Bollywood Remake: ರಿಮೇಕ್ ಚಿತ್ರಗಳಿಗಿಲ್ಲ ಉಳಿಗಾಲ; ಅಜಯ್ ದೇವಗನ್, ಸಲ್ಮಾನ್ ಖಾನ್ಗೆ ಕಾದಿದೆಯಾ ಸೋಲು?
Bholaa Movie | Kisi Ka Bhai Kisi Ka Jhan: ಬಾಲಿವುಡ್ ಮಂದಿಗೆ ರಿಮೇಕ್ನಿಂದ ಲಾಭ ಆಗುತ್ತಿಲ್ಲ. ಹಾಗಿದ್ದರೂ ಕೂಡ ಮತ್ತೆ ಮತ್ತೆ ರಿಮೇಕ್ ಮಾಡುವ ಪ್ರಯತ್ನವನ್ನು ಬಿ-ಟೌನ್ ನಟರು ಮುಂದುವರಿಸಿದ್ದಾರೆ.
ಒಂದು ಭಾಷೆಯಲ್ಲಿ ಸೂಪರ್ ಹಿಟ್ ಆದ ಸಿನಿಮಾವನ್ನು ಮತ್ತೊಂದು ಭಾಷೆಯಲ್ಲಿ ರಿಮೇಕ್ (Remake) ಮಾಡುವ ಪದ್ಧತಿ ಬಹಳ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಆದರೆ, ಒಟಿಟಿ ಯುಗ ಆರಂಭ ಆದಾಗಿನಿಂದ ರಿಮೇಕ್ ಚಿತ್ರಗಳ ಹವಾ ಕಮ್ಮಿ ಆಗಿದೆ. ಅಲ್ಲೊಂದು ಇಲ್ಲೊಂದು ರಿಮೇಕ್ ಪ್ರಯತ್ನ ಕೈ ಹಿಡಿದರೂ ಕೂಡ ಬಹುಪಾಲು ಮಂದಿಗೆ ಸೋಲು ಎದುರಾಗುತ್ತಿದೆ. ಆದರೂ ಕೂಡ ಬಾಲಿವುಡ್ (Bollywood) ಮಂದಿಗೆ ರಿಮೇಕ್ ಗೀಳು ಕಮ್ಮಿ ಆಗಿಲ್ಲ. ದಕ್ಷಿಣ ಭಾರತದಲ್ಲಿ ಹಿಟ್ ಆದ ಚಿತ್ರಗಳನ್ನು ಹಿಂದಿಗೆ ರಿಮೇಕ್ ಮಾಡುವ ಟ್ರೆಂಡ್ ಜೋರಾಗಿದೆ. ಈ ವರ್ಷ ಬಿಡುಗಡೆ ಆದ ‘ಶೆಹಜಾದಾ’ ಚಿತ್ರ ಹೀನಾಯವಾಗಿ ಸೋತಿತು. ಅದು ತೆಲುಗಿನ ‘ಅಲಾ ವೈಕುಂಠಪುರಮುಲೋ’ ಚಿತ್ರದ ಹಿಂದಿ ರಿಮೇಕ್. ಈಗ ಸಲ್ಮಾನ್ ಖಾನ್ (Salman Khan) ಮತ್ತು ಅಜಯ್ ದೇವಗನ್ ಕೂಡ ರಿಮೇಕ್ನ ಹಿಂದೆ ಬಿದ್ದಿದ್ದಾರೆ. ಅವರಿಗೆ ಭವಿಷ್ಯದಲ್ಲಿ ಸೋಲು ಕಾದಿದೆಯೇ ಎಂಬ ಅನುಮಾನ ವ್ಯಕ್ತವಾಗುತ್ತಿದೆ.
ತಮಿಳಿನಲ್ಲಿ ಕಾರ್ತಿ ನಟಿಸಿದ ಸೂಪರ್ ಹಿಟ್ ಚಿತ್ರ ‘ಕೈದಿ’. ಲೋಕೇಶ್ ಕನಗರಾಜ್ ನಿರ್ದೇಶನ ಮಾಡಿದ್ದ ಆ ಚಿತ್ರವನ್ನು ಈಗ ಅಜಯ್ ದೇವಗನ್ ಅವರು ಹಿಂದಿಯಲ್ಲಿ ರಿಮೇಕ್ ಮಾಡಿದ್ದಾರೆ. ಅದಕ್ಕೆ ‘ಭೋಲಾ’ ಎಂದು ಶೀರ್ಷಿಕೆ ಇಡಲಾಗಿದೆ. ಈ ಸಿನಿಮಾ ಮಾರ್ಚ್ 30ರಂದು ಬಿಡುಗಡೆ ಆಗಲಿದೆ. 3ಡಿ ಅವತರಣಿಕೆಯಲ್ಲಿ ಮೂಡಿಬಂದಿರುವ ಈ ಸಿನಿಮಾಗೆ ಸ್ವತಃ ಅಜಯ್ ದೇವಗನ್ ನಿರ್ದೇಶನ ಮಾಡಿದ್ದಾರೆ.
