
ನಟ ಅಜಯ್ ದೇವಗನ್ (Ajay Devgn) ಮತ್ತು ನಟಿ ಟಬು ನಡುವೆ ಒಳ್ಳೆಯ ಒಡನಾಟ ಇದೆ. ಹಲವು ವರ್ಷಗಳಿಂದ ಅವರು ಸ್ನೇಹಿತರಾಗಿದ್ದಾರೆ. ಇಂದಿಗೂ ಅವರ ಗೆಳೆತನ ಮುಂದುವರಿದಿದೆ. ಇಬ್ಬರೂ ಜೊತೆಯಾಗಿ ಅನೇಕ ಸಿನಿಮಾಗಳನ್ನು ಮಾಡಿದ್ದಾರೆ. ಅಜಯ್ ದೇವಗನ್ ಅವರು ತಮ್ಮ ನಿರ್ದೇಶನದ ಮತ್ತು ನಿರ್ಮಾಣದ ಸಿನಿಮಾಗಳಲ್ಲಿ ಟುಬುಗೆ ಅವಕಾಶ ನೀಡುತ್ತಾರೆ. ಬಿಡುಗಡೆಗೆ ಸಿದ್ಧವಾಗಿರುವ ‘ಭೋಲಾ’ (Bholaa Movie) ಚಿತ್ರದಲ್ಲೂ ಟಬು (Tabu) ಮತ್ತು ಅಜಯ್ ದೇವಗನ್ ತೆರೆ ಹಂಚಿಕೊಂಡಿದ್ದಾರೆ. ಇವರಿಬ್ಬರು ಹೀಗೆ ಪದೇಪದೇ ಜೊತೆಯಾಗಿ ಸಿನಿಮಾ ಮಾಡುತ್ತಿರುವುದು ಕೆಲವರ ಕಣ್ಣು ಕುಕ್ಕಿದೆ. ಆ ಬಗ್ಗೆ ನೇರವಾಗಿ ಪ್ರಶ್ನೆ ಎದುರಾಗಿದ್ದು, ಅಜಯ್ ದೇವಗನ್ ಉತ್ತರ ನೀಡಿದ್ದಾರೆ.
ಮಾರ್ಚ್ 30ರಂದು ‘ಭೋಲಾ’ ಸಿನಿಮಾ ರಿಲೀಸ್ ಆಗಲಿದೆ. ಇದರ ಪ್ರಚಾರದ ಸಲುವಾಗಿ ಅಜಯ್ ದೇವಗನ್ ಅವರು ಅನೇಕ ಮಾಧ್ಯಮಗಳಿಗೆ ಸಂದರ್ಶನಗಳನ್ನು ನೀಡುತ್ತಿದ್ದಾರೆ. ಈ ನಡುವೆ ಅವರು ಟ್ವಿಟರ್ನಲ್ಲಿ ಅಭಿಮಾನಿಗಳ ಜೊತೆ ನೇರವಾಗಿ ಪ್ರಶ್ನೋತ್ತರ ನಡೆಸಿದ್ದಾರೆ. ಆಗ ವ್ಯಕ್ತಿಯೊಬ್ಬರು ಟಬು ಬಗ್ಗೆ ಪ್ರಶ್ನೆ ಎತ್ತಿದ್ದಾರೆ. ‘ನೀವು ಎಲ್ಲ ಸಿನಿಮಾಗಳನ್ನು ಟಬು ಜೊತೆ ಮಾಡುತ್ತೀರಿ. ಅದಕ್ಕೆ ಏನಾದರೂ ನಿರ್ದಿಷ್ಟ ಕಾರಣ ಇದೆಯೇ’ ಎಂಬ ಪ್ರಶ್ನೆ ಎದುರಾಗಿದೆ.
