ಡ್ರಗ್ಸ್ ಮತ್ತು ಹುಡುಗಿ ವಿಷಯದಲ್ಲಿ ಸಂಜಯ್ ದತ್ ತಿಳಿದುಕೊಂಡಿದ್ದೇ ಬೇರೆ: ಎಲ್ಲವನ್ನೂ ಬಾಯ್ಬಿಟ್ಟ ಅಧೀರ
ಸಂಜಯ್ ದತ್ ಬದುಕಿನ ಕಹಿ ಸತ್ಯಗಳು ರಹಸ್ಯವಾಗಿ ಉಳಿದಿಲ್ಲ. ಡ್ರಗ್ಸ್ ಬಗ್ಗೆ ತಮಗೆ ಇದ್ದ ಭಾವನೆ ಹೇಗಿತ್ತು ಎಂಬುದನ್ನು ಅವರು ಈಗ ವಿವರಿಸಿದ್ದಾರೆ.
ಕಳೆದ 40 ವರ್ಷಗಳಿಂದಲೂ ನಟ ಸಂಜಯ್ ದತ್ (Sanjay Dutt) ಅವರು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಈ ಸುದೀರ್ಘ ಪಯಣದಲ್ಲಿ ಅವರು ಹಲವು ಏಳು-ಬೀಳುಗಳನ್ನು ಕಂಡಿದ್ದಾರೆ. ನೋವು, ಅವಮಾನಗಳನ್ನೂ ಅನುಭವಿಸಿದ್ದಾರೆ. ಹದಿಹರೆಯದಲ್ಲೇ ಅವರು ಮಾದಕ ವ್ಯಸನಿ (Drug Addict) ಆಗಿದ್ದರು ಎಂಬುದು ಲೋಕಕ್ಕೇ ತಿಳಿದ ವಿಚಾರ. ಆದರೆ ನಂತರದ ದಿನಗಳಲ್ಲಿ ಅವರು ಆ ದುಶ್ಚಟದಿಂದ ಹೊರಬಂದರು. ಹೊಸ ಮನುಷ್ಯನಾಗಿ ಬಾಳುವುದು ಅಷ್ಟು ಸುಲಭ ಆಗಿರಲಿಲ್ಲ. ಬದುಕಿನುದ್ದಕ್ಕೂ ಹತ್ತಾರು ಕಷ್ಟಗಳನ್ನು ಎದುರಿಸಿರುವ ಸಂಜಯ್ ದತ್ ಅವರು ಈಗ ಅದೆಲ್ಲವನ್ನೂ ಮೆಲುಕು ಹಾಕುತ್ತಿದ್ದಾರೆ. ‘ಕೆಜಿಎಫ್: ಚಾಪ್ಟರ್ 2’ (KGF 2) ಸಿನಿಮಾದಲ್ಲಿ ಅಧೀರ ಎಂಬ ಪಾತ್ರವನ್ನು ಮಾಡಿರುವ ಅವರಿಗೆ ದೊಡ್ಡ ಗೆಲುವು ಸಿಕ್ಕಿದೆ. ಈ ಸಿನಿಮಾದ ಪ್ರಚಾರದ ಸಲುವಾಗಿ ಮಾಧ್ಯಮಗಳಿಗೆ ಸಂದರ್ಶನ ನೀಡುತ್ತಿರುವ ಅವರು ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ತಾವು ಡ್ರಗ್ಸ್ ಸೇವಿಸುತ್ತಿದ್ದ ದಿನಗಳನ್ನು ಕೂಡ ಮತ್ತೆ ನೆನಪಿಸಿಕೊಂಡಿದ್ದಾರೆ. ಸಂಜಯ್ ದತ್ ಅವರ ಜೀವನದ ಕುರಿತು ‘ಸಂಜು’ ಸಿನಿಮಾ ಮೂಡಿಬಂದಿತ್ತು. ಅದರಲ್ಲಿ ಕೂಡ ಅನೇಕ ಸಂಗತಿಗಳ ಬಗ್ಗೆ ಹೇಳಲಾಗಿತ್ತು.
ಸಂಜಯ್ ದತ್ ಅವರಿಗೆ ನೂರಾರು ಗರ್ಲ್ಫ್ರೆಂಡ್ಸ್ ಇದ್ದರು. ಆದರೆ ಆರಂಭದ ದಿನಗಳಲ್ಲಿ ಸಂಜಯ್ ದತ್ ತುಂಬ ನಾಚಿಕೆ ಪಟ್ಟುಕೊಳ್ಳುತ್ತಿದ್ದರು. ಒಂದು ವೇಳೆ ಡ್ರಗ್ಸ್ ಸೇವಿಸಿದರೆ ನಾಚಿಕೆ ಮಾಯವಾಗಿ ಕೂಲ್ ಆಗಿ ಕಾಣುಬಹುದು ಮತ್ತು ಹುಡುಗಿಯರ ಜೊತೆ ಮಾತನಾಡಬಹುದು ಎಂಬ ತಪ್ಪು ಕಲ್ಪನೆ ಅವರಲ್ಲಿ ಮೂಡಿತ್ತು. ಇತ್ತೀಚೆಗೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಸಂಜಯ್ ದತ್ ಅವರು ಇದನ್ನು ಬಾಯಿ ಬಿಟ್ಟಿದ್ದಾರೆ.
ಡ್ರಗ್ಸ್ ಚಟವನ್ನು ಬಿಟ್ಟು ಬಿಡಲು ಸಂಜಯ್ ದತ್ ಪಟ್ಟಿದ್ದ ಕಷ್ಟ ಕೂಡ ಅಷ್ಟಿಷ್ಟಲ್ಲ. ಅದಕ್ಕಾಗಿ ಅವರು ವಿದೇಶದಲ್ಲಿ ರಿಹ್ಯಾಬ್ ಸೆಂಟರ್ ಸೇರಿಕೊಂಡಿದ್ದರು. ಅಲ್ಲಿಂದ ಮರಳಿದ ಬಳಿಕವೂ ಜನರು ಅವರನ್ನು ‘ಮಾದಕ ವ್ಯಸನಿ’ ಎಂದು ಕರೆಯುವುದು ನಿಲ್ಲಿಸಿರಲಿಲ್ಲ. ಅದು ಅವರಿಗೆ ಬೇಸರ ಮೂಡಿಸಿತ್ತು. ಏನಾದರೂ ಮಾಡಿ ಬದಲಾಗಲೇ ಬೇಕು ಎಂದು ಸಂಜಯ್ ದತ್ ನಿರ್ಧಾರ ಮಾಡಿದರು. ಬಳಿಕ ಬಾಡಿ ಬಿಲ್ಡಿಂಗ್ ಕಡೆಗೆ ಅವರು ಗಮನ ಹರಿಸಿದರು. ಕಟ್ಟುಮಸ್ತಾಗಿ ಬಾಡಿ ಬೆಳೆಸಿಕೊಂಡರು. ‘ಮಾದಕ ವ್ಯಸನಿ’ ಎಂಬ ಹಣೆ ಪಟ್ಟಿ ಕಳಚಿಕೊಳ್ಳಲು ಅವರು ಇಷ್ಟೆಲ್ಲ ಕಷ್ಟಪಡಬೇಕಾಯಿತು.
2020ರ ಆಗಸ್ಟ್ನಲ್ಲಿ ಸಂಜಯ್ ದತ್ ಅವರಿಗೆ ಶ್ವಾಸಕೋಶದ ಕ್ಯಾನ್ಸರ್ ಇರುವುದು ತಿಳಿದುಬಂತು. ವಿಷಯ ಗೊತ್ತಾದಾಗ ಆರಂಭದಲ್ಲಿ ಅವರು ತೀವ್ರ ಆಘಾತಕ್ಕೆ ಒಳಗಾಗಿದ್ದರು. ಆ ಕುರಿತಾಗಿಯೂ ಇತ್ತೀಚೆಗಿನ ಸಂದರ್ಶನದಲ್ಲಿ ಅವರು ಹೇಳಿಕೊಂಡಿದ್ದಾರೆ. ಪರೀಕ್ಷೆ ಮಾಡಿದ ಬಳಿಕ ಇದು ಕ್ಯಾನ್ಸರ್ ಅಲ್ಲ ಎಂದು ವೈದ್ಯರು ಹೇಳಲಿ ಅಂತ ಸಂಜಯ್ ದತ್ ಅಂದುಕೊಳ್ಳುತ್ತಿದ್ದರು. ಆಗಲೇ ವೈದ್ಯರು ಕ್ಯಾನ್ಸರ್ ಇದೆ ಎಂಬುದನ್ನು ದೃಢಪಡಿಸಿದ್ದರು. ‘ನಾನು ಎರಡು-ಮೂರು ಗಂಟೆಗಳ ಕಾಲ ಅಳುತ್ತಿದ್ದೆ. ನನಗೆ ನನ್ನ ಮಕ್ಕಳು ಹಾಗೂ ಹೆಂಡತಿಯ ಬಗ್ಗೆ ಚಿಂತೆ ಕಾಡುತ್ತಿತ್ತು. ನಾನು ವೀಕ್ ಆಗುವುದಿಲ್ಲ ಎಂದೆ. ನಾನು ಅಮೇರಿಕಾದಲ್ಲಿ ಚಿಕಿತ್ಸೆ ಪಡೆಯಲು ನಿರ್ಧರಿಸಿದೆ. ಆದರೆ ಅವರಿಗೆ ವೀಸಾ ಸಿಗಲಿಲ್ಲ (ಆ ಸಂದರ್ಭದಲ್ಲಿ ಕೊವಿಡ್ ಹೆಚ್ಚಿದ್ದ ಕಾರಣ ಅಮೆರಿಕ ತನ್ನ ದೇಶಕ್ಕೆ ಬರುವವರ ಮೇಲೆ ನಿರ್ಬಂಧ ಹೇರಿತ್ತು). ನನಗೆ ಹೃತಿಕ್ ತಂದೆ ರಾಕೇಶ್ ರೋಷನ್ ಅವರು ವೈದ್ಯರನ್ನೊಬ್ಬರನ್ನು ರೆಫರ್ ಮಾಡಿದರು’ ಎಂದಿದ್ದಾರೆ ಸಂಜಯ್ ದತ್.
ಇದನ್ನೂ ಓದಿ:
ಬಾಯ್ಫ್ರೆಂಡ್ ಕಳೆದುಕೊಂಡಿದ್ದ ಸಂಜಯ್ ದತ್ ಪುತ್ರಿಗೆ ಅಭಿಮಾನಿಯ ಪ್ರಪೋಸ್; ಒಪ್ಪಿಕೊಂಡ್ರಾ ತ್ರಿಶಾಲಾ?
ಅಬ್ಬಬ್ಬಾ.. ಎಷ್ಟೊಂದು ಭಯಾನಕ ಅಧೀರನ ಲುಕ್; ಇಲ್ಲಿವೆ‘ಕೆಜಿಎಫ್ 2’ ನಟ ಸಂಜಯ್ ದತ್ ಫೋಟೋಗಳು