ಸೌತ್ ಚಿತ್ರಗಳ ಎದುರು ಬಾಲಿವುಡ್ ಎಡವಿದ್ದು ಎಲ್ಲಿ? ಉತ್ತರ ಹುಡುಕಿದ ‘ಕೆಜಿಎಫ್ 2’ ಅಧೀರ ಸಂಜಯ್ ದತ್
KGF Chapter 2 | Sanjay Dutt: ದಕ್ಷಿಣ ಭಾರತದ ಚಿತ್ರರಂಗ ಹಾಗೂ ಬಾಲಿವುಡ್ ನಡುವೆ ಏನು ವ್ಯತ್ಯಾಸ ಇದೆ ಎಂಬುದನ್ನು ಸಂಜಯ್ ದತ್ ವಿವರಿಸಿದ್ದಾರೆ. ಹಿಂದಿ ಚಿತ್ರಗಳ ಸೋಲಿಗೆ ಅವರು ಕಾರಣ ಹುಡುಕಿದ್ದಾರೆ.
ದಕ್ಷಿಣ ಭಾರತದ ಸಿನಿಮಾಗಳ ಅಬ್ಬರ ಕಂಡು ಬಾಲಿವುಡ್ (Bollywood) ಅಕ್ಷರಶಃ ಬೆರಗಾಗಿದೆ. ಕನ್ನಡ, ತಮಿಳು, ತೆಲುಗು ಸಿನಿಮಾಗಳು ಪ್ಯಾನ್ ಇಂಡಿಯಾ ಮಟ್ಟದಲ್ಲಿ ನಿರ್ಮಾಣವಾಗಿ, ನೂರಾರು ಕೋಟಿ ರೂಪಾಯಿ ಕಮಾಯಿ ಮಾಡುತ್ತಿವೆ. ಇತ್ತೀಚೆಗೆ ಬಿಡುಗಡೆ ಆದ ‘ಕೆಜಿಎಫ್: ಚಾಪ್ಟರ್ 2’ ಸಿನಿಮಾ ನಿರೀಕ್ಷೆಗೂ ಮೀರಿ ಕಲೆಕ್ಷನ್ ಮಾಡುತ್ತಿದೆ. ನಟ ಯಶ್ ಮತ್ತು ನಿರ್ದೇಶಕ ಪ್ರಶಾಂತ್ ನೀಲ್ ಅವರನ್ನು ಪರಭಾಷೆ ಮಂದಿ ಕೂಡ ಶ್ಲಾಘಿಸುತ್ತಿದ್ದಾರೆ. ‘ಕೆಜಿಎಫ್ 2’, ‘ಪುಷ್ಪ’, ‘ಆರ್ಆರ್ಆರ್’ ಮುಂತಾದ ಸಿನಿಮಾಗಳ ಆರ್ಭಟದ ಎದುರು ಹಿಂದಿ ಚಿತ್ರರಂಗ ಮಂಕಾಗಿದೆ. ಇದನ್ನು ಬೇರೆ ಬೇರೆ ನಟರು ಬೇರೆ ಬೇರೆ ರೀತಿಯಲ್ಲಿ ಅರ್ಥೈಸುತ್ತಿದ್ದಾರೆ. ಬಾಲಿವುಡ್ ಸ್ಟಾರ್ ಕಲಾವಿದ ಸಂಜಯ್ ದತ್ (Sanjay Dutt) ಅವರು ಕೂಡ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಸೌತ್ ಸಿನಿಮಾಗಳ ಎದುರು ಬಾಲಿವುಡ್ ಎಡವಲು ಕಾರಣ ಏನು ಎಂಬುದನ್ನು ಅವರು ವಿಶ್ಲೇಷಿಸಿದ್ದಾರೆ. ‘ಕೆಜಿಎಫ್: ಚಾಪ್ಟರ್ 2’ (KGF Chapter 2) ಸಿನಿಮಾದಲ್ಲಿ ಮಾಡಿರುವ ಅಧೀರ ಎಂಬ ಪಾತ್ರದಿಂದ ಸಂಜಯ್ ದತ್ ಅವರಿಗೆ ಭರ್ಜರಿ ಗೆಲುವು ಸಿಕ್ಕಿದೆ. ಅನೇಕ ಮಾಧ್ಯಮಗಳಿಗೆ ಅವರು ಸಂದರ್ಶನ ನೀಡುತ್ತಿದ್ದಾರೆ.
