ಯಶ್, ರಣ್ಬೀರ್ ಕಪೂರ್, ಸಾಯಿ ಪಲ್ಲವಿ ಸೇರಿದಂತೆ ಹಲವು ದೊಡ್ಡ ತಾರೆಯರು ನಟಿಸುತ್ತಿರುವ ‘ರಾಮಾಯಣ’ ಸಿನಿಮಾ ಭಾರತದ ಈವರೆಗಿನ ಅತಿ ದೊಡ್ಡ ಬಜೆಟ್ನ ಸಿನಿಮಾ ಆಗಿದೆ. ವಿಶೇಷವೆಂದರೆ ಈ ಸಿನಿಮಾಕ್ಕೆ ನಟ ಯಶ್ ಸಹ ಬಂಡವಾಳ ಹೂಡಿದ್ದಾರೆ. ಮಾನ್ಸ್ಟರ್ ಮೈಂಡ್ಸ್ ನಿರ್ಮಾಣ ಸಂಸ್ಥೆ ‘ರಾಮಾಯಣ’ ಸಿನಿಮಾದ ಸಹ ನಿರ್ಮಾಣ ಮಾಡುತ್ತಿದೆ. ಬಾಲಿವುಡ್ ನಟ ಬಾಬಿ ಡಿಯೋಲ್ ಈ ಸಿನಿಮಾದ ಭಾಗವಾಗಿರಲಿಲ್ಲಾದ್ದರೆ ಎಂಬ ಸುದ್ದಿ ಈ ಹಿಂದೆ ಹರಿದಾಡಿತ್ತು, ಆದರೆ ಸುದ್ದಿಯನ್ನು ಬಾಬಿ ಡಿಯೋಲ್ ತಂಡ ನಿರಾಕರಿಸಿತ್ತು, ಇದೀಗ ಸ್ವತಃ ಬಾಬಿ ಡಿಯೋಲ್ ಈ ವಿಷಯವನ್ನು ಖಾತ್ರಿಪಡಿಸಿದ್ದಾರೆ. ಮಾತ್ರವಲ್ಲದೆ ಸಿನಿಮಾದ ಬಗ್ಗೆ ಗುಟ್ಟೊಂದನ್ನು ಬಿಟ್ಟುಕೊಟ್ಟಿದ್ದಾರೆ.
‘ರಾಮಾಯಣ’ ಸಿನಿಮಾವನ್ನು ಬಹಳ ಗುಟ್ಟಾಗಿ ಚಿತ್ರೀಕರಣ ಮಾಡಲಾಗುತ್ತಿದೆ. ಸಿನಿಮಾದ ಕೇವಲ ಒಂದು ಚಿತ್ರವಷ್ಟೆ ಈವರೆಗೆ ಹೊರ ಬಂದಿದೆ. ನಟ ಯಶ್ ಸಿನಿಮಾದಲ್ಲಿ ರಾವಣನ ಪಾತ್ರದಲ್ಲಿ ನಟಿಸುತ್ತಿರುವುದು ಖಾತ್ರಿಯಾಗಿದ್ದು, ಸ್ವತಃ ಯಶ್ ಈ ವಿಷಯವನ್ನು ಹಾಲಿವುಡ್ ರಿಪೋರ್ಟರ್ ಯೂಟ್ಯೂಬ್ ಚಾನೆಲ್ನ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಬಾಬಿ ಡಿಯೋಲ್ ಈ ಸಿನಿಮಾದ ಮತ್ತೊಂದು ಪ್ರಮುಖ ಪಾತ್ರವಾದ ಕುಂಭಕರ್ಣನ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ಈ ಬಗ್ಗೆ ಮಾತನಾಡಿರುವ ಬಾಬಿ ಡಿಯೋಲ್, ‘ರಾಮಾಯಣ ಬಹಳ ದೊಡ್ಡ ಪ್ರಾಜೆಕ್ಟ್, ಅವರು ಆ ಸಿನಿಮಾವನ್ನು ಹಾಲಿವುಡ್ನ ‘ಅವತಾರ್’, ‘ಪ್ಲಾನೆಟ್ ಆಫ್ ದಿ ಏಪ್ಸ್’ ರೀತಿ ಮಾಡುತ್ತಿದ್ದಾರೆ. ಸಾಕಷ್ಟು ತಾಂತ್ರಿಕ ವಿಷಯಗಳು ಸಿನಿಮಾದಲ್ಲಿವೆ. ಸಿನಿಮಾದ ಚಿತ್ರಕತೆಗಾರರು, ತಂತ್ರಜ್ಞರು ಮತ್ತು ನಿರ್ದೇಶಕರು, ಸಿನಿಮಾ ಹೇಗೆ ಬರಬೇಕು, ಪಾತ್ರಗಳು ಹೇಗೆ ಕಾಣಿಸಿಕೊಳ್ಳಬೇಕು ಎಂಬುದರ ಬಗ್ಗೆ ಬಹಳ ಶಿಸ್ತಿನಿಂದ ಇದ್ದಾರೆ’ ಎಂದಿದ್ದಾರೆ ಬಾಬಿ ಡಿಯೋಲ್.
ಇದನ್ನೂ ಓದಿ:‘ಕಂಗುವ’ ಸಿನಿಮಾದ ವಿಲನ್ ಪಾತ್ರಕ್ಕೆ ಬಾಬಿ ಡಿಯೋಲ್ ತಯಾರಿ ಹೀಗಿತ್ತು
ಬಾಬಿ ಡಿಯೋಲ್ ‘ರಾಮಾಯಣ’ ಸಿನಿಮಾದಲ್ಲಿ ಕುಂಭಕರ್ಣನ ಪಾತ್ರದಲ್ಲಿ ನಟಿಸಲಿದ್ದಾರಂತೆ. ಅವರ ಸ್ಕ್ರೀನ್ ಟೆಸ್ಟ್ ಮುಂಬೈನ ಕೆಸಿ ಕಾಲೇಜಿನಲ್ಲಿ ನಿರ್ಮಿಸಲಾಗಿದ್ದ ವಿಶೇಷ ಆಡಿಟೋರಿಯಂನಲ್ಲಿ ಮಾಡಲಾಯ್ತಂತೆ. ಸಿನಿಮಾವನ್ನು ಅತ್ಯಾಧುನಿಕ ತಂತ್ರಜ್ಞಾನ ಬಳಸಿ ನಿರ್ಮಾಣ ಮಾಡಲಾಗುತ್ತಿದೆ ಎಂದಿರುವ ಬಾಬಿ ಡಿಯೋಲ್, ‘ಸಿನಿಮಾ ನೋಡುವಾಗ ನಿಜವಾಗಿಯೂ ನಮ್ಮ ಕಣ್ಣೆದುರೇ ಇವೆಲ್ಲ ನಡೆಯುತ್ತಿವೆ ಎಂಬ ಭಾವ ಬರುವಂತೆ ತಂತ್ರಜ್ಞಾನವನ್ನು ಬಳಸಲಾಗಿದೆ, ಇದು ಅದ್ಭುತವಾದ ಸಿನಿಮಾ ಆಗಿರಲಿದ್ದು, ಎಲ್ಲರಿಗೂ ಇಷ್ಟವಾಗಲಿದೆ’ ಎಂದಿದ್ದಾರೆ ಬಾಬಿ ಡಿಯೋಲ್.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