ಶೂಟಿಂಗ್​ ಸೆಟ್​ನಲ್ಲಿ ಊಟ ಮಾಡಿ ಬೈಯಿಸಿಕೊಂಡಿದ್ದ ಸಂಜಯ್​ ದತ್​; ‘ಕೆಜಿಎಫ್​’ ಅಧೀರನ ಕಷ್ಟದ ಹಾದಿ

ಸಂಜಯ್​ ದತ್​ ನಟಿಸಿದ ಮೊದಲ ಸಿನಿಮಾ ‘ರಾಕಿ’. ಆ ಚಿತ್ರವನ್ನು ಅವರ ತಂದೆ ಸುನಿಲ್​ ದತ್​ ನಿರ್ದೇಶಿಸಿದ್ದರು. ಆದರೂ ತಮ್ಮ ಮಗನಿಗೆ ಅವರು ವಿಐಪಿ ಟ್ರೀಟ್​ಮೆಂಟ್​ ನೀಡಿರಲಿಲ್ಲ. ಹಸಿವಾದಾಗ ಊಟ ಮಾಡಲು ಕೂಡ ಸಂಜಯ್​ ದತ್​ಗೆ ಅವಕಾಶ ಇರಲಿಲ್ಲ!

ಶೂಟಿಂಗ್​ ಸೆಟ್​ನಲ್ಲಿ ಊಟ ಮಾಡಿ ಬೈಯಿಸಿಕೊಂಡಿದ್ದ ಸಂಜಯ್​ ದತ್​; ‘ಕೆಜಿಎಫ್​’ ಅಧೀರನ ಕಷ್ಟದ ಹಾದಿ
ಸಂಜಯ್ ದತ್

ಬಾಲಿವುಡ್​ನಲ್ಲಿ ನಟ ಸಂಜಯ್​ ದತ್​ ಸೂಪರ್​ ಸ್ಟಾರ್​. ಅವರ ಕಾಲ್​ಶೀಟ್​ ಸಖತ್ ಡಿಮ್ಯಾಂಡ್​ ಇದೆ. ‘ಕೆಜಿಎಫ್​: ಚಾಪ್ಟರ್​ 2’ ಮೂಲಕ ಅವರು ಕನ್ನಡ ಚಿತ್ರರಂಗಕ್ಕೂ ಕಾಲಿಡುತ್ತಿದ್ದಾರೆ. ಈ ಸಿನಿಮಾದಲ್ಲಿ ಅವರು ‘ಅಧೀರ’ ಎಂಬ ಖಡಕ್​ ವಿಲನ್​ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಬಾಲಿವುಡ್​ನಲ್ಲಿ ಅವರು ಅನೇಕ ಹಿಟ್​ ಚಿತ್ರಗಳನ್ನು ನೀಡಿದ್ದಾರೆ. ಆದರೆ ಅವರ ಹಾದಿ ಅಷ್ಟು ಸುಲಭವಾಗಿ ಇರಲಿಲ್ಲ. ಅವರ ತಂದೆ ಸುನಿಲ್ ದತ್​ ಹಿಂದಿ ಚಿತ್ರರಂಗದಲ್ಲಿ ಸ್ಟಾರ್​ ನಟನಾಗಿದ್ದರು. ಹಾಗಿದ್ದರೂ ಕೂಡ ಅವರು ತಮ್ಮ ಮಗನಿಗೆ ಮೊದಲ ಸಿನಿಮಾದ ಸೆಟ್​ನಲ್ಲಿ ಐಷಾರಾಮಿ ಸೌಲಭ್ಯಗಳನ್ನು ನೀಡಿರಲಿಲ್ಲ. ಆ ವಿಚಾರದ ಬಗ್ಗೆ ಇತ್ತೀಚೆಗೆ ಸಂಜಯ್​ ದತ್​ ಬಾಯಿ ಬಿಟ್ಟಿದ್ದಾರೆ. ತಮ್ಮ ಮೊದಲ ಸಿನಿಮಾದ ಶೂಟಿಂಗ್​ ವೇಳೆ ನಡೆದ ಒಂದು ಘಟನೆಯನ್ನು ಸಂಜಯ್​ ದತ್​ ನೆನಪಿಸಿಕೊಂಡಿದ್ದಾರೆ.

ಸಂಜಯ್​ ದತ್​ ನಟಿಸಿದ ಮೊದಲ ಸಿನಿಮಾ ‘ರಾಕಿ’. ಆ ಚಿತ್ರವನ್ನು ಅವರ ತಂದೆ ಸುನಿಲ್​ ದತ್​ ನಿರ್ದೇಶಿಸಿದ್ದರು. ಆದರೂ ತಮ್ಮ ಮಗನಿಗೆ ಅವರು ವಿಐಪಿ ಟ್ರೀಟ್​ಮೆಂಟ್​ ನೀಡಿರಲಿಲ್ಲ. ಒಬ್ಬ ಹೊಸ ಹೀರೋ ಕಷ್ಟಪಡುವ ರೀತಿಯಲ್ಲೇ ಸಂಜಯ್​ ದತ್ ಕೂಡ ಶ್ರಮಿಸಬೇಕಿತ್ತು. ಎಷ್ಟರಮಟ್ಟಿಗೆಂದರೆ, ಹಸಿವಾದಾಗ ಊಟ ಮಾಡಲು ಕೂಡ ಅವರಿಗೆ ಅವಕಾಶ ಇರಲಿಲ್ಲ!