ದಕ್ಷಿಣ ಭಾರತದ ಚಿತ್ರರಂಗ ಮತ್ತು ಬಾಲಿವುಡ್ ಇಂಡಸ್ಟ್ರೀ ನಡುವೆ ಏನು ವ್ಯತ್ಯಾಸ ಇದೆ ಎಂಬುದನ್ನು ಸಂಜಯ್ ದತ್ ವಿವರಿಸಿದ್ದಾರೆ. ಹಿಂದಿ ಸಿನಿಮಾಗಳ ನಿರ್ಮಾಣದ ಪದ್ದತಿಯಲ್ಲೇ ಸಮಸ್ಯೆ ಇದೆ ಎಂದು ಅವರು ಹೇಳಿದ್ದಾರೆ. ‘ಟೈಮ್ಸ್ ಆಫ್ ಇಂಡಿಯಾ’ಗೆ ನೀಡಿದ ಸಂದರ್ಶನದಲ್ಲಿ ಅವರು ಈ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
‘ನಿಜಜೀವನಕ್ಕಿಂತಲೂ ದೊಡ್ಡದಾದ ಹೀರೋಯಿಸಂ ಅನ್ನು ಬಾಲಿವುಡ್ ಮರೆತಿದೆ ಎಂದು ನನಗೆ ಅನಿಸುತ್ತಿದೆ. ದಕ್ಷಿಣ ಭಾರತದ ಸಿನಿಮಾರಂಗ ಅದನ್ನು ಮರೆತಿಲ್ಲ. ಹಾಗಂತ ರೊಮ್ಯಾಂಟಿಕ್ ಕಾಮಿಡಿ ಶೈಲಿಯ ಸಿನಿಮಾಗಳು ಕೆಟ್ಟದ್ದು ಅಂತ ನಾನು ಹೇಳುತ್ತಿಲ್ಲ. ಉತ್ತರ ಪ್ರದೇಶ, ಬಿಹಾರ, ಝಾರ್ಖಂಡ್, ರಾಜಸ್ತಾನ ಮುಂತಾದ ಕಡೆ ಇರುವ ದೊಡ್ಡ ವರ್ಗದ ಪ್ರೇಕ್ಷಕರನ್ನು ನಾವು ಯಾಕೆ ಮರೆತೆವು? ಹಿಂದಿ ಚಿತ್ರರಂಗದಲ್ಲಿ ಹಳೇ ಟ್ರೆಂಡ್ ಮರಳಲಿದೆ ಎಂಬ ಭರವಸೆ ನನಗಿದೆ. ಮೊದಲೆಲ್ಲ ಪ್ರತ್ಯೇಕ ನಿರ್ಮಾಪಕರು ಇರುತ್ತಿದ್ದರು. ನಂತರ ಸಿನಿಮಾ ನಿರ್ಮಾಣದಲ್ಲಿ ಕಾರ್ಪೊರೇಟ್ ಪದ್ದತಿ ಬಂತು. ಹಾಗೆ ಆಗಿದ್ದು ಒಳ್ಳೆಯದೇ. ಆದರೆ ಕಾರ್ಪೊರೇಟ್ ಪದ್ದತಿ ಎಂಬುದು ನಮ್ಮ ಸಿನಿಮಾಗಳ ಅಭಿರುಚಿಯಲ್ಲಿ ಮಧ್ಯಪ್ರವೇಶ ಮಾಡಬಾರದು’ ಎಂದು ಸಂಜಯ್ ದತ್ ಹೇಳಿದ್ದಾರೆ.
‘ಉದಾಹರಣೆಗೆ ಹೇಳುವುದಾದರೆ.. ತಮ್ಮ ಮೇಲೆ ನಂಬಿಕೆ ಇರುವ ನಿರ್ಮಾಪಕರು ರಾಜಮೌಳಿ ಆಯ್ಕೆ ಮಾಡಿಕೊಳ್ಳುತ್ತಾರೆ. ಈ ಮೊದಲು ನಮ್ಮಲ್ಲೂ ಕೂಡ ಅಂಥ ನಿರ್ಮಾಪಕರು ಇದ್ದರು. ಯಶ್ ಚೋಪ್ರಾ, ಗುಲ್ಷನ್ ರೈ, ಸುಭಾಷ್ ಘಾಯ್, ಯಶ್ ಜೋಹರ್ ಮುಂತಾದವರು ನಿರ್ಮಿಸಿದ ಸಿನಿಮಾಗಳನ್ನು ಗಮನಿಸಬಹುದು. ದಕ್ಷಿಣದವರು ಪೇಪರ್ನಲ್ಲಿ ಸ್ಕ್ರಿಪ್ಟ್ ನೋಡುತ್ತಾರೆ, ನಾವು ಲಾಭದ ಲೆಕ್ಕಾಚಾರ ನೋಡುತ್ತೇವೆ’ ಎಂದು ಸಂಜಯ್ ದತ್ ಹೇಳಿದ್ದಾರೆ.
ಇದನ್ನೂ ಓದಿ:
ಡ್ರಗ್ಸ್ ಮತ್ತು ಹುಡುಗಿ ವಿಷಯದಲ್ಲಿ ಸಂಜಯ್ ದತ್ ತಿಳಿದುಕೊಂಡಿದ್ದೇ ಬೇರೆ: ಎಲ್ಲವನ್ನೂ ಬಾಯ್ಬಿಟ್ಟ ಅಧೀರ
ಶೂಟಿಂಗ್ ಸೆಟ್ನಲ್ಲಿ ಊಟ ಮಾಡಿ ಬೈಯಿಸಿಕೊಂಡಿದ್ದ ಸಂಜಯ್ ದತ್; ‘ಕೆಜಿಎಫ್’ ಅಧೀರನ ಕಷ್ಟದ ಹಾದಿ