45 ಕೋಟಿ ರೂ. ಬಜೆಟ್​ನ ಸಿನಿಮಾದ ಕಲೆಕ್ಷನ್ ಬರೀ 45 ಸಾವಿರ ರೂ; ಅತಿ ದೊಡ್ಡ ಫ್ಲಾಪ್

‘ದಿ ಲೇಡಿ ಕಿಲ್ಲರ್​’ ಸಿನಿಮಾದಲ್ಲಿ ಅರ್ಜುನ್​ ಕಪೂರ್​ ಹಾಗೂ ಭೂಮಿ ಪೆಡ್ನೆಕರ್​ ಅಭಿನಯಿಸಿದ್ದಾರೆ. ಫ್ರೀಯಾಗಿ ಕೊಟ್ಟರೂ ಜನರು ಈ ಸಿನಿಮಾವನ್ನು ನೋಡುತ್ತಿಲ್ಲ. ‘ಇಷ್ಟು ಕೆಟ್ಟ ಸಿನಿಮಾವನ್ನು ಹೇಗೆ ನೋಡಲು ಸಾಧ್ಯ’ ಎಂದು ಜನರು ಕಮೆಂಟ್​ ಮಾಡುತ್ತಿದ್ದಾರೆ. ಚಿತ್ರಮಂದಿರದಲ್ಲಿ ಫ್ಲಾಪ್​ ಆದ ಈ ಸಿನಿಮಾ ಈಗ ಸೋಶಿಯಲ್​ ಮೀಡಿಯಾದಲ್ಲಿ ಟ್ರೋಲ್​ ಆಗಿದೆ.

45 ಕೋಟಿ ರೂ. ಬಜೆಟ್​ನ ಸಿನಿಮಾದ ಕಲೆಕ್ಷನ್ ಬರೀ 45 ಸಾವಿರ ರೂ; ಅತಿ ದೊಡ್ಡ ಫ್ಲಾಪ್
ಅರ್ಜುನ್​ ಕಪೂರ್​
Follow us
ಮದನ್​ ಕುಮಾರ್​
|

Updated on: Sep 03, 2024 | 8:12 PM

ಖ್ಯಾತ ನಿರ್ಮಾಪಕ ಬೋನಿ ಕಪೂರ್​ ಅವರ ಪುತ್ರ ಅರ್ಜುನ್​ ಕಪೂರ್ ಬಾಲಿವುಡ್​ನಲ್ಲಿ ಇನ್ನೂ ಸರಿಯಾಗಿ ನೆಲೆ ಕಂಡುಕೊಂಡಿಲ್ಲ. ಸಿನಿಮಾಗಳಿಂದ ಸುದ್ದಿ ಆಗಿದ್ದಕ್ಕಿಂತಲೂ ಮಲೈಕಾ ಅರೋರಾ ಜೊತೆಗಿನ ರಿಲೇಷನ್​ಶಿಪ್​ ಕಾರಣಕ್ಕೆ ಅರ್ಜುನ್​ ಕಪೂರ್​ ಸುದ್ದಿ ಆಗಿದ್ದೇ ಹೆಚ್ಚು. ಭಾರತದ ಅತಿ ದೊಡ್ಡ ಫ್ಲಾಪ್​ ಸಿನಿಮಾ ನೀಡಿದ ಕುಖ್ಯಾತಿ ಕೂಡ ಅವರ ಹೆಸರಲ್ಲೇ ಇದೆ! ಹೌದು, ಅರ್ಜುನ್​ ಕಪೂರ್​ ನಟನೆಯ ‘ದಿ ಲೇಡಿ ಕಿಲ್ಲರ್​’ ಸಿನಿಮಾ 2023ರ ನವೆಂಬರ್​ನಲ್ಲಿ ಅಟ್ಟರ್​ ಫ್ಲಾಪ್​ ಆಗಿದ್ದೂ ಅಲ್ಲದೇ ಈಗ ಮತ್ತೆ ಟ್ರೋಲ್​ ಆಗುತ್ತಿದೆ.

ಲಭ್ಯವಿರುವ ಮಾಹಿತಿ ಪ್ರಕಾರ, ‘ದಿ ಲೇಡಿ ಕಿಲ್ಲರ್​’ ಸಿನಿಮಾ ನಿರ್ಮಾಣ ಆಗಿದ್ದು 45 ಕೋಟಿ ರೂಪಾಯಿ ಬಜೆಟ್​ನಲ್ಲಿ. ಆದರೆ 2023ರ ನವೆಂಬರ್​ 3ರಂದು ಬಿಡುಗಡೆ ಆದ ಈ ಸಿನಿಮಾ ಬಾಕ್ಸ್​ ಆಫೀಸ್​ನಲ್ಲಿ ಗಳಿಸಿದ್ದು ಕೇವಲ 45 ಸಾವಿರ ರೂಪಾಯಿ! ಆದ್ದರಿಂದಲೇ ಇದನ್ನು ಭಾರತೀಯ ಚಿತ್ರರಂಗದ ಅತಿ ದೊಡ್ಡ ಫ್ಲಾಪ್​ ಸಿನಿಮಾ ಎಂದು ಕರೆಯಲಾಗುತ್ತಿದೆ. ಈಗ ಇದೇ ಸಿನಿಮಾವನ್ನು ಯೂಟ್ಯೂಬ್​ನಲ್ಲಿ ಉಚಿತವಾಗಿ ರಿಲೀಸ್​ ಮಾಡಲಾಗಿದೆ.

