
ನಿತೇಶ್ ತಿವಾರಿ ನಿರ್ದೇಶಿಸಿ, ಯಶ್, ರಣ್ಬೀರ್ ಕಪೂರ್, ಸಾಯಿ ಪಲ್ಲವಿ ನಟನೆ ಮಾಡಿರುವ ‘ರಾಮಾಯಣ’ ಸಿನಿಮಾ ಹಿಂದಿ, ಇಂಗ್ಲೀಷ್ ಸೇರಿದಂತೆ ಹಲವು ಭಾಷೆಗಳಲ್ಲಿ ಡಬ್ ಆಗಿ ರಿಲೀಸ್ ಆಗಿದೆ. ಆದರೆ ಸಿನಿಮಾ ಅನ್ನು ಯಾವುದೇ ಭಾಷೆಯಲ್ಲಿ ನೋಡಿದರೂ ನಟ-ನಟಿಯರ ತುಟಿ ಚಲನೆ ಅಯಾ ಭಾಷೆಗೆ ತಕ್ಕುದಾಗಿದೆ. ಕನ್ನಡ ಆವೃತ್ತಿಯನ್ನು ವೀಕ್ಷಿಸಿದರೆ ಪಾತ್ರಧಾರಿಗಳು ಕನ್ನಡದಲ್ಲೇ ಮಾತನಾಡಿದಂತಿದೆ ತುಟಿ ಚಲನೆ. ಆದರೆ ಸಿನಿಮಾ ಅನ್ನು ಚಿತ್ರೀಕರಣ ಮಾಡಿರುವುದು ಕೇವಲ ಹಿಂದಿ ಭಾಷೆಯಲ್ಲಿ ಮಾತ್ರ. ಇದು ಸಾಧ್ಯವಾಗಿರುವುದು ‘ಬ್ರಹ್ಮ ಎಐ’ ಮೂಲಕ.
‘ರಾಮಾಯಣ’ ಸಿನಿಮಾವನ್ನು ಹಿಂದಿಯಲ್ಲಿ ಮಾತ್ರವೇ ಚಿತ್ರೀಕರಣ ಮಾಡಲಾಗಿತ್ತು. ಆದರೆ ‘ಬ್ರಹ್ಮ ಎಐ’ ಹೆಸರಿನ ಕೃತಕ ಬುದ್ಧಿಮತ್ತೆ ಬಳಕೆ ಮಾಡಿ ಆಯಾ ಭಾಷೆಗೆ ತಕ್ಕಂತೆ ಪಾತ್ರಧಾರಿಗಳ ತುಟಿ ಚಲನೆಯನ್ನು ಸಂಭಾಷಣೆಗಳಿಗೆ ತಕ್ಕಂತೆ ಹೊಂದಿಸಲಾಗಿದೆ. ಅದ್ಯಾವ ಮಟ್ಟಿಗೆ ಹೊಂದಿಕೆ ಆಗಿದೆಯೆಂದರೆ ಸಿನಿಮಾ ಅನ್ನು ಆಯಾ ಭಾಷೆಯಲ್ಲೇ ಚಿತ್ರೀಕರಣ ಮಾಡಿದ್ದಾರೇನೋ ಎಂಬ ಭಾವ ಮೂಡುವಂತಿದೆ.
ಇದನ್ನು ಸಾಧ್ಯವಾಗಿಸಿರುವ ‘ಬ್ರಹ್ಮ ಎಐ’ ಸಾಮಾನ್ಯ ಎಐ ಅಲ್ಲ. ಇದನ್ನು ಸಿನಿಮಾದ ನಿರ್ಮಾಪಕ ನಮಿತ್ ಮಲ್ಹೋತ್ರಾ ಅವರ ವಿಶ್ವ ಪ್ರಸಿದ್ಧ ವಿಎಫ್ಎಕ್ಸ್ ಸಂಸ್ಥೆಯಾದ ಡಿಎನ್ಇಜಿ ಸಹ ಮಾಲೀಕತ್ವ ಹೊಂದಿದೆ. ಸಾಮಾನ್ಯ ಡಬ್ಬಿಂಗ್‌ನಲ್ಲಿ ಭಾಷೆ ಬದಲಾದಾಗ ತುಟಿಗಳು ಮತ್ತು ಮಾತು ಹೊಂದುವುದಿಲ್ಲ. ಆದರೆ ಬ್ರಹ್ಮ ಎಐ ಆ ಸಮಸ್ಯೆನ್ನು ಬಗೆಹರಿಸಿದ್ದು, ಭಾಷೆಗೆ ಅನುಗುಣವಾಗಿ ತುಟಿ ಚಲನೆಯನ್ನು ಕೃತಕವಾಗಿ ಹೊಂದಿಸುತ್ತದೆ. ಹಾಗೆಂದು ಇದು ಕೇವಲ ಲಿಪ್‌ಸಿಂಕ್ ಸಾಧನವಲ್ಲ. ಕಂಪನಿಯು ಇದನ್ನು ‘AI-ನೇಟಿವ್ ಆಪರೇಟಿಂಗ್ ಸಿಸ್ಟಂ’ ಎಂದು ಕರೆಯುತ್ತದೆ.