ಈ ಪ್ರಶ್ನೆಯನ್ನು ಅಜಯ್ ದೇವಗನ್ ಅವರು ತುಂಬ ಕೂಲ್ ಆಗಿ ಸ್ವೀಕರಿಸಿದ್ದಾರೆ. ‘ಟಬು ಅವರ ಡೇಟ್ಸ್ ಸಿಕ್ಕಿದೆ’ ಎಂದಷ್ಟೇ ಅವರು ಉತ್ತರಿಸಿದ್ದಾರೆ. ಈ ಮೊದಲು ‘ದೃಶ್ಯಂ’, ‘ದೃಶ್ಯಂ 2’, ‘ಗೋಲ್ಮಾಲ್ ಅಗೇನ್’, ‘ದೇ ದೇ ಪ್ಯಾರ್ ದೇ’ ಮುಂತಾದ ಸಿನಿಮಾಗಳಲ್ಲೂ ಅಜಯ್ ದೇವಗನ್ ಮತ್ತು ಟಬು ಜೊತೆಯಾಗಿ ನಟಿಸಿದ್ದರು.
ಇದನ್ನೂ ಓದಿ: Bollywood Remake: ರಿಮೇಕ್ ಚಿತ್ರಗಳಿಗಿಲ್ಲ ಉಳಿಗಾಲ; ಅಜಯ್ ದೇವಗನ್, ಸಲ್ಮಾನ್ ಖಾನ್ಗೆ ಕಾದಿದೆಯಾ ಸೋಲು?
‘ಭೋಲಾ’ ಚಿತ್ರದ ಟ್ರೇಲರ್ ಬಿಡುಗಡೆಯಾಗಿ ಗಮನ ಸೆಳೆಯುತ್ತಿದೆ. ಇದು ತಮಿಳಿನ ‘ಕೈದಿ’ ಸಿನಿಮಾದ ಹಿಂದಿ ರಿಮೇಕ್. ಆದರೆ ಹಿಂದಿಯಲ್ಲಿ ಈ ಚಿತ್ರ 3ಡಿ ರೂಪದಲ್ಲಿ ಬಿಡುಗಡೆ ಆಗಲಿದೆ ಎಂಬುದು ವಿಶೇಷ. ಈ ಚಿತ್ರಕ್ಕೆ ಸ್ವತಃ ಅಜಯ್ ದೇವಗನ್ ಅವರು ನಿರ್ದೇಶನ ಮಾಡಿದ್ದಾರೆ. ನಿರ್ಮಾಣ ಕೂಡ ಅವರದ್ದೇ.
ಇದನ್ನೂ ಓದಿ: ‘ಭೋಲಾ’ ಚಿತ್ರದ ಟ್ರೇಲರ್ ರಿಲೀಸ್; ‘ಕೈದಿ’ ಚಿತ್ರಕ್ಕಿಂತ ಭಿನ್ನವಾಗಿದೆಯೇ ಅಜಯ್ ದೇವಗನ್ ಸಿನಿಮಾ?
ಇತ್ತೀಚೆಗೆ ಬಾಲಿವುಡ್ನಲ್ಲಿ ಕೆಲವು ರಿಮೇಕ್ ಸಿನಿಮಾಗಳು ಸೋತಿವೆ. ‘ಶೆಹಜಾದಾ’ ಮತ್ತು ‘ಸೆಲ್ಫೀ’ ಚಿತ್ರಗಳೇ ಅದಕ್ಕೆ ಉದಾಹರಣೆ. ‘ಭೋಲಾ’ ಕೂಡ ರಿಮೇಕ್ ಸಿನಿಮಾ ಆದ್ದರಿಂದ ಇದರ ಬಾಕ್ಸ್ ಆಫೀಸ್ ಭವಿಷ್ಯದ ಬಗ್ಗೆ ಕೆಲವರಿಗೆ ಅನುಮಾನ ಇದೆ. ಆ ಕುರಿತಾಗಿಯೂ ಕೆಲವರು ಪ್ರಶ್ನಿಸಿದ್ದಾರೆ. ಅದಕ್ಕೆ ಪ್ರತಿಕ್ರಿಯೆ ನೀಡಿರುವ ಅಜಯ್ ದೇವಗನ್ ಅವರು, ‘ದುಡ್ಡಿನ ಬಗ್ಗೆ ಗೊತ್ತಿಲ್ಲ. ಆದರೆ ನಿಮ್ಮ ಪ್ರೀತಿ ಭರ್ಜರಿಯಾಗಿ ಸಿಗಲಿದೆ ಎಂಬ ನಂಬಿಕೆ ಇದೆ’ ಎಂದಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.