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ‘ದಿ ಲೇಡಿ ಕಿಲ್ಲರ್​’ ಸಿನಿಮಾ ಒಟಿಟಿಯಲ್ಲಿ ವೀಕ್ಷಣಗೆ ಲಭ್ಯವಾಗಬೇಕಿತ್ತು. ನೆಟ್​ಫ್ಲಿಕ್ಸ್​ ಜೊತೆ ಮಾತುಕತೆ ನಡೆದಿದೆ ಎಂದು ಕೂಡ ಹೇಳಲಾಗಿತ್ತು. ಆದರೆ ಅಂತಿಮವಾಗಿ ಡೀಲ್​ ಕುದುರಿಲ್ಲ ಎನಿಸುತ್ತದೆ. ಹಾಗಾಗಿ ಉಚಿತವಾಗಿ ಯೂಟ್ಯೂಬ್​ ಮೂಲಕ ಈ ಸಿನಿಮಾವನ್ನು ಅಪ್​ಲೋಡ್​ ಮಾಡಲಾಗಿದೆ. ಯೂಟ್ಯೂಬ್​ನಲ್ಲಿ ಫ್ರೀಯಾಗಿ ರಿಲೀಸ್​ ಮಾಡಿದರೂ ಜನರು ಹಿಗ್ಗಾಮುಗ್ಗಾ ಟ್ರೋಲ್​ ಮಾಡುತ್ತಿದ್ದಾರೆ.

ಇದನ್ನೂ ಓದಿ: ಅರ್ಜುನ್​ ಕಪೂರ್​ ಬಳಿಕ ಹೊಸ ವ್ಯಕ್ತಿ ಜತೆ ಮಲೈಕಾ ಅರೋರಾ ಡೇಟಿಂಗ್​; ಫೋಟೋ ವೈರಲ್​

ಅರ್ಜುನ್​ ಕಪೂರ್​ ಮತ್ತು ಭೂಮಿ ಪೆಡ್ನೆಕರ್​ ಅವರು ಜೋಡಿಯಾಗಿ ‘ದಿ ಲೇಡಿ ಕಿಲ್ಲರ್​’ ಸಿನಿಮಾದಲ್ಲಿ ನಟಿಸಿದ್ದಾರೆ. ಅಜಯ್​ ಬಹ್ಲ್​ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಸಿನಿಮಾ ತುಂಬ ಕಳಪೆ ಆಗಿದೆ ಹಾಗೂ ಅಪೂರ್ಣವಾಗಿದೆ ಎಂಬ ಕಾರಣಕ್ಕೆ ಜನರು ಟ್ರೋಲ್​ ಮಾಡುತ್ತಿದ್ದಾರೆ. ‘ಅಟ್ಟರ್​ ಫ್ಲಾಪ್​ ಆಗುವುದರಲ್ಲಿ ಕಂಗನಾ ನಟನೆ ‘ಧಾಕಡ್​’ ಸಿನಿಮಾವನ್ನು ಮೀರಿಸಿದ ಖ್ಯಾತಿ ‘ದಿ ಲೇಡಿ ಕಿಲ್ಲರ್​’ ಸಿನಿಮಾಗೆ ಸಿಕ್ಕಿದೆ’ ಎಂದು ನೆಟ್ಟಿಗರು ಕಮೆಂಟ್​ ಮಾಡುತ್ತಿದ್ದಾರೆ.

ಟಿ-ಸಿರೀಸ್​ ಯೂಟ್ಯೂಬ್​ ಚಾನೆಲ್​ ಮೂಲಕ ‘ದಿ ಲೇಡಿ ಕಿಲ್ಲರ್​’ ಚಿತ್ರವನ್ನು ಉಚಿತವಾಗಿ ರಿಲೀಸ್​ ಮಾಡಲಾಗಿದೆ. ಒಂದು ದಿನದಲ್ಲಿ ಅಂದಾಜು 2.7 ಲಕ್ಷ ಬಾರಿ ಈ ಸಿನಿಮಾ ವೀಕ್ಷಣೆ ಕಂಡಿದೆ. ಫ್ರೀ ಕೊಟ್ಟರೂ ಕೂಡ ಇಷ್ಟು ಕಳಪೆ ನಂಬರ್​ ಪಡೆದಿರುವುದು ಟ್ರೋಲ್​ಗೆ ಕಾರಣ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.