ಚಿತ್ರರಂಗಕ್ಕೂ ಡ್ರಗ್ಸ್ ಜಾಲಕ್ಕೂ ಎಲ್ಲಿಲ್ಲದ ನಂಟು. ಮಾದಕ ವಸ್ತು ಸೇವನೆ ಮಾಡಿ ಅನೇಕ ಸೆಲೆಬ್ರಿಟಿಗಳು ಸಂಕಷ್ಟಕ್ಕೆ ಸಿಲುಕಿದ ಉದಾಹರಣೆ ಇದೆ. ಬಾಲಿವುಡ್ ನಟಿ ಶ್ರದ್ಧಾ ಕಪೂರ್ (Shraddha Kapoor) ಅವರ ಸಹೋದರ ಸಿದ್ಧಾಂತ್ ಕಪೂರ್ ಅವರ ಕೊರಳಿಗೂ ಈ ಕಳಂಕ ಸುತ್ತಿಕೊಂಡಿದೆ. ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಡ್ರಗ್ಸ್ ಪಾರ್ಟಿ (Drugs Party) ಮಾಡಿದ ಆರೋಪ ಅವರ ಮೇಲಿದೆ. ಈ ಪ್ರಕರಣದಲ್ಲಿ ಅವರಿಗೆ ಇನ್ನಷ್ಟು ಸಂಕಷ್ಟ ಹೆಚ್ಚಬಹುದು. ಇಂದು (ಜುಲೈ 20) ಸಿದ್ಧಾಂತ್ ಕಪೂರ್ಗೆ ಪೊಲೀಸರು ನೋಟಿಸ್ ನೀಡುವ ಸಾಧ್ಯತೆ ಇದೆ. ಒಂದು ವಾರದಲ್ಲಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಬಹುದು ಎನ್ನಲಾಗುತ್ತಿದೆ. ಮೆಡಿಕಲ್ ಟೆಸ್ಟ್ನಲ್ಲಿ ಸಿದ್ಧಾಂತ್ ಕಪೂರ್ (Siddhanth Kapoor) ಡ್ರಗ್ಸ್ ಸೇವಿಸಿದ್ದು ಸಾಬೀತಾಗಿತ್ತು. ‘ಯಾರೋ ನೀರಿನಲ್ಲಿ ಬೆರೆಸಿ ಕೊಟ್ಟಿರಬಹುದು’ ಎಂದು ಅವರು ಜಾರಿಕೊಂಡಿದ್ದರು. ಈ ಕುರಿತು ಹಲಸೂರು ಪೊಲೀಸರು ವಿಚಾರಣೆ ನಡೆಸಲಿದ್ದಾರೆ.
ಸಿದ್ಧಾಂತ್ ಕಪೂರ್ ಅವರು ಬೆಂಗಳೂರಿನಲ್ಲಿ ಹಲವು ಸ್ನೇಹಿತರನ್ನು ಹೊಂದಿದ್ದಾರೆ. ಇಲ್ಲಿ ನಡೆಯುವ ಐಷಾರಾಮಿ ಪಾರ್ಟಿಗಳಲ್ಲಿ ಅವರು ಅನೇಕ ಬಾರಿ ಡಿಜೆ ಆಗಿ ಕೆಲಸ ಮಾಡಿದ್ದರು. ಹಾಗಾಗಿ ಹಲವು ಸಲ ಅವರು ಬೆಂಗಳೂರಿಗೆ ಬಂದಿದ್ದರು. ಜೂನ್ 12ರಂದು ಕೂಡ ಇದೇ ರೀತಿ ಖಾಸಗಿ ಹೋಟೆಲ್ನಲ್ಲಿ ಪಾರ್ಟಿ ನಡೆಯುತ್ತಿತ್ತು. ಖಚಿತ ಮಾಹಿತಿ ಆಧರಿಸಿ ದಾಳಿ ಮಾಡಿದ ಪೊಲೀಸರು ಅನೇಕರನ್ನು ಬಂಧಿಸಿದ್ದರು.
ಸಿದ್ಧಾಂತ್ ಕಪೂರ್ ಅವರ ತಂಗಿ ಶ್ರದ್ಧಾ ಕಪೂರ್ ಅವರು ಬಾಲಿವುಡ್ನಲ್ಲಿ ಸ್ಟಾರ್ ನಟಿಯಾಗಿ ಮಿಂಚುತ್ತಿದ್ದಾರೆ. ಈ ಹಿಂದೆ ಅವರು ಕೂಡ ಎನ್ಸಿಬಿ ಕಚೇರಿಯ ಮೆಟ್ಟಿಲು ಹತ್ತಿದ್ದರು. ಸುಶಾಂತ್ ಸಿಂಗ್ ರಜಪೂತ್ ಸಾವಿನ ತನಿಖೆಯ ವೇಳೆ ಬಾಲಿವುಡ್ ಡ್ರಗ್ಸ್ ಕೇಸ್ ಪುರಾಣ ಬಯಲಾಗಿತ್ತು. ಆ ಸಂಬಂಧ ಶ್ರದ್ಧಾ ಕಪೂರ್ ಅವರನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. ತಮ್ಮ ಮೇಲಿನ ಆರೋಪಗಳೆಲ್ಲವೂ ಸುಳ್ಳು ಎಂದು ಅವರು ಹೇಳಿದ್ದರು. ಈಗ ಅವರ ಸಹೋದರ ಸಿದ್ಧಾಂತ್ ಕಪೂರ್ ಡ್ರಗ್ಸ್ ಕೇಸ್ನಲ್ಲಿ ಸಿಲುಕಿದ್ದಾರೆ.
ಸಿದ್ಧಾಂತ್ ಕಪೂರ್ ಹಿನ್ನೆಲೆ:
2006ರಲ್ಲಿ ಬಂದ ‘ಭಾಗಂ ಭಾಗ್’ ಚಿತ್ರಕ್ಕೆ ಸಿದ್ಧಾಂತ್ ಕಪೂರ್ ಸಹಾಯಕ ನಿರ್ದೇಶಕನಾಗಿದ್ದರು. ‘ಚುಪ್ ಚುಪ್ಕೇ’, ‘ಭೂಲ್ ಭುಲಯ್ಯ’, ‘ಡೋಲ್’ ಮುಂತಾದ ಸಿನಿಮಾಗಳಿಗೂ ಅವರು ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದರು. ನಟನಾಗಿಯೂ ಸಿದ್ಧಾಂತ್ ಕಪೂರ್ ಅವರು ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಆದರೆ ದೊಡ್ಡ ಮಟ್ಟದಲ್ಲಿ ಅವರಿಗೆ ಜನಪ್ರಿಯತೆ ಸಿಕ್ಕಿಲ್ಲ. ‘ಹೆಲೋ ಚಾರ್ಲಿ’, ‘ಅಗ್ಲಿ’, ‘ಜಝ್ಬಾ’, ‘ಹಸೀನಾ ಪಾರ್ಕರ್’ ಸೇರಿ ಹಲವು ಸಿನಿಮಾಗಳಲ್ಲಿ ಅವರು ಬಣ್ಣ ಹಚ್ಚಿದ್ದಾರೆ. ವೆಬ್ ಸಿರೀಸ್ ಹಾಗೂ ಮ್ಯೂಸಿಕ್ ವಿಡಿಯೋದಲ್ಲೂ ಅವರು ಕಾಣಿಸಿಕೊಂಡಿದ್ದಾರೆ.
Published On - 9:01 am, Wed, 20 July 22