ಇದನ್ನೂ ಓದಿ: ‘ಭೋಲಾ’ ರಿಲೀಸ್ ಡೇಟ್ ಅನೌನ್ಸ್; ಇದು ಸೌತ್ ಚಿತ್ರದ ರಿಮೇಕ್ ಅಂತ ಹೆಮ್ಮೆಯಿಂದ ಹೇಳಿದ ಅಜಯ್ ದೇವಗನ್
ಸಲ್ಮಾನ್ ಖಾನ್ ಅವರಿಗೂ ಸೌತ್ ಸಿನಿಮಾಗಳಿಗೂ ಎಲ್ಲಿಲ್ಲದ ನಂಟು. ಈಗಾಗಲೇ ಅನೇಕ ಚಿತ್ರಗಳನ್ನು ರಿಮೇಕ್ ಮಾಡಿ ಅವರು ಗೆದ್ದಿದ್ದಾರೆ. ಆದರೆ ಬದಲಾದ ಈ ಕಾಲಘಟ್ಟದಲ್ಲಿ ರಿಮೇಕ್ ಸಿನಿಮಾಗೆ ಗೆಲುವು ಸಿಗುವುದು ವಿರಳ. ಅಜಿತ್ ಕುಮಾರ್ ನಟನೆಯ ‘ವೀರಂ’ ಚಿತ್ರವನ್ನು ಹಿಂದಿಯಲ್ಲಿ ‘ಕಿಸಿ ಕಾ ಭಾಯ್ ಕಿಸಿ ಕಿ ಜಾನ್’ ಶೀರ್ಷಿಕೆಯಲ್ಲಿ ಸಲ್ಲು ರಿಮೇಕ್ ಮಾಡುತ್ತಿದ್ದಾರೆ. ಈ ಸಿನಿಮಾಗೆ ಪೂಜಾ ಹೆಗ್ಡೆ ನಾಯಕಿ. ಈ ವರ್ಷ ಈದ್ ಪ್ರಯುಕ್ತ ಈ ಚಿತ್ರ ರಿಲೀಸ್ ಆಗಲಿದೆ. ಈ ರಿಮೇಕ್ ಸಿನಿಮಾವನ್ನು ಜನರು ಒಪ್ಪಿಕೊಳ್ಳುತ್ತಾರೋ ಇಲ್ಲವೋ ಎಂಬುದನ್ನು ಕಾದು ನೋಡಬೇಕು.
ಇದನ್ನೂ ಓದಿ: ‘ಹೃದಯಂ’ ರಿಮೇಕ್ನಲ್ಲಿ ಸೈಫ್ ಅಲಿ ಖಾನ್ ಮಗ ಇಬ್ರಾಹಿಂ? ಲಾಂಚ್ ಮಾಡ್ತಾರೆ ಕರಣ್ ಜೋಹರ್
ಸೋಲು ಅನುಭವಿಸಿದ ‘ಸೆಲ್ಫೀ’:
ಅಕ್ಷಯ್ ಕುಮಾರ್ ನಟನೆಯ ‘ಸೆಲ್ಫೀ’ ಸಿನಿಮಾ ಫೆಬ್ರವರಿ 24ರಂದು ರಿಲೀಸ್ ಆಯಿತು. ಮಲಯಾಳಂನ ‘ಡ್ರೈವಿಂಗ್ ಲೈಸೆನ್ಸ್’ ಸಿನಿಮಾದ ರಿಮೇಕ್ ಆಗಿದ್ದ ಈ ಚಿತ್ರ ಪ್ರೇಕ್ಷಕರಿಗೆ ಇಷ್ಟ ಆಗಿಲ್ಲ. ಇತ್ತೀಚಿನ ವರ್ಷಗಳಲ್ಲಿ ಅಕ್ಷಯ್ ಕುಮಾರ್ ಅವರ ವೃತ್ತಿಜೀವನದಲ್ಲಿ ಅತಿ ಕಳಪೆ ಕಲೆಕ್ಷನ್ ಮಾಡಿದ ಸಿನಿಮಾ ಇದಾಗಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.