
ರಣವೀರ್ ಸಿಂಗ್ (Ranveer Singh) ನಟನೆಯ ‘83’ ಸಿನಿಮಾ (83 Movie) ದೊಡ್ಡ ಮಟ್ಟದ ಓಪನಿಂಗ್ ಪಡೆದುಕೊಂಡಿದೆ. ಕಬೀರ್ ಖಾನ್ ನಿರ್ದೇಶನ ಮಾಡಿರುವ ಈ ಚಿತ್ರದಲ್ಲಿ ಕಪಿಲ್ ದೇವ್ ಅವರ ಪಾತ್ರವನ್ನು ರಣವೀರ್ ಸಿಂಗ್ ನಿಭಾಯಿಸಿದ್ದಾರೆ. ಕ್ರಿಕೆಟ್ ಪ್ರಿಯರಿಂದ ಈ ಚಿತ್ರಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಆದರೆ ‘83’ ಸಿನಿಮಾವನ್ನು ಬಹಿಷ್ಕರಿಸುವಂತೆ ಒಂದಷ್ಟು ಜನರು ಅಭಿಯಾನ ನಡೆಸುತ್ತಿದ್ದಾರೆ. #Boycott83 ಹ್ಯಾಶ್ ಟ್ಯಾಗ್ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಈ ಚಿತ್ರವನ್ನು ವಿರೋಧಿಸಲಾಗುತ್ತಿದೆ. ಟ್ವಿಟರ್ನಲ್ಲಿ #Boycott83 ಹ್ಯಾಶ್ ಟ್ಯಾಗ್ ಟ್ರೆಂಡ್ (Twitter Trending) ಆಗಿದೆ. ಸುಶಾಂತ್ ಸಿಂಗ್ ರಜಪೂತ್ (Sushant Singh Rajput) ಅಭಿಮಾನಿಗಳು ಕೂಡ ಈ ಸಿನಿಮಾವನ್ನು ಬಹಿಷ್ಕರಿಸುವಂತೆ ಒತ್ತಾಯಿಸುತ್ತಿದ್ದಾರೆ.
‘83’ ಚಿತ್ರವನ್ನು ಜನರು ವಿರೋಧಿಸಲು ಅನೇಕ ಕಾರಣಗಳಿವೆ. ಆದರೆ ಯಾವುದೂ ಕೂಡ ಹೊಸ ಕಾರಣ ಅಲ್ಲ. ಹಳೇ ಘಟನೆಗಳನ್ನೆಲ್ಲ ನೆಪ ಮಾಡಿಕೊಂಡು ಈ ಚಿತ್ರವನ್ನು ಬಹಿಷ್ಕರಿಸುವಂತೆ ಒಂದು ವರ್ಗದ ನೆಟ್ಟಿಗರು ಪಟ್ಟು ಹಿಡಿದಿದ್ದಾರೆ. ಈ ಹಿಂದೆ ರಣವೀರ್ ಸಿಂಗ್ ಅವರು ಒಂದು ಜಾಹೀರಾತಿನಲ್ಲಿ ನಟಿಸಿದ್ದರು. ಅದರಲ್ಲಿ ಸುಶಾಂತ್ ಸಿಂಗ್ ರಜಪೂತ್ ಅವರಿಗೆ ಪರೋಕ್ಷವಾಗಿ ಅವಮಾನ ಮಾಡಲಾಗಿತ್ತು ಎಂಬುದು ಸುಶಾಂತ್ ಅಭಿಮಾನಿಗಳ ಆರೋಪವಾಗಿತ್ತು. ಅದನ್ನೇ ಮುಂದಿಟ್ಟುಕೊಂಡು ಈಗ ‘83’ ಸಿನಿಮಾವನ್ನು ವಿರೋಧಿಸಲಾಗುತ್ತಿದೆ.
ಈ ಸಿನಿಮಾದಲ್ಲಿ ಕಪಿಲ್ ದೇವ್ ಪತ್ನಿಯ ಪಾತ್ರವನ್ನು ದೀಪಿಕಾ ಪಡುಕೋಣೆ ನಿಭಾಯಿಸಿದ್ದಾರೆ. ಪ್ರತಿ ಬಾರಿ ಅವರ ಸಿನಿಮಾಗಳು ರಿಲೀಸ್ ಆದಾಗ ಒಂದಷ್ಟು ಜನರು ಕಿಡಿಕಾರುತ್ತಾರೆ. ಈ ಹಿಂದೆ ಅವರು ಜೆಎನ್ಯು ಕ್ಯಾಂಪಸ್ಗೆ ಭೇಟಿ ನೀಡಿದ್ದೇ ಅದಕ್ಕೆ ಕಾರಣ. ಈಗ ಮತ್ತೆ ಜೆಎನ್ಯು ವಿಚಾರವನ್ನು ಎಳೆದುತಂದು ‘83’ ಸಿನಿಮಾ ಬಹಿಷ್ಕರಿಸುವಂತೆ ಕೆಲವರು ಅಭಿಯಾನ ಮಾಡುತ್ತಿದ್ದಾರೆ.
ಯಾರು ಎಷ್ಟೇ ವಿರೋಧಿಸಿದರೂ ‘83’ ಚಿತ್ರಕ್ಕೆ ಪ್ರೇಕ್ಷಕರಿಂದ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ. ಅನೇಕ ಕಡೆಗಳಲ್ಲಿ ಈ ಸಿನಿಮಾ ಹೌಸ್ಫುಲ್ ಪ್ರದರ್ಶನ ಕಾಣುತ್ತಿದೆ. ಹಿಂದಿಯಲ್ಲಿ ತಯಾರಾಗಿರುವ ಈ ಚಿತ್ರ ಕನ್ನಡ, ತಮಿಳು, ಮಲಯಾಳಂ ಮತ್ತು ತೆಲುಗು ಭಾಷೆಗೆ ಡಬ್ ಆಗಿ ತೆರೆಕಂಡಿದೆ. 1983ರ ವಿಶ್ವಕಪ್ನಲ್ಲಿ ಭಾರತ ತಂಡ ಟ್ರೋಫಿ ಗೆದ್ದ ಘಟನೆಯನ್ನು ಆಧರಿಸಿ ‘83’ ಮೂಡಿಬಂದಿದೆ. ರಣವೀರ್ ಸಿಂಗ್ ಅಭಿನಯಕ್ಕೆ ವಿಮರ್ಶಕರಿಂದ ಮೆಚ್ಚುಗೆ ಸಿಗುತ್ತಿದೆ.
ಕರ್ನಾಟಕದಲ್ಲಿ ಈ ಚಿತ್ರವನ್ನು ಕಿಚ್ಚ ಸುದೀಪ್ ಅವರು ಅರ್ಪಿಸಿದ್ದಾರೆ. ಶಾಲಿನಿ ಆರ್ಟ್ಸ್ ಹಾಗೂ ರಿಲಯನ್ಸ್ ಎಂಟರ್ಟೇನ್ಮೆಂಟ್ ಸಂಸ್ಥೆ ವಿತರಣೆಯ ಜವಾಬ್ದಾರಿಯನ್ನು ಹೊತ್ತುಕೊಂಡಿವೆ. ದೀಪಿಕಾ ಪಡುಕೋಣೆ, ಕಬೀರ್ ಖಾನ್, ವಿಷ್ಣು ವರ್ಧನ್ ಇಂದುರಿ, ಸಾಜಿದ್ ನಾಡಿಯದ್ವಾಲ, ಫಾಂಟಮ್ ಫಿಲ್ಮ್ಸ್ ಹಾಗೂ 83 ಫಿಲ್ಮ್ ಲಿಮಿಟೆಡ್ ಮೂಲಕ ಈ ಚಿತ್ರ ನಿರ್ಮಾಣ ಆಗಿದೆ.
ಇದನ್ನೂ ಓದಿ:
ಬಿಡುಗಡೆಗೂ ಮುನ್ನ ‘83’ ಚಿತ್ರ ನೋಡಲು ನಿರಾಕರಿಸಿದ್ದ 1983 ವಿಶ್ವಕಪ್ ಟೀಮ್ ಆಟಗಾರರು; ಕಾರಣ ಏನು?
83 Movie Review: ಇದು ಬರೀ ಸಿನಿಮಾ ಅಲ್ಲ; ಕ್ರಿಕೆಟ್ಪ್ರಿಯರ ಎಮೋಷನ್, ವಿಶ್ವಕಪ್ ಗೆಲುವಿನ ಹೊಸ ಸೆಲೆಬ್ರೇಷನ್