕ್ಷಿಣ ಆಫ್ರಿಕಾದ ವಿರುದ್ಧ ಮೊದಲ ಟೆಸ್ಟ್ ಅನ್ನು ಗೆದ್ದಿದೆ.
ಇದನ್ನೂ ಓದಿ: ‘ಆರ್ಆರ್ಆರ್’ ಬೆಂಗಳೂರು ಪ್ರೀ ರಿಲೀಸ್ ಇವೆಂಟ್ನಲ್ಲಿ ದಿಗ್ಗಜರು; ಸ್ಥಳ, ಸಮಯದ ಬಗ್ಗೆ ಇಲ್ಲಿದೆ ಮಾಹಿತಿ
Published On - 8:39 am, Sat, 1 January 22