‘ನಮ್ಮ ಅಪ್ಪನೇ ನಿರ್ದೇಶನ ಮಾಡುತ್ತಿದ್ದರಿಂದ ‘ರಾಕಿ’ ಸಿನಿಮಾದಲ್ಲಿ ಕೆಲಸ ಮಾಡುವುದು ನನಗೆ ತುಂಬ ಕಷ್ಟವಾಗಿತ್ತು. ಆಗ ಮಧ್ಯಾಹ್ನ ಊಟದ ಬ್ರೇಕ್​ ಇರುತ್ತಿರಲಿಲ್ಲ. ಕಡಿಮೆ ಸಮಯ ತೆಗೆದುಕೊಂಡು ಏನಾದರೂ ತಿಂದು ಬರಬಹುದಷ್ಟೇ ಎಂದು ಸಹಾಯಕ ನಿರ್ದೇಶಕರೊಬ್ಬರು ನನಗೆ ಹೇಳಿದರು. ಹಾಗಾಗಿ ನಾನು ತಿನ್ನಲು ಕುಳಿತೆ. ಅದೇ ಸಮುದಲ್ಲಿ ಅಪ್ಪ ಶೂಟಿಂಗ್​ಗೆ ರೆಡಿ ಆಗಿದ್ದರು. ನಾನು ಸ್ಥಳದಲ್ಲಿ ಇಲ್ಲದಿರುವುದನ್ನು ಗಮನಿಸಿದ ಅವರು ಕೂಡಲೇ ನನ್ನನ್ನು ಕರೆಸಿದರು. ಊಟಕ್ಕೆ ಬ್ರೇಕ್​ ತೆಗೆದುಕೊಂಡಿದ್ದಕ್ಕಾಗಿ ಹಿಗ್ಗಾಮುಗ್ಗಾ ಬೈಯ್ದರು’ ಎಂದು ಆ ದಿನಗಳನ್ನು ನೆನಪಿಸಿಕೊಂಡಿದ್ದಾರೆ ಸಂಜಯ್​ ದತ್​.

‘ನಿನಗೆ ಊಟಕ್ಕೆ ಹೋಗು ಅಂತ ಹೇಳಿದ್ದು ಯಾರು? ನಾನು ಬ್ರೇಕ್​ ಅಂತ ಹೇಳಿದ್ನಾ? ನಿರ್ದೇಶಕರ ಮಗ ಅಂತ ಈ ರೀತಿ ಮಾಡ್ತಾ ಇದೀಯಾ’ ಎಂದು ಸುನಿಲ್​ ಕೂಗಾಡಿದ್ದರಂತೆ. ‘ಶೂಟಿಂಗ್​ ಸೆಟ್​ನಲ್ಲಿ ಅಪ್ಪನನ್ನು ನಾನು ಸರ್​ ಅಂತ ಕರೆಯುತ್ತಿದ್ದೆ’ ಎಂದು ಕೂಡ ಸಂಜಯ್​ ದತ್​ ಹೇಳಿದ್ದಾರೆ. ಇಷ್ಟೆಲ್ಲ ಕಷ್ಟಪಟ್ಟು ಅವರು ಮಾಡಿದ ಮೊದಲ ಸಿನಿಮಾ ಸೂಪರ್​ ಹಿಟ್​ ಆಯಿತು. ಆದರೆ ಆ ಚಿತ್ರವನ್ನು ನೋಡಲು ಸಂಜಯ್​ ದತ್​ ತಾಯಿ ನರ್ಗೀಸ್​ ದತ್​ ಇರಲಿಲ್ಲ. ಸಿನಿಮಾ ಬಿಡುಗಡೆ ಆಗುವುದಕ್ಕೂ ಕೆಲವೇ ದಿನಗಳ ಮುನ್ನ ಅವರು ಕ್ಯಾನ್ಸರ್​ನಿಂದ ನಿಧನರಾದರು. ಆ ಚಿತ್ರದ ಪ್ರೀಮಿಯರ್​ ಪ್ರದರ್ಶನದ ದಿನ ಚಿತ್ರಮಂದಿರದಲ್ಲಿ ನರ್ಗೀಸ್ ದತ್​ಗಾಗಿ ಒಂದು ಸೀಟ್​ ಖಾಲಿ ಬಿಡಲಾಗಿತ್ತು.​

ಇದನ್ನೂ ಓದಿ:

ಬಾಯ್​ಫ್ರೆಂಡ್​ ಕಳೆದುಕೊಂಡಿದ್ದ ಸಂಜಯ್​ ದತ್​ ಪುತ್ರಿಗೆ ಅಭಿಮಾನಿಯ ಪ್ರಪೋಸ್​; ಒಪ್ಪಿಕೊಂಡ್ರಾ ತ್ರಿಶಾಲಾ?

ಕೆಜಿಎಫ್ 2 ಕ್ಲೈಮ್ಯಾಕ್ಸ್ ಶೂಟಿಂಗ್: ಪ್ರಶಾಂತ್ ನೀಲ್ ಬೇಡಿಕೆಗೆ ನೋ ಎಂದ ಸಂಜಯ್ ದತ್

Read Full Article

Click on your DTH Provider to Add TV9 Kannada