‘ಜಗತ್ತು ಇದಕ್ಕಿಂತ ದೊಡ್ಡ ಯುದ್ಧ ಕಂಡಿಲ್ಲ’: ಟ್ರೇಲರ್​ ನೋಡಿ ಬೆರಗಾದ ಅಕ್ಷಯ್​ ಕುಮಾರ್​ ಫ್ಯಾನ್ಸ್​

|

Updated on: Mar 26, 2024 | 6:37 PM

‘ಬಡೆ ಮಿಯಾ ಚೋಟೆ ಮಿಯಾ’ ಸಿನಿಮಾದಲ್ಲಿ ಅಕ್ಷಯ್​ ಕುಮಾರ್​, ಟೈಗರ್​ ಶ್ರಾಫ್​, ಪೃಥ್ವಿರಾಜ್​ ಸುಕುಮಾರನ್​ ಮುಂತಾದವರು ಅಭಿನಯಿಸಿದ್ದಾರೆ. ಅಲಿ ಅಬ್ಬಾಸ್​ ಜಫರ್​ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಟ್ರೇಲರ್​ ಬಿಡುಗಡೆ ಆಗಿದ್ದು, ಸಾಹಸ ದೃಶ್ಯಗಳು ಗಮನ ಸೆಳೆಯುತ್ತಿವೆ. ಏ.10ರಂದು ‘ಬಡೆ ಮಿಯಾ ಚೋಟೆ ಮಿಯಾ’ ಚಿತ್ರ ತೆರೆಕಾಣಲಿದೆ.

‘ಜಗತ್ತು ಇದಕ್ಕಿಂತ ದೊಡ್ಡ ಯುದ್ಧ ಕಂಡಿಲ್ಲ’: ಟ್ರೇಲರ್​ ನೋಡಿ ಬೆರಗಾದ ಅಕ್ಷಯ್​ ಕುಮಾರ್​ ಫ್ಯಾನ್ಸ್​
ಟೈಗರ್​ ಶ್ರಾಫ್​, ಅಕ್ಷಯ್​ ಕುಮಾರ್​
Follow us on

ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ‘ಬಡೆ ಮಿಯಾ ಚೋಟೆ ಮಿಯಾ’ (Bade Miyan Chote Miyan) ಚಿತ್ರ ಕೂಡ ಇದೆ. ಈ ಸಿನಿಮಾದಲ್ಲಿ ಅಕ್ಷಯ್​ ಕುಮಾರ್​ (Akshay Kumar), ಟೈಗರ್​ ಶ್ರಾಫ್​ ಮುಖ್ಯ ಭೂಮಿಕೆ ನಿಭಾಯಿಸಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಈ ಸಿನಿಮಾ ಬಿಡುಗಡೆ ಆಗಲಿದೆ. ಈಗ ಟ್ರೇಲರ್​ ಮೂಲಕ ನಿರೀಕ್ಷೆ ಡಬಲ್​ ಮಾಡಲಾಗಿದೆ. ಇಂದು (ಮಾರ್ಚ್​ 26) ‘ಬಡೆ ಮಿಯಾ ಚೋಟೆ ಮಿಯಾ’ ಟ್ರೇಲರ್​ (Bade Miyan Chote Miyan Trailer) ರಿಲೀಸ್​ ಆಗಿದೆ. ಇದರಲ್ಲಿನ ದೃಶ್ಯಗಳನ್ನು ಕಂಡು ಅಭಿಮಾನಿಗಳು ಥ್ರಿಲ್​ ಆಗಿದ್ದಾರೆ. ಮೈನವಿರೇಳಿಸುವಂತಹ ಆ್ಯಕ್ಷನ್​ ದೃಶ್ಯಗಳು ಈ ಟ್ರೇಲರ್​ನಲ್ಲಿ ಹೈಲೈಟ್​ ಆಗಿವೆ.

‘ಜಗತ್ತು ಇದಕ್ಕಿಂತ ದೊಡ್ಡ ಯುದ್ಧವನ್ನು ಕಂಡಿಲ್ಲ’ ಎಂದು ವಿಲನ್​ ಹೇಳುವ ಡೈಲಾಗ್​ ಕೇಳಿ ಸಿನಿಪ್ರಿಯರ ನಿರೀಕ್ಷೆ ಜಾಸ್ತಿ ಆಗಿದೆ. ಭಯಂಕರವಾದ ಯುದ್ಧವನ್ನು ಸಾರಿರುವ ಖಳನನ್ನು ಮಣಿಸಲು ಬರುವ ಸೈನಿಕರಾಗಿ ಅಕ್ಷಯ್​ ಕುಮಾರ್​ ಮತ್ತು ಟೈಗರ್​ ಶ್ರಾಫ್​ ಅವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಸಖತ್​ ಅದ್ದೂರಿಯಾಗಿ ‘ಬಡೆ ಮಿಯಾ ಚೋಟೆ ಮಿಯಾ’ ಸಿನಿಮಾ ಮೂಡಿಬಂದಿದೆ ಎಂಬುದಕ್ಕೆ ಟ್ರೇಲರ್​ನಲ್ಲಿ ಸುಳಿವು ಸಿಕ್ಕಿದೆ.

ಇದನ್ನೂ ಓದಿ: ಅಬು ಧಾಬಿಯ ಮೊದಲ ಹಿಂದೂ ದೇವಾಲಯಕ್ಕೆ ಭೇಟಿ ನೀಡಿ ಫೋಟೋ ಹಂಚಿಕೊಂಡ ಅಕ್ಷಯ್​ ಕುಮಾರ್​

ಟೈಗರ್ ಶ್ರಾಫ್​ ಮತ್ತು ಅಕ್ಷಯ್​ ಕುಮಾರ್​ ಅವರು ಆ್ಯಕ್ಷನ್​ ಸಿನಿಮಾಗಳ ಮೂಲಕ ಹೆಸರುವಾಸಿ ಆಗಿದ್ದಾರೆ. ಅವರಿಬ್ಬರು ಒಟ್ಟಿಗೆ ನಟಿಸಿರುವುದರಿಂದ ಕ್ರೇಜ್​ ಹೆಚ್ಚಾಗಿದೆ. ಈದ್​ ಪ್ರಯುಕ್ತ ಏಪ್ರಿಲ್​ 10ರಂದು ‘ಬಡೆ ಮಿಯಾ ಚೋಟೆ ಮಿಯಾ’ ಸಿನಿಮಾ ಬಿಡುಗಡೆ ಆಗಲಿದೆ. ಮೊದಲ ದಿನ ಈ ಸಿನಿಮಾ ಎಷ್ಟು ಕಲೆಕ್ಷನ್​ ಮಾಡಲಿದೆ ಎಂಬುದನ್ನು ತಿಳಿಯುವ ಕೌತುಕ ಮೂಡಿದೆ. ನೂರಾರು ಕೋಟಿ ರೂಪಾಯಿ ಬಜೆಟ್​ನಲ್ಲಿ ಈ ಚಿತ್ರ ಸಿದ್ಧವಾಗಿದೆ.

‘ಬಡೆ ಮಿಯಾ ಚೋಟೆ ಮಿಯಾ’ ಟ್ರೇಲರ್​:

‘ಬಡೆ ಮಿಯಾ ಚೋಟೆ ಮಿಯಾ’ ಸಿನಿಮಾಗೆ ಅಲಿ ಅಬ್ಬಾಸ್​ ಜಫರ್​ ಅವರು ನಿರ್ದೇಶನ ಮಾಡಿದ್ದಾರೆ. ‘ಸುಲ್ತಾನ್​’, ‘ಟೈಗರ್​ ಜಿಂದಾ ಹೈ’ ರೀತಿಯ ಸೂಪರ್​ ಹಿಟ್​ ಸಿನಿಮಾಗಳನ್ನು ನೀಡಿದ ಅವರು ಈಗ ಅಕ್ಷಯ್​ ಕುಮಾರ್​ ಮತ್ತು ಟೈಗರ್​ ಶ್ರಾಫ್​ಗೆ ಆ್ಯಕ್ಷನ್​-ಕಟ್​ ಹೇಳಿದ್ದಾರೆ. ಆ ಕಾರಣದಿಂದಲೂ ‘ಬಡೆ ಮಿಯಾ ಚೋಟೆ ಮಿಯಾ’ ಬಗ್ಗೆ ಸಿನಿಪ್ರಿಯರಲ್ಲಿ ನಿರೀಕ್ಷೆ ಮೂಡಿದೆ. ಈ ಸಿನಿಮಾದಲ್ಲಿ ಮಾನುಚಿ ಚಿಲ್ಲರ್​, ಪೃಥ್ವಿರಾಜ್​ ಸುಕುಮಾರನ್​, ಸೋನಾಕ್ಷಿ ಸಿನ್ಹಾ ಮುಂತಾದವರು ಕೂಡ ನಟಿಸಿದ್ದಾರೆ. ‘ಪೂಜಾ ಎಂಟರ್​ಟೇನ್ಮೆಂಟ್​’ ಮೂಲಕ ಈ ಸಿನಿಮಾ ನಿರ್ಮಾಣ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.