ಒಂದು ಸಿನಿಮಾ ಗೆದ್ದರೆ ಹಲವರ ಜೀವನ ಸಾಗುತ್ತದೆ. ಅದೇ ಒಂದು ಸಿನಿಮಾ ಸೋತರೆ ಅನೇಕರ ಬದುಕಿಗೆ ತೊಂದರೆ ಆಗುತ್ತದೆ. ಅದಕ್ಕೆ ಬೆಸ್ಟ್ ಉದಾಹರಣೆ ಎಂದರೆ ಬಾಲಿವುಡ್ನ ‘ಬಡೆ ಮಿಯಾ ಚೋಟೆ ಮಿಯಾ’ ಸಿನಿಮಾ. ಈ ವರ್ಷ ಏಪ್ರಿಲ್ನಲ್ಲಿ ಬಿಡುಗಡೆ ಆದ ಈ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ನಿರೀಕ್ಷಿತ ಪ್ರಮಾಣದ ಹಣವನ್ನು ಗಳಿಸಲಿಲ್ಲ. ಇದರಿಂದ ನಿರ್ಮಾಪಕರಿಗೆ ದೊಡ್ಡ ನಷ್ಟ ಆಯಿತು. ಅಷ್ಟೇ ಅಲ್ಲದೇ, ನಿರ್ದೇಶಕ ಅಲಿ ಅಬ್ಬಾಸ್ ಜಾಫರ್ ಅವರಿಗೂ ಸಂಭಾವನೆ ಹಣ ತಪ್ಪಿಹೋಯಿತು. ಹಾಗಾಗಿ ಅವರು ತಮಗೆ ನ್ಯಾಯ ಬೇಕು ಎಂದು ಈಗ ಪಟ್ಟು ಹಿಡಿದಿದ್ದಾರೆ.
ವರದಿಗಳ ಪ್ರಕಾರ, ‘ಬಡೆ ಮಿಯಾ ಚೋಟೆ ಮಿಯಾ’ ಸಿನಿಮಾದ ನಿರ್ದೇಶಕ ಅಲಿ ಅಬ್ಬಾಸ್ ಜಾಫರ್ ಅವರು ನಿರ್ದೇಶಕರ ಸಂಘಕ್ಕೆ ಪತ್ರ ಬರೆದು ತಮ್ಮ ಅಳಲು ತೋಡಿಕೊಂಡಿದ್ದಾರೆ. ಒಪ್ಪಂದದ ಪ್ರಕಾರ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಕ್ಕಾಗಿ ಅಲಿ ಅಬ್ಬಾಸ್ ಜಾಫರ್ ಅವರಿಗೆ 7.3 ಕೋಟಿ ರೂಪಾಯಿ ಸಂಭಾವನೆ ನೀಡಬೇಕಿತ್ತು. ಆದರೆ ತಮಗೆ ಆ ಹಣವನ್ನು ನಿರ್ಮಾಪಕರು ನೀಡಿಲ್ಲ ಎಂದು ಅಲಿ ಅಬ್ಬಾಸ್ ಜಾಫರ್ ಆರೋಪಿಸಿದ್ದಾರೆ.
‘ಬಡೆ ಮಿಯಾ ಚೋಟೆ ಮಿಯಾ’ ಸಿನಿಮಾದಲ್ಲಿ ಅಕ್ಷಯ್ ಕುಮಾರ್, ಟೈಗರ್ ಶ್ರಾಫ್, ಪೃಥ್ವಿರಾಜ್ ಸುಕುಮಾರನ್, ಮಾನುಷಿ ಚಿಲ್ಲರ್, ಸೋನಾಕ್ಷಿ ಸಿನ್ಹಾ ಮುಂತಾದವರು ನಟಿಸಿದ್ದಾರೆ. ಭಾರಿ ಬಜೆಟ್ನಲ್ಲಿ ಈ ಸಿನಿಮಾ ನಿರ್ಮಾಣ ಮಾಡಲಾಯಿತು. ಅಂದಾಜು 350 ಕೋಟಿ ರೂಪಾಯಿ ಹಣವನ್ನು ಈ ಚಿತ್ರಕ್ಕಾಗಿ ಸುರಿಯಲಾಯಿತು. ಆದರೆ ಬಾಕ್ಸ್ ಆಫೀಸ್ನಲ್ಲಿ ಗಳಿಸಿದ್ದು ಕೇವಲ 102 ಕೋಟಿ ರೂಪಾಯಿ ಮಾತ್ರ.
ಇದನ್ನೂ ಓದಿ: 45 ಕೋಟಿ ರೂ. ಬಜೆಟ್ನ ಸಿನಿಮಾದ ಕಲೆಕ್ಷನ್ ಬರೀ 45 ಸಾವಿರ ರೂ; ಅತಿ ದೊಡ್ಡ ಫ್ಲಾಪ್
‘ಪೂಜಾ ಎಂಟರ್ಟೇನ್ಮೆಂಟ್’ ಸಂಸ್ಥೆಯ ಜಾಕಿ ಭಗ್ನಾನಿ ಮತ್ತು ವಶು ಭಗ್ನಾನಿ ಅವರು ‘ಬಡೆ ಮಿಯಾ ಚೋಟೆ ಮಿಯಾ’ ಸಿನಿಮಾವನ್ನು ನಿರ್ಮಾಣ ಮಾಡಿದರು. ಆ ಸಿನಿಮಾದಿಂದ ಅವರಿಗೆ ದೊಡ್ಡ ನಷ್ಟ ಆಗಿದೆ. ಆ ಕಾರಣದಿಂದ ತಮ್ಮ ಸಂಸ್ಥೆಯಲ್ಲಿ ಕೆಲಸ ಮಾಡಿದ ಅನೇಕರಿಗೆ ಸಂಬಳ ನೀಡಲು ಅವರಿಗೆ ಸಾಧ್ಯವಾಗಿಲ್ಲ. ಅಷ್ಟೇ ಅಲ್ಲದೇ, ಮುಂಬೈನಲ್ಲಿ ಇರುವ ಆಸ್ತಿಯನ್ನು ಮಾರಿಕೊಳ್ಳುವ ಪರಿಸ್ಥಿತಿ ಅವರಿಗೆ ಬಂತು. ಈಗ ನಿರ್ದೇಶಕ ಅಲಿ ಅಬ್ಬಾಸ್ ಜಾಫರ್ಗೆ ಅವರು ಸಂಬಳ ಕೊಡದೇ ಇರುವುದು ಕೂಡ ಬೆಳಕಿಗೆ ಬಂದಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.