ಇದನ್ನೂ ಓದಿ:‘ರಾಮಾಯಣ’ ಸಿನಿಮಾ ಎರಡು ಭಾಗದಲ್ಲಿ ಬರುತ್ತಿರುವುದೇಕೆ? ಉತ್ತರಿಸಿದ ನಿತೇಶ್ ತಿವಾರಿ
ಬ್ರಹ್ಮ ಎಐನಲ್ಲಿ ಎರಡು ವಿಧಗಳಿವೆ. ಬ್ರಹ್ಮ ಎಐ ಕೋರ್, ಮತ್ತು ಬ್ರಹ್ಮ ಎಐ ಸ್ಟುಡಿಯೋ. ಈ ಎರಡೂ ವಿಧಗಳು, ಯಾವುದೇ ವಿಷಯವನ್ನು ಅರ್ಥಮಾಡಿಕೊಂಡು ನಿರ್ವಹಿಸುತ್ತವೆ. ಎಐ ಸ್ಟುಡಿಯೋ, ವಿಷುಯಲ್ AI, ಡಿಜಿಟಲ್ ಉತ್ಪನ್ನಗಳು, ಧ್ವನಿ ಮತ್ತು ಬಹುಭಾಷಾ ಪ್ರದರ್ಶನ ತಂತ್ರಜ್ಞಾನಗಳನ್ನು ಒದಗಿಸುತ್ತದೆ.
ಬ್ರಹ ಎಐ ಅನ್ನು ನರಸಿಂಹನ್ ಹೆಸರಿನ ಭಾರತೀಯ ಮೂಲಕ ಎಂಜಿನಿಯರ್ ಅಭಿವೃದ್ಧಿ ಪಡಿಸಿದ್ದಾರೆ. ಇವರು ಬ್ರಿಟಿಷ್-ಭಾರತೀಯ ಉದ್ಯಮಿ ಮತ್ತು ತಂತ್ರಜ್ಞಾನ ಹೂಡಿಕೆದಾರರಾಗಿದ್ದು. ‘ರಾಮಾಯಣ’ ನಿರ್ಮಾಪಕ ನಮಿತ್ ಮಲ್ಹೋತ್ರಾ ಅವರ ಡಿಎನ್ಇಜಿ ಮತ್ತು ಪ್ರೈಮ್ ಫೋಕಸ್ ಟೆಕ್ನಾಲಜೀಸ್ ಗಳು ಈ ಎಐ ಸಂಸ್ಥೆ ಮೇಲೆ ಹೂಡಿಕೆ ಮಾಡಿವೆ.
‘ಬ್ರಹ್ಮ ಎಐ’ ಸಣ್ಣ ಸಂಸ್ಥೆಯಲ್ಲ. ಸೆಪ್ಟೆಂಬರ್ 2026ರಲ್ಲಿ ಕಂಪನಿ ದೊಡ್ಡ ಹೂಡಿಕೆ ಪಡೆದುಕೊಂಡಿದೆ. ನಮಿತ್ ಮಲ್ಹೋತ್ರಾ ಮಾತ್ರವೇ ಅಲ್ಲದೆ ಹಲವು ದೊಡ್ಡ ಸಂಸ್ಥೆಗಳು ಈ ಎಐ ಮೇಲೆ ಹೂಡಿಕೆ ಮಾಡಿವೆ. ವರದಿಗಳ ಪ್ರಕಾರ ಇದು ಕಂಪನಿಯ ಮೌಲ್ಯವನ್ನು ಸುಮಾರು 2 ಬಿಲಿಯನ್ ಡಾಲರ್ ಮೌಲ್ಯದ್ದು ಎನ್ನಲಾಗಿದೆ ಅಂದರೆ ಭಾರತದ 1 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಸಂಸ್ಥೆಯಾಗಿದೆ. ಮುಂದಿನ ದಿನಗಳಲ್ಲಿ ಸಿನಿಮಾ ಡಬ್ಬಿಂಗ್ ಕ್ಷೇತ್ರದಲ್ಲಿ ಈ ಎಐ ಕ್ರಾಂತಿಯನ್ನೇ ಮಾಡಲಿದೆ ಎನ್ನುತ್ತಿದ್ದಾರೆ ಸಿನಿ ಪಂಡಿತರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:54 am, Thu, 12 